ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವು(Road Safety Week) ಜನವರಿ 11 ರಿಂದ ಪ್ರಾರಂಭವಾಗಲಿದ್ದು, ರಸ್ತೆ ಪ್ರಯಾಣದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನಿದು ಹೊಂದಿದೆ. ಕೇಂದ್ರ ರಸ್ತೆ ಸಾರಿಗೆ(Centre Road Transport) ಮತ್ತು ಹೆದ್ದಾರಿಗಳ ಸಚಿವಾಲಯವು ಈ ಅರಿವಿನ ಸಪ್ತಾಹವನ್ನು ಆಯೋಜಿಸಿದ್ದು, ಜನವರಿ 17 ರವರೆಗೆ ಇದು ನಡೆಯಲಿದೆ. ನಾವೆಲ್ಲರೂ ರಸ್ತೆಯಲ್ಲಿ ಸಂಚರಿಸುವವರೇ ತಾನೆ? ಇವೆಲ್ಲ ನಮಗೆ ಬಾಲ್ಯದಿಂದಲೇ ಅಭ್ಯಾಸ ಆಗಿರುತ್ತದೆ. ಮತ್ತೆ ಹೊಸದಾಗಿ ಸುರಕ್ಷತಾ ನಿಯಮಗಳ ಬಗ್ಗೆ ಕಲಿಯುವುದೇನಿದೆ? ಏಕೆ ಬೇಕು ಈ ಅರಿವಿನ ದಿನ?
ಪ್ರತಿ ವರ್ಷ ಭಾರತವೊಂದರಲ್ಲೇ ಸುಮಾರು 1.7 ಲಕ್ಷ ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅಂದರೆ ದಿನಕ್ಕೆ ಸುಮಾರು 474 ಮಂದಿ ರಸ್ತೆ ಅಪಘಾತಗಳಿಗೆ ಜೀವ ತೆರುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇರುವುದೇ ಕಾರಣ ಎನ್ನುತ್ತವೆ ವರದಿಗಳು. ಯಾರ ತಪ್ಪು ಎನ್ನುವುದು ಮುಖ್ಯವಲ್ಲ, ಹೆಚ್ಚಿನ ಸಾರಿ ಅದನ್ನು ನಿರ್ಧರಿಸುವವರು ಉಳಿಯುವುದೇ ಇಲ್ಲ ಎನ್ನುವುದು ನೋವಿನ ಸಂಗತಿ. ಹಾಗಾಗಿ ರಸ್ತೆ ಸುರಕ್ಷತೆಯ ಬಗೆಗಿನ ಅರಿವಿನ ಸಪ್ತಾಹವು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಎಂದಿನಿಂದ ನಡೆದಿದೆ?: 1989ರಿಂದಲೇ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಅತಿ ವೇಗ ಮತ್ತು ಕುಡಿದು ಗಾಡಿ ಓಡಿಸುವ ಪಿಡುಗಿಗೆ ಅತಿ ಹೆಚ್ಚು ಮಂದಿ ಬಲಿಯಾಗುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸರಕಾರ ಭಾವಿಸಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತಾ ಸಪ್ತಾಹವನ್ನು ಆಚರಣೆಗೆ ತರಲಾಯಿತು. ವಾಹನ ಅಥವಾ ಪಾದಚಾರಿಗಳೆನ್ನದೆ ರಸ್ತೆಯನ್ನು ಉಪಯೋಗಿಸುವ ಎಲ್ಲರಿಗೂ ಅನ್ವಯವಾಗುವಂತೆ, ʻರಸ್ತೆ ಸುರಕ್ಷತೆಯ ಆದರ್ಶವಾಗಿʼ ಎಂಬ ಧ್ಯೇಯವನ್ನು ಈ ಬಾರಿ ಇರಿಸಿಕೊಳ್ಳಲಾಗಿದೆ.
ರಸ್ತೆ ಸುರಕ್ಷತೆಗೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಬೇಸರಿಸುವವರೇ ಹೆಚ್ಚು. ಆದರೆ ಅವೆಲ್ಲ ಜನರ ಸುರಕ್ಷತೆಗಾಗಿ ಜಾರಿಯಾದವು. ಕಾನೂನುಗಳ ಹೊರತಾಗಿಯೂ ಕೆಲವು ಎಚ್ಚರಿಕೆಗಳನ್ನು ಎಲ್ಲರೂ ತೆಗೆದುಕೊಳ್ಳಬಹುದು. ಏನವು?
ಸೀಟ್‌ಬೆಲ್ಟ್: ದಂಡ ತಪ್ಪಿಸಿಕೊಳ್ಳುವುದಕ್ಕೆ ಮಾತ್ರವೇ ಸೀಟ್‌ಬೆಲ್ಟ್ ಧರಿಸುವುದಲ್ಲ; ಅದು ನಮ್ಮ ಸುರಕ್ಷತೆಗಾಗಿಯೇ ವಿನ್ಯಾಸಗೊಂಡಿದೆ. ಕಾರಿನ ಹಿಂಬದಿಯ ಆಸನಗಳಲ