Saturday, 10th May 2025

Selection: ಅಗಲಗುರ್ಕಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೋವಿಂದ ಸ್ವಾಮಿ ಅವಿರೋಧ ಆಯ್ಕೆ

ಚಿಕ್ಕಬಳ್ಳಾಪುರ : 19 ಸದಸ್ಯರಿರುವ ಅಗಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ಗೋವಿಂದಸ್ವಾಮಿಯನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಗಲಗುರ್ಕಿ ಗ್ರಾಪಂನಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಹಶೀಲ್ದಾರ್ ಅನಿಲ್ ಅವರು ಗೋವಿಂದಸ್ವಾಮಿ ಹೆಸರು ಘೋಷಣೆ ಮಾಡಿದರು. ಬಳಿಕ ಪಂಚಾ ಯಿತಿ ಮುಂದೆ ಜಮಾಯಿಸಿದ ನೂರಾರು ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿದರು.

ಅಗಲಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯರ ಪರಸ್ಪರ ಸಹಕಾರ ಪ್ರೀತಿ ಮೆಚ್ಚು ಬೇಕಾದಂತಹದ್ದು. ಎಲ್ಲಾ ಸದಸ್ಯರ ಒಮ್ಮತದ ಸಹಕಾರದಿಂದ ಅಧ್ಯಕ್ಷರಾಗಿರುವ ಗೋವಿಂದ ಸ್ವಾಮಿ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಸಾಗಿಸಿ ಮಾದರಿ ಪಂಚಾಯಿತಿ ಮಾಡುವ ವಿಶ್ವಾಸವಿದೆ ಎಂದರು.

ನೂತನ  ಅಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ ತಮಗೆ  ಸಂಪೂರ್ಣ ಬೆಂಬಲ ನೀಡಿ ಅಧ್ಯಕ್ಷನಾಗಲು ಸಹಕರಿಸಿದ ಪಂಚಾಯಿತಿಯ ಎಲ್ಲಾ ಸದಸ್ಯರಿಗೆ ಆಭಾರಿಯಾಗಿದ್ದೇನೆ. ಸಂಸದ ಡಾ.ಕೆ ಸುಧಾಕರ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ ಅವರ ಆಶೀರ್ವಾದಿಂದ ಇಂದು ಗ್ರಾ ಪಂ.ಅಧ್ಯಕ್ಷನಾಗಿದ್ದೇನೆ. ಒಂದು ವರ್ಷದ ಸೀಮಿತ ಅವಧಿ ಯಲ್ಲಿ ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸ ಗಿಟ್ಟಿಸಿಕೊಂಡು ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸ ಲಾಗುವುದು. ಅಗಲಗುರ್ಕಿ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಿ ಜನರಿಗೆ ಮೂಲಸೌಕರ್ಯ ಒದಗಿಸಲು ಪ್ರಥಮ ಆಧ್ಯತೆ ನೀಡ ಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ನೂತನ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅಗಲಗುರ್ಕಿ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಸಾಗಿಸಿ ಜನರಿಗೆ ತಲುಪಬೇಕಾದ ಸೌಕರ್ಯಗಳು ಕಾಲಕಾಲಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಪಾರದರ್ಶಕ ಆಡಳಿತ ನೀಡುವ ಮೂಲಕ ಜನರ ವಿಶ್ವಾಸ ಗಿಟ್ಟಿಸಿಕೊಂಡು ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.

ಈ ಸಂದರ್ಭದಲ್ಲಿ ಪಿ ಡಿ ಒ ಅಶೋಕ್,ಪಂಚಾಯಿತಿ ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ,ಹಿರಿಯ ಸದಸ್ಯರಾದ ಚಂದ್ರಪ್ಪ,ಅಭಿಷೇಕ್,ಚಿಕ್ಕಕಾಡಿಗೇನಹಳ್ಲಿ ಗಿರೀಶ್,ದರ್ಶನ್,ಪಟೆಲ್ ಮಂಜುನಾಥ್,ಪ್ರಕಾಶ್,ಶಿವನಾಗು,ಸಹೋದರ ಶಂಕರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *