ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಅನ್ನದ ಜತೆ ಕಲಸಿ ಉಣ್ಣುವುದಕ್ಕೆ ತಯಾರಿಸುವ ‘ಪಳದ್ಯ’ ಎಂಬ ಮೇಲೋಗರ ನಿಮ್ಮಲ್ಲನೇಕರಿಗೆ ಗೊತ್ತಿದೆ ಎಂದುಕೊಂಡಿದ್ದೇನೆ. ಮಜ್ಜಿಗೆಹುಳಿಗೂ ಪಳದ್ಯಕ್ಕೂ ವ್ಯತ್ಯಾಸವಿದೆಯೇ, ಯಾವ್ಯಾವ ತರಕಾರಿಗಳು ಪಳದ್ಯಕ್ಕೆ ಚೆನ್ನಾಗಿ ಒದಗಿಬರುತ್ತವೆ, ತೆಂಗಿನಕಾಯಿ ರುಬ್ಬಿ ಹಾಕುವುದಿದೆಯೇ ಇಲ್ಲವೇ ಮುಂತಾದ ವಿಚಾರಗಳಲ್ಲಿ
ಪ್ರಾದೇಶಿಕವಾಗಿ ಚಿಕ್ಕಪುಟ್ಟ ವ್ಯತ್ಯಾಸಗಳು ಇರಬಹುದು.
ನಾನು ಪಳದ್ಯಪ್ರಿಯ ಹೌದಾದರೂ ಪಳದ್ಯ ಪರಿಣತನೇನಲ್ಲ. ಹಾಗಾಗಿ ಆ ವಿವರಗಳಿಗೆಲ್ಲ ಹೋಗುತ್ತಿಲ್ಲ. ಒಟ್ಟಾರೆ ಯಾಗಿ ಪಳದ್ಯವು ಕನ್ನಡಿಗರ ಅಡುಗೆಮನೆಯ ಘಮವನ್ನು ಹೆಚ್ಚಿಸಿರುವುದು, ಕನ್ನಡ ನಾಲಗೆಗಳಲ್ಲಿ ನೀರೂರಿಸಿ ರುವುದು, ಕನ್ನಡ ಮನಸ್ಸುಗಳನ್ನು ಅರಳಿಸಿರುವುದು ಹೌದೆಂದು ಖಂಡಿತವಾಗಿ ಹೇಳಬಲ್ಲೆ.

‘ಹಸಿಯ ಅಲ್ಲವು ಲೇಸು| ಬಿಸಿಯ ಪಳದ್ಯ ಲೇಸು| ಹುಸಿ ಲೇಸು ಕಳ್ಳ ಹೆಣ್ಣಿಂಗೆ, ಬೈಗಿನ| ಬಿಸಿಲು ಲೇಸೆಂದ ಸರ್ವಜ್ಞ||’ ಎಂದು ಸರ್ವಜ್ಞನೂ, ‘ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ| ಶಂಖಪಾಣಿಯ ನಾಮ ಶಾಕಾದಿ ಸೂಪ| ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು| ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು||’ ಎಂದು ಪುರಂದರ ದಾಸರೂ ಹೇಳಿದ್ದಾರೆಂದ ಮೇಲೆ ಪಳದ್ಯ ಪುರಾತನ ಕಾಲದಿಂದಲೂ ಫೇಮಸ್ ಎನ್ನುವುದಕ್ಕೆ ಬೇರೆ ಪುರಾವೆ ಬೇಕಿಲ್ಲ.
ಬೇಕಿದ್ದರೆ ‘ಜೈಮಿನಿ ಭಾರತ’ ಕೃತಿಯಲ್ಲಿ ಲಕ್ಷ್ಮೀಶ ಬರೆದಿದ್ದನ್ನೂ ಉಲ್ಲೇಖಿಸಬಹುದು: ‘ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್| ಮಿಸುಪ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ| ಯಸ ಪರಡಿ ಮಧು ಶರ್ಕರಾಮಿಷ
ಪಳದ್ಯ ಸೀಕರಣೆ ಶಾಕ ತನಿವಣ್ಗಳ| ರಸ ರಸಾಯನ ಸಾರ್ಗಳು ಪ್ಪುಗಾಯ್ ಬಾಳುಕಂ| ಕೃಸರಿ ಪಚ್ಚಡಿ ಪಾಲ್ಮೊ ಸರ್ಗಳಿವು ಬಗೆಗೊಳಿಸಿ| ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು||’ ಹೆತ್ತತಾಯಿ ದೇವಕಿ ಮತ್ತು ಸಾಕುತಾಯಿ ಯಶೋದೆ ಇಬ್ಬರೂ ಸೇರಿ ಕೃಷ್ಣನಿಗೆ ಉಣಿಸಿದ ಔತಣದಲ್ಲಿ ಬಾಳ್ಕಮೆಣ್ಸೂ ಪಳದ್ಯವೂ ಇದ್ದುವಂತೆ! ಇರಲಿ, ನಾನಿಂದು ಬರೆಯಲಿಕ್ಕೆ ಹೊರಟಿದ್ದು ಪಳದ್ಯದ ಬಗೆಗಲ್ಲ.
ಬದಲಿಗೆ, ಪಳದ್ಯದ ಒಂದು ಮುಖ್ಯ ಇನ್ ಗ್ರೇಡಿಯೆಂಟ್ ಆಗಿರುವ ಮಜ್ಜಿಗೆಯ ಬಗೆಗೆ. ಮಜ್ಜಿಗೆಯ ಮಹಿಮೆಯನ್ನು ಬಣ್ಣಿಸುವ ಸಂಸ್ಕೃತ ಶ್ಲೋಕ- ಸುಭಾಷಿತ-ಚಾಟೂಕ್ತಿಗಳ ಬಗೆಗೆ. ಇವು ನನಗೆ ಸಿಕ್ಕಿದ್ದು ‘ವೈದ್ಯಕೀಯ ಸುಭಾಷಿತ ಸಾಹಿತ್ಯಮ್’ ಎಂಬ ಗ್ರಂಥದಲ್ಲಿ. ಸುಮಾರು ೮೦೦ ಪುಟಗಳಷ್ಟು ಗಾತ್ರದ ಅತ್ಯಮೂಲ್ಯ ಪುಸ್ತಕವಿದು. ಇಂಟರ್ ನೆಟ್ ಆರ್ಕೈವ್ಸ್ ತಾಣದಲ್ಲಿದೆ. ಆಯುರ್ವೇದಾಚಾರ್ಯ ಡಾ.ಭಾಸ್ಕರ ಗೋವಿಂದ ಘಾಣೇಕರರು ಸಂಕಲಿಸಿ ಹಿಂದಿ ಭಾಷೆ ಯಲ್ಲಿ ವ್ಯಾಖ್ಯಾನ ಒದಗಿಸಿದ, ವಾರಾಣಸಿಯ ಚೌಖಂಬಾ ಸಂಸ್ಕೃತ ಪ್ರಕಾಶನದ ಪ್ರಕಟಣೆ.
ಋಗ್ವೇದದಿಂದ ಮೊದಲ್ಗೊಂಡು ಸಂಸ್ಕೃತ ವ್ಮಾಯದ ಎಲ್ಲ ಪ್ರಕಾರಗಳನ್ನು ಆಕರವಾಗಿಸಿ ಆರಿಸಿದ ಆಯುರ್ವೇದ ಸಂಬಂಽ ಪದ್ಯ- ವಾಕ್ಯಾದಿಗಳ ಸಂಗ್ರಹ. ಗ್ರಂಥಕರ್ತರೇ ಹೇಳುವಂತೆ- ‘ಸಂಸ್ಕೃತ ಸಾಹಿತ್ಯವೆಂಬ ಪುಷ್ಪವಾಟಿಕೆಯಲ್ಲಿ ಗ್ರಂಥಗಳೆಂಬ ಪುಷ್ಪಗಳಿಂದ, ಭ್ರಮರವೃತ್ತಿಯನ್ನನುಸರಿಸಿ, ಪದ್ಯಾದಿಗಳೆಂಬ ಪುಷ್ಪಮಕರಂದ ಬಿಂದುವನ್ನು ಸಂಕಲನಗೊಳಿಸಿರುವ ಗ್ರಂಥಕರಂಡಕ’. ಇದರ ಕೆಲವು ಭಾಗಗಳು ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಶಿಕ್ಷಣದ ಪಠ್ಯವೂ ಆಗಿವೆಯಂತೆ.
ಆರಂಭಿಕ ಕೆಲವು ಅಧ್ಯಾಯಗಳ ಕನ್ನಡ ಅನುವಾದ (ವಿದ್ವಾನ್ ಬ.ರಾಜಶೇಖರಯ್ಯ, ಶ್ರೀ ಜಗದ್ಗುರು ಪಂಚಾ ಚಾರ್ಯ ಪ್ರಕಾಶನ) ಪುಸ್ತಕವೂ ಇದೆ. ಆಯುರ್ವೇದ ವಿದ್ಯಾರ್ಥಿಗಳೇ ಅಲ್ಲದೇ ಜನಸಾಮಾನ್ಯರೂ ಈ ಕೃತಿಯನ್ನು ಅವಲೋಕಿಸಬಹುದಾಗಿದೆ. ಆರೋಗ್ಯವನ್ನು ಕಾಪಾಡಿಕೊಂಡು ಆಯುಷ್ಯವರ್ಧನೆ ಮಾಡಿಕೊಂಡು ದೀರ್ಘಕಾಲ ದೃಢಕಾಯದಿಂದ ಬಾಳಬೇಕಾದರೆ ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ಈ ಸುಭಾಷಿತ ಕೃತಿಯು ನೀಡುತ್ತದೆ.
ಅಂಥದರಲ್ಲಿ ಸಿಂಧುವಿನಿಂದ ಬಿಂದು ಎಂಬಂತೆ ಮಜ್ಜಿಗೆಗೆ ಸಂಬಂಧಿಸಿದ ಸುಭಾಷಿತಗಳನ್ನಷ್ಟೇ ನಾನಿಲ್ಲಿ ಆಯ್ದು ಕೊಂಡಿದ್ದೇನೆ. ಹೈನುಪದಾರ್ಥಗಳ ಪೈಕಿ ಹಾಲು, ಮೊಸರು, ಬೆಣ್ಣೆ, ತುಪ್ಪಗಳಿಗೆ ಹೋಲಿಸಿದರೆ ಮಜ್ಜಿಗೆಗೆ- ಸಾಹಿತ್ಯ ಲೋಕದಲ್ಲೂ ಲೌಕಿಕವಾಗಿಯೂ ಸಲ್ಲುವ ಘನತೆ-ಗೌರವ ಕಡಿಮೆ. ಆ ಅನ್ಯಾಯವನ್ನು ಸ್ವಲ್ಪವಾದರೂ ಅಳಿಸ ಬೇಕು ಎಂಬ ಉದ್ದೇಶ ನನ್ನದು.
ಮಜ್ಜಿಗೆ ಸುಭಾಷಿತ ಎಂದೊಡನೆ ಥಟ್ಟನೆ ನೆನಪಾಗುವ ಈ ಒಂದು ಚಮತ್ಕಾರ ಶ್ಲೋಕದಿಂದಲೇ ಆರಂಭಿಸೋಣ. ಇದು ತುಂಬ ಪ್ರಖ್ಯಾತವಾದುದು. ‘ಭೋಜನಾಂತೇ ಚ ಕಿಂ ಪೇಯಂ| ಜಯಂತಃ ಕಸ್ಯ ವೈ ಪುತ್ರಃ| ಕಥಂ ವಿಷ್ಣುಪದಂ ಪ್ರೋಕ್ತಂ| ತಕ್ರಂ ಶಕ್ರಸ್ಯ ದುರ್ಲಭಮ್||’ ಇದರ ಮೊದಲ ಮೂರು ಚರಣಗಳಲ್ಲಿ, ಒಂದಕ್ಕೊಂದು ಸಂಬಂಧವಿಲ್ಲದ ಮೂರು ಸರಳ ಪ್ರಶ್ನೆಗಳು. ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು? ಜಯಂತನು ಯಾರ ಮಗ ಗೊತ್ತೇನು? ಭಗವಂತನ ಸನ್ನಿಧಾನ ಎಲ್ಲರಿಗೂ ಸಿಗುತ್ತದೆಯೇ?- ಇವೇ ಆ ಮೂರು ಪ್ರಶ್ನೆಗಳು. ಇವಕ್ಕೆ ತಲಾ ಒಂದೊಂದು ಪದದ ಚಿಕ್ಕಚೊಕ್ಕ ಉತ್ತರ. ಆ ಮೂರು ಪದಗಳು ಸೇರಿ ನಾಲ್ಕನೆಯ ಚರಣ ಪೂರ್ತಿಯಾಗಿರುವುದು. ಜೋಡಿಸಿದಾಗ ‘ಮಜ್ಜಿಗೆ ಇಂದ್ರನಿಗೆ ಸಿಗದು’ ಎಂಬ ಅರ್ಥ ಬರುವುದು.
ಇಂದ್ರನಿಗೇನಾಗಬೇಕಿದೆ ಮಜ್ಜಿಗೆಯಿಂದ? ಏನೂ ಇಲ್ಲ! ಅಂಥ ದೊಡ್ಡ ಇಂದ್ರಪದವಿ ಪಡೆದವನಿಗೂ ಮಜ್ಜಿಗೆ ಸುಲಭವಾಗಿ ದೊರಕದು ಎನ್ನುತ್ತ ಮಜ್ಜಿಗೆಯ ಮಹಿಮೆ-ಶ್ರೇಷ್ಠತೆಗಳನ್ನು ಮತ್ತಷ್ಟು ವೈಭವೀಕರಿಸುವುದಕ್ಕಾಗಿ ಈ ಮಾತು. ಭೂಲೋಕ ದಲ್ಲಿರುವ ಮನುಷ್ಯಜಾತಿಗೆ ಹೇಗೆ ಅಮೃತ ಲಭ್ಯವಿಲ್ಲವೋ ಹಾಗೆ ದೇವಲೋಕದವರಿಗೆ ಮಜ್ಜಿಗೆ ಅಲಭ್ಯ. ಅದನ್ನೇ ವಿಸ್ತರಿಸಿ ಹೇಳುತ್ತಿದೆ ಇನ್ನೊಂದು ಸುಭಾಷಿತ: ‘ಅಮೃತಂ ದುರ್ಲಭಂ ನೄಣಾಂ ದೇವಾನಾ ಮುದಕಂ ತಥಾ| ಪಿತೄಣಾಂ ದುರ್ಲಭಃ ಪುತ್ರಃ ತಕ್ರಂ ಶಕ್ರಸ್ಯ ದುರ್ಲಭಮ್||’ ಅಂದರೆ, ಮನುಷ್ಯರಿಗೆ ಅಮೃತ ದುರ್ಲಭ. ದೇವತೆಗಳಿಗೆ ನೀರು ದುರ್ಲಭ (ಸ್ವರ್ಗದಲ್ಲಿ ಪ್ರತಿಯೊಂದಕ್ಕೂ ನೀರಿನ ಬದಲಿಗೆ ಅಮೃತವೇ ಬಳಕೆ ಯಾಗುತ್ತದೆಯೇ? ಮುಖಪ್ರಕ್ಷಾಲನ, ಪೃಷ್ಠಪ್ರಕ್ಷಾಲನ ಎಲ್ಲವನ್ನೂ ಅಮೃತದಿಂದಲೇ ಮಾಡುತ್ತಾರೆಯೇ? ಅಂತೆಲ್ಲ ಕೇಳಬೇಡಿ!
ಹೋಗಿ ನೋಡಿ ಅನುಭವಿಸಿ ಬಂದವರಿಲ್ಲ); ಇಹಲೋಕ ತ್ಯಜಿಸಿದ ಪಿತೃಗಳಿಗೆ ಮತ್ತೆ ಸಂತಾನಪ್ರಾಪ್ತಿ ಇರುವುದಿಲ್ಲ; ಈ ಎಲ್ಲ ಇಲ್ಲಗಳ ಥರವೇ ಇಂದ್ರನಿಗೆ ಮಜ್ಜಿಗೆಯೂ ಸಿಗುವುದಿಲ್ಲ. ಒಟ್ಟಿನಲ್ಲಿ ಮಜ್ಜಿಗೆ ಭೂಲೋಕವಾಸಿಗಳಿಗೆ ಅಮೃತಸಮಾನ ಎಂದು ತಾತ್ಪರ್ಯ. ಪುಷ್ಟೀಕರಿಸಲಿಕ್ಕೆ ಮತ್ತೊಂದು ಸುಭಾಷಿತ: ‘ಅಮರತ್ವಂ ಯಥಾ ಸ್ವರ್ಗೇ ದೇವಾನಾಮಮೃತಾದ್ಭವೇತ್| ತಕ್ರಾದ್ ಭೂಮೌ ತಥಾ ನೄಣಾಮಮರತ್ವಂ ಹಿ ಜಾಯತೇ||’ ಸ್ವರ್ಗದಲ್ಲಿ ದೇವತೆ ಗಳಿಗೆ ಹೇಗೆ ಅಮೃತದಿಂದ ಅಮರತ್ವ (ಮರಣವೇ ಇಲ್ಲದಿರುವಿಕೆ) ಸಂಭವವೋ, ಹಾಗೆಯೇ ಭೂಮಿಯಲ್ಲಿ ಮನುಷ್ಯರಿಗೆ ಮಜ್ಜಿಗೆಯಿಂದ ಅಮರತ್ವ (ದೀರ್ಘಾಯುಷ್ಯ) ಸಂಭವ. ಪಾಲ್ಗಡಲನ್ನು ಮಥಿಸಿದಾಗ ಸಿಕ್ಕಿದ ಅಮೃತವೇ ತಾನೆ ದೇವತೆಗಳ ಪಾಲಾದದ್ದು? ಅದೇರೀತಿ, ಹೆಪ್ಪುಗಟ್ಟಿದ ಹಾಲನ್ನು ಮಥಿಸಿದಾಗ ಸಿಗುವ ಮಜ್ಜಿಗೆಯು ಭೂಲೋಕವಾಸಿಗಳಿಗೆ ಅಮೃತ ಎಂದು ಹೋಲಿಕೆ ಮಾಡಿದ್ದಿರಬಹುದು.
ತಕ್ರಂ ಶಕ್ರಸ್ಯ ದುರ್ಲಭಮ್ ಎಂದು ಕೊನೆಯಾಗುವ ಇನ್ನೂ ಒಂದು ತಮಾಷೆ ಶ್ಲೋಕ ಇದೆ. ಆ ವಾಕ್ಯಕ್ಕೆ ಒಂಚೂರು ಸಾಹಿತ್ಯಿಕ ಅಲಂಕಾರ ಸೇರಿಸಿ ಹೆಣೆದಿರುವುದು: ‘ಘೃತಂ ನ ಶ್ರೂಯತೇ ಕರ್ಣೇ ದಧಿ ಸ್ವಪ್ನೇಧಿಪಿ ದುರ್ಲಭಮ್| ಮುಗ್ಧೇ ದುಗ್ಧಸ್ಯ ಕಾ ವಾರ್ತಾ ತಕ್ರಂ ಶಕ್ರಸ್ಯ ದುರ್ಲಭಮ್||’ ಮನೆಯಲ್ಲಿ ಹೈನು ಪದಾರ್ಥಗಳಿಗೆ ತತ್ವಾರ ಎಷ್ಟಿದೆ ಎಂಬುದನ್ನು ಬಡವನೊಬ್ಬ ತನ್ನ ಭಾರ್ಯೆಯೊಡನೆ ತೋಡಿಕೊಳ್ಳುವ ಸನ್ನಿವೇಶ. ‘ತುಪ್ಪ ಎಂದರೇನೆಂದು ಕೇಳಿಯೇ ಗೊತ್ತಿಲ್ಲ. ಮೊಸರನ್ನು ಕನಸಲ್ಲೂ ಕಂಡಿಲ್ಲ.
ಹಾಲಿನ ಸಮಾಚಾರವೇನನ್ನು ಹೇಳಲಿ ಮುಗ್ಧೆಯೇ, ಮಜ್ಜಿಗೆಯೂ ನನ್ನ ಪಾಲಿಗೆ ಇಂದ್ರಪದವಿಯಷ್ಟು ದುರ್ಲಭ ವಾಗಿದೆ!’ ಎಂಬ ಗೋಳು. ಅಥವಾ, ದೇವೇಂದ್ರನಿಗೇ ಮಜ್ಜಿಗೆ ಸಿಗುವುದಿಲ್ಲವಂತೆ ಇನ್ನು ನನಗೆಲ್ಲಿಂದ? ಎಂದು ಕೂಡ ಅರ್ಥೈಸಬಹುದು.
ಮಜ್ಜಿಗೆಯನ್ನು ಅಷ್ಟೊಂದು ಅಮೃತತುಲ್ಯವಾಗಿಸುವುದು ಏಕೆ? ಈ ಸುಭಾಷಿತವು ಅದನ್ನು ಚಂದವಾಗಿ ಬಣ್ಣಿಸುತ್ತದೆ: ‘ನ ತಕ್ರಸೇವೀ ವ್ಯಥತೇ ಕದಾಚಿನ್ ನ ತಕ್ರದಗ್ಧಾ ಪ್ರಭವಂತಿ ರೋಗಾಃ| ಯಥಾ ಸುರಾಣಾಮಮೃತಂ ಪ್ರಧಾನಂ ತಥಾ ನರಾಣಾಂ ಭುವಿ ತಕ್ರಮಾಹುಃ||’ ಅಂದರೆ, ಮಜ್ಜಿಗೆ ಸೇವನೆ ಮಾಡುವವನು ಎಂದೂ ರೋಗ ಪೀಡಿತನಾಗುವುದಿಲ್ಲ. ಆ ಮಟ್ಟಿಗೆ ಚಿಂತೆ ಅವನಿಗಿಲ್ಲ. ಮಜ್ಜಿಗೆಯಿಂದ ಉಪಶಮನಗೊಂಡ ಉದರ ಶೂಲೆಗಳೆಲ್ಲ ಮತ್ತೆಂದೂ ತಲೆಯೆತ್ತುವುದಿಲ್ಲ. ಸ್ವರ್ಗದಲ್ಲಿ ಅಮೃತವು ಹೇಗೆ ದೇವತೆಗಳನ್ನು ರೋಗಮುಕ್ತ ರನ್ನಾಗಿಡುತ್ತದೆಯೋ ಭೂಲೋಕದಲ್ಲಿ ಮಜ್ಜಿಗೆಯು ಆ ಕೆಲಸವನ್ನು ಮಾಡುತ್ತದೆ.
ಇಷ್ಟೇಅಲ್ಲ, ಮತ್ತೊಬ್ಬ ಸಂಸ್ಕೃತಕವಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವರ್ಗದಲ್ಲಿ ಮಜ್ಜಿಗೆ ಇಲ್ಲದೆ ಅಲ್ಲಿನವರು ಏನೇನೆಲ್ಲ ಪೊರಪಾಟು ಪಡಬೇಕಾಯಿತು ಎಂದು ಒಂದು ಸುಭಾಷಿತದಲ್ಲಿ ಬಣ್ಣಿಸಿದ್ದಾನೆ: ‘ಕೈಲಾಸೇ ಯದಿ ತಕ್ರಮಸ್ತಿ ಗಿರಿಶಃ ಕಿಂ ನೀಲಕಂಠೋ ಭವೇದ್| ವೈಕುಂಠೇ ಯದಿ ಕೃಷ್ಣತಾಮ ನುಭವೇದದ್ಯಾಪಿ ಕಿಂ ಕೇಶವಃ| ಇಂದ್ರೋ ದುರ್ಭಗತಾಂ ಕ್ಷಯಂ ದ್ವಿಜಪತಿರ್ಲಂಬೋದರತ್ವಂ ಗಣಃ| ಕುಷ್ಠಿತ್ವಂ ಚ ಕುಬೇರಕೋ ದಹನತಾಮಗ್ನಿಶ್ಚ ಕಿಂ ವಿಂದತಿ||’ ಕೈಲಾಸದಲ್ಲಿ ಮಜ್ಜಿಗೆ ಲಭ್ಯವಿರುತ್ತಿದ್ದರೆ ಪರಶಿವನು ‘ನೀಲಕಂಠ’ ಆಗಬೇಕಾಗಿ ಬರುತ್ತಿರಲಿಲ್ಲ.
ವೈಕುಂಠದಲ್ಲಿ ಮಜ್ಜಿಗೆ ಸಿಗುತ್ತಿದ್ದರೆ ವಿಷ್ಣುವು ‘ಕೃಷ್ಣತ್ವ’ವನ್ನು ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ಹಾಗೆಯೇ ಇಂದ್ರನಿಗೆ ದುರ್ಭಗತ್ವ (ಮೈಯೆಲ್ಲ ತೂತಾಗಿರುವಿಕೆ) ಬರುತ್ತಿರಲಿಲ್ಲ. ಚಂದ್ರನನ್ನು ಕ್ಷಯರೋಗ (ಪಕ್ಷಕ್ಕೊಮ್ಮೆ ಶರೀರ ಕ್ಷೀಣವಾಗುವಿಕೆ) ಕಾಡುತ್ತಿರಲಿಲ್ಲ. ಗಣಪನನ್ನು ಡೊಳ್ಳುಹೊಟ್ಟೆ ಸ್ಥೂಲತನ ಬಾಽಸುತ್ತಿರಲಿಲ್ಲ. ಕುಬೇರನಿಗೆ ಕುಷ್ಠರೋಗ ತಟ್ಟುತ್ತಿರಲಿಲ್ಲ. ಅಗ್ನಿ ಆ ನಮೂನೆ ಧಗಧಗ ಉರಿದು ಸಂಕಟಪಡಬೇಕಾಗುತ್ತಿರಲಿಲ್ಲ.
ಇಂಥ ಮಹಾಮಹಿಮ ಮಜ್ಜಿಗೆಯನ್ನು ನಾವು ಯಾವಾಗ ಸೇವಿಸಿದರೆ ಒಳ್ಳೆಯದು? ಗೊತ್ತೇ ಇದೆಯಲ್ಲ, ಊಟದ ಕೊನೆಗೆ. ಅದನ್ನೇ ಅಚ್ಚುಕಟ್ಟಾಗಿ ಹೇಳುವ ಸುಭಾಷಿತ ಹೀಗಿದೆ: ‘ಭೋಜನಾಂತೇ ಪಿಬೇತ್ತಕ್ರಂ ವಾಸರಾಂತೇ ಪಿಬೇತ್ಪಯಃ| ನಿಶಾಂತೇ ಚ ಪಿಬೇತ್ವಾರಿ ತ್ರಿಭಿರ್ರೋಗೋ ನ ಜಾಯತೇ||’ ಅಂದರೆ ಪ್ರತಿ ಊಟವನ್ನು ಮಜ್ಜಿಗೆ ಕುಡಿಯುವುದರ ಮೂಲಕ ಕೊನೆಗೊಳಿಸಬೇಕು. ಪ್ರತಿ ಹಗಲನ್ನು ಹಾಲು ಕುಡಿಯುವುದರ ಮೂಲಕ ಕೊನೆ ಗೊಳಿಸಬೇಕು (ಮಲಗುವ ಮುನ್ನ ಒಂದು ಲೋಟ ಬಿಸಿಹಾಲು ಕುಡಿಯಬೇಕು). ರಾತ್ರಿಯನ್ನು ನೀರು
ಕುಡಿಯುವುದರ ಮೂಲಕ ಕೊನೆಗೊಳಿಸಬೇಕು (ಬೆಳಗ್ಗೆದ್ದು ಮೊದಲಿಗೆ ಒಂದು ಲೋಟ ನೀರು ಕುಡಿಯಬೇಕು. ತಾಮ್ರದ ತಂಬಿಗೆಯಿಂದ ಎಂದು ಇಲ್ಲಿ ಹೇಳಿಲ್ಲವಾದರೂ ಅದು ಇನ್ನೂ ಉತ್ತಮವೆಂದು ಆರೋಗ್ಯತಜ್ಞರ ಶಿ-ರಸು). ಮಜ್ಜಿಗೆಯಿಂದ ಕೊನೆಗೊಳ್ಳುವುದು ಭೋಜನಕ್ಕೆ ಭೂಷಣವೆಂದು ಇನ್ನೊಂದು ಸುಭಾಷಿತದಲ್ಲಿ ಉಪಮೆಗಳನ್ನು ಬಳಸಿ ಬಣ್ಣಿಸಿದ್ದಿದೆ: ‘ಲಲಿತಾಂತಾನಿ ಗೀತಾನಿ ಪ್ರಸವಾಂತಂ ಚ ಯೌವನಮ್| ವಿಶಾಖಾಂತಾನಿ ಮೇಘಾನಿ ತಕ್ರಾಂತಂ ಖಲು ಭೋಜನಮ್||’ ಗೀತಗಾಯನ ಗೋಷ್ಠಿಗಳು ಬಣ್ಣದ ಓಕುಳಿಯಾಟದಂಥ ರಾಸಲೀಲೆ ಮೋಜುಮಸ್ತಿಗಳಿಂದ ಸಮಾಪ್ತವಾಗುತ್ತವೆ.
ಸ್ತ್ರೀಯರಲ್ಲಿ ಪುಟಿದೇಳುವ ಯೌವನವು ಪ್ರಸವದಿಂದ ಅಂತ್ಯವಾಗುತ್ತದೆ. ವಿಶಾಖಾ ಮಹಾನಕ್ಷತ್ರ ಪ್ರವೇಶಿಸುವುದರ
ಮೂಲಕ ಮೋಡಗಳ ಅಂತ್ಯವಾಗುತ್ತದೆ (ಅವು ಕರಗಿ ಮಳೆ ಸುರಿಯುತ್ತದೆ). ಅಂತೆಯೇ ಮಜ್ಜಿಗೆಯ ಸೇವನೆಯಿಂದ
ಭೋಜನವು ಸಮಾಪ್ತವಾಗುತ್ತದೆ. ವೈದ್ಯಕೀಯ ಸಾಹಿತ್ಯ ಎಂದು ಕರೆಸಿಕೊಳ್ಳುವ ಗ್ರಂಥದಲ್ಲಿ ಹೀಗೆಲ್ಲ ಆಲಂಕಾರಿಕ ಬಣ್ಣನೆಗಳು ಇರಬಹುದೇ ಎಂದು ನೀವು ಪ್ರಶ್ನಿಸಬಹುದು. ಯಾಕೆ ಕೂಡದು? ವೈದ್ಯರಿಗೂ ಒಂದಿಷ್ಟು ಹಾಸ್ಯ ಮನೋರಂಜನೆ ಬೇಡವೇ? ಮಾಡರ್ನ್ ಮೆಡಿಸಿನ್ ಫೀಲ್ಡಲ್ಲೂ ಡಾಕ್ಟರ್ಸ್ ಜೋಕುಗಳು, ನರ್ಸ್ಗಳ ಜೋಕುಗಳು
ಅಂತೆಲ್ಲ ಬೇಕಾದಷ್ಟು ಇವೆ. ‘ನಾನ್ವೆಜ್’ ಎನಿಸಿಕೊಳ್ಳುವಂಥವೂ ಇರುತ್ತವೆ.
‘ಡಾ.ರನೆ ಲೆನೆಕ್ ಎಂಬ ಫ್ರೆಂಚ್ ವೈದ್ಯನು ಆಕರ್ಣಕ (ಸ್ಟೇಥೋಸ್ಕೋಪ್)ವನ್ನು ಕಂಡುಹಿಡಿಯುವುದಕ್ಕಿಂತ ಮೊದಲೆಲ್ಲ ವೈದ್ಯರು ರೋಗಿಯ ಎದೆಗೋ ಬೆನ್ನಿಗೋ ಕಿವಿಯಾನಿಸಿಯೇ ಎದೆಬಡಿತ, ಶ್ವಾಸಕೋಶಗತಿಗಳನ್ನು ಅಂದಾಜಿಸುತ್ತಿದ್ದದ್ದು. ಈಗ ಪ್ರಪಂಚದ ವೈದ್ಯರೆಲ್ಲ ಲೆನೆಕ್ನನ್ನು ಅದೆಷ್ಟು ಶಪಿಸುತ್ತಿದ್ದಾರೇನೋ’ ಎಂಬೊಂದು ಟಂಗ್-ಇನ್-ಚೀಕ್ ಜೋಕು ಇದೆ. ಸಂಸ್ಕೃತದಲ್ಲೂ ಇಂಥವು ಇವೆ. ಇಲ್ಲಿ ನೋಡಿ: ‘ಮುದ್ಗದಾಲೀ ಗದವ್ಯಾಲೀ ಕವೀಂದ್ರ ವಿತುಷಾ ಕಥಮ್| ಭಕ್ತವಲ್ಲಭಸಂಯೋಗೇ ಜಾತಾ ವಿಗತಕಂಚುಕೀ||’ ಪ್ರಶ್ನೆ: ಎಲೈ ಕವಿಶ್ರೇಷ್ಠನೇ, ರೋಗಕ್ಕೆ ಸರ್ಪದಂತಿರುವ ಅಂದರೆ ರೋಗನಾಶಕವಾದ ಹೆಸರುಕಾಳಿನ ಬೇಳೆಯು ಹೊಟ್ಟಿಲ್ಲದ್ದಾಗಿ ಹೇಗಾಯ್ತು? ಉತ್ತರ: ಪ್ರೀತಿಯ ಪ್ರಿಯಕರನ ಸಮಾಗಮವಾದಾಗ ಪ್ರಿಯತಮೆಯು ತನ್ನ ಕವಚವನ್ನು ಕಳಚಿಕೊಳ್ಳುವಂತೆ, ಬೇಯಿಸ ಲ್ಪಡುತ್ತಿರುವ ಅಕ್ಕಿಯ ಸಂಪರ್ಕದಿಂದ ಈ ಹೆಸರುಕಾಳು ತನ್ನ ಹೊಟ್ಟನ್ನು ದೂರಮಾಡಿಕೊಂಡಿತು! ಆಹಾ, ಎಂಥ ರಸಿಕತನ! ಇದು ಅಶ್ಲೀಲವೇ? ಖಂಡಿತ ಅಲ್ಲ. ಲಿಂಗಭೇದ ವಯೋಭೇದವಿಲ್ಲದೆ ಇಷ್ಟು ರಸಿಕತನ, ತುಂಟತನ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದೇ.
ಸರಿ, ವಿಷಯಾಂತರ ಬೇಡ. ಅಲ್ಲದೇ ಪ್ರಸ್ತುತ ಈ ವೈದ್ಯಕೀಯ ಸುಭಾಷಿತ ಗ್ರಂಥದಲ್ಲಿಯೂ ಬರೀ ತಮಾಷೆ ಉತ್ಪ್ರೇಕ್ಷೆಗಳೇ ಇರುವುದೇನಲ್ಲ. ಗಂಭೀರವಾದ ಮಾಹಿತಿ ಪ್ರಸ್ತುತಿಯೂ ಇದೆ. ಮಜ್ಜಿಗೆ ಪದ್ಯಗಳಲ್ಲೇ ನಾವದನ್ನು ಕಂಡುಕೊಳ್ಳಬಹುದು. ಉದಾಹರಣೆಗೆ- ವಾತ, ಪಿತ್ತ, ಕಫ ಅಸಮತೋಲವಾದಾಗ ಮಜ್ಜಿಗೆಯನ್ನು ಯಾವ ರೀತಿ ಸೇವಿಸಬೇಕು ಎಂದು ತಿಳಿಸುವ ಈ ಸುಭಾಷಿತ: ‘ವಾತೇಧಿಮ್ಲಂ ಸೈಂಧವೋಪೇತಂ ಸ್ವಾದಿ ಪಿತ್ತೇ ಸಶರ್ಕರಮ್|
ಪಿಬೇತ್ತಕ್ರಂ ಕಫ ಚಾಪಿ ವ್ಯೋಷಕ್ಷಾರಸಮನ್ವಿತಮ್|| ವಾತವಿಕಾರ ಆಗಿದ್ದರೆ ಹುಳಿಯಾದ ಮಜ್ಜಿಗೆಯನ್ನು ಚಿಟಿಕೆಯಷ್ಟು ಸೈಂಧವಲವಣ ಸೇರಿಸಿ ಕುಡಿಯಬೇಕು.
ಪಿತ್ತ ಜಾಸ್ತಿಯಾಗಿದ್ದರೆ ಸ್ವಲ್ಪ ಸಕ್ಕರೆ ಸೇರಿಸಿದ ಸಿಹಿ ಮಜ್ಜಿಗೆ ಕುಡಿಯಬೇಕು. ಕಫ ಆಗಿದ್ದರೂ ಮಜ್ಜಿಗೆಯೇ ಒಳ್ಳೆಯದು, ಅದಕ್ಕೆ ತ್ರಿಕಟು ಚೂರ್ಣ(ಹಿಪ್ಪಲಿ ಮತ್ತು ಕಾಳುಮೆಣಸಿನ ಪುಡಿ) ಉದುರಿಸಿಕೊಂಡು ಕುಡಿಯಬೇಕಷ್ಟೇ.
ಯಾವ್ಯಾವ ವ್ಯಾಽಗಳು ಮಜ್ಜಿಗೆಯಿಂದ ಶಮನಗೊಳ್ಳುತ್ತವೆಂದು ತಿಳಿಸುವ ಶ್ಲೋಕಗಳೂ ಇವೆ: ‘ತಕ್ರಂ ರುಚಿಕರಂ
ವಹ್ನಿದೀಪನಂ ಪಾಚನಂ ಪರಮ್| ಉದರೇ ಯೇ ಗದಾಸ್ತೇಷಾಂ ನಾಶನಂ ತೃಪ್ತಿಕಾರಕಮ್||’ ಮಜ್ಜಿಗೆಯು ಬಾಯಿರುಚಿಯನ್ನು ಹೆಚ್ಚಿಸುತ್ತದೆ, ಜಠರಾಗ್ನಿಯನ್ನು ಉದ್ದೀಪಿಸುತ್ತದೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, ಹೊಟ್ಟೆಯೊಳಗಿನ ರೋಗಗಳಿಗೆಲ್ಲ ರಾಮಬಾಣವಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸಿಗೆ ತೃಪ್ತಿ ತಂದುಕೊಡುತ್ತದೆ. ಇನ್ನೊಂದು- ‘ತಕ್ರಂ ವಾತಹರಂ ರುಚ್ಯಂ ಶೂಲಾಘ್ಮಾ ನಾರ್ಶಸಾಂ ಹಿತಮ್| ಅಗ್ನಿಸಂಜನನಂ ಶ್ರೇಷ್ಠಂ ಕಫಪಿತ್ತನಿವರ್ಹಣಮ್||’ ಮಜ್ಜಿಗೆಯು ವಾತ-ಪಿತ್ತ-ಕಫಗಳ ವೈಪರೀತ್ಯವನ್ನು ಹತೋಟಿಯಲ್ಲಿಡುತ್ತದೆ. ಹೊಟ್ಟೆನೋವಿಗಷ್ಟೇ ಅಲ್ಲ, ಕಿವಿತಮಟೆ ನೋವು, ಮೂಲವ್ಯಾಧಿ ಮುಂತಾದುವಕ್ಕೂ ಮಜ್ಜಿಗೆ ದಿವ್ಯೌಷಧವೇ. ಆದರೆ ಮಜ್ಜಿಗೆಯನ್ನು ಯಾರಿಗೆ ಯಾವಾಗ ಕೊಡಬಹುದು ಕೊಡಬಾರದು ಎಂದು ಗೊತ್ತಿರಬೇಕು.
‘ತಕ್ರಂ ನೈವ ಕ್ಷತೇ ದದ್ಯಾನ್ನೋಷ್ಣಕಾಲೇ ನ ದುರ್ಬಲೇ| ನ ಮೂರ್ಚ್ಛಾಭ್ರಮದಾಹೇಷು ನ ರೋಗೇ ರಕ್ತಪೈತ್ತಿಕೇ| ಶೀತಕಾ ಲೇಧಿಗ್ನಿಮಾಂದ್ಯೇ ಚ ಕ-ತ್ಥೇಷ್ವಾಮಯೇಷು ಚ| ಮಾರ್ಗಾ ವರೋಧೇ ದುಷ್ಟೇ ಚ ವಾಯೌ ತಕ್ರಂ ಪ್ರಶಸ್ಯತೇ||’ ನಿತ್ರಾಣವು ಳ್ಳವನಿಗೆ, ಗಾಯಗೊಂಡವನಿಗೆ, ಮೂರ್ಛೆ, ತಲೆಸುತ್ತು, ಉರಿ ಮತ್ತು ರಕ್ತಪಿತ್ತವುಳ್ಳವನಿಗೆ ಮಜ್ಜಿಗೆ ಕೊಡುವುದು ತರವಲ್ಲ. ಆದರೆ ಶೀತಕಾಲದಲ್ಲಿ, ಅಗ್ನಿಮಂದ ಆದಾಗ, ಕಫದಿಂದ ಹುಟ್ಟಿದ ವ್ಯಾಧಿಗಳಿಗೆ, ಸ್ರೋತಸ್ಸುಗಳ ಮಾರ್ಗದ ತಡೆಯಲ್ಲಿ, ಮತ್ತು ವಾಯು ಕೆಟ್ಟದಾದಾಗ ಮಜ್ಜಿಗೆ ಅತ್ಯಂತ ಪ್ರಶಸ್ತ.
ಈ ಗ್ರಂಥದಲ್ಲಿ ಸಿಕ್ಕಿದ ಮಜ್ಜಿಗೆ ಪದ್ಯಗಳಲ್ಲೆಲ್ಲ ನನಗೆ ತುಂಬ ಇಷ್ಟವೆನಿಸಿದ್ದು, ಆದ್ದರಿಂದ ಇಂದಿನ ಅಂಕಣಬರಹದ
ಉಪಸಂಹಾರಕ್ಕೆಂದು ವಿಶೇಷವಾಗಿ ಗುರುತಿಸಿಟ್ಟುಕೊಂಡದ್ದು ಇದು: ‘ಶಶಿಕುಂದಸಮುಜ್ಜ್ವಲ ಶಂಖನಿಭಂ ಯುವತೀಕರನಿರ್ಮಿತನಿರ್ಮಥಿತಮ್| ಘೃತಸೈಂಧವಹಿಂಗುಯುತಂ ಮಧುರಂ ಪಿಬ ತಕ್ರಮಹೋ ನೃಪ ರೋಗ ಹರಮ್||’ ಇದರ ಭಾವಾರ್ಥ ಹೀಗಿದೆ: ‘ಹುಣ್ಣಿಮೆಯ ಚಂದ್ರ, ಮಲ್ಲಿಗೆ ಹೂವು, ಮತ್ತು ಶಂಖದಂತೆ ಅಚ್ಚಬಿಳುಪು ಶೋಭೆ ಇರುವ, ತರುಣಿಯರ ಕೈಗಳಿಂದ ಕಡೆಯಲ್ಪಟ್ಟು ತಯಾರಾದ, ಒಂಚೂರು ತುಪ್ಪ, ಸೈಂಧವ ಉಪ್ಪು, ಮತ್ತು ಚಿಟಿಕೆ ಹಿಂಗು ಸೇರಿ ರುಚಿ ಹೆಚ್ಚಿಸಲ್ಪಟ್ಟ, ಸರ್ವರೋಗಪರಿಹಾರಕವಾದ ಮಜ್ಜಿಗೆಯನ್ನು ಸೇವಿಸುವಂಥವ ನಾಗು ಮಹಾರಾಜನೇ!’ ಒಂದುವೇಳೆ ಲಂಕೆಯಲ್ಲಿ ರಾವಣನ ಆಸ್ಥಾನದಲ್ಲಿ ರಸಿಕಶಿಖಾಮಣಿ ಕವಿಯೊಬ್ಬನು ಈ ಶ್ಲೋಕವನ್ನು ಹೇಳಿ ರಾವಣನಿಗೆ ಕುಡಿಯಲಿಕ್ಕೆ ಒಂದೇಒಂದು ಲೋಟದಷ್ಟು ಮಜ್ಜಿಗೆ ಕೊಟ್ಟರೆ ಹೇಗಾಗಬಹುದು? ಅವನ ಹತ್ತು ಬಾಯಿಗಳಿಗೆ ಅದು ಒಂದೊಂದು ಹನಿಯೂ ಸಿಗಲಿಕ್ಕಿಲ್ಲ. ಮತ್ತೆ, ನಮ್ಮ ಕನ್ನಡದ ಗಾದೆ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂದು ಇರುವುದು ಸುಮ್ಮನೆಯಾ?
ಇದನ್ನೂ ಓದಿ: GayathriJoshi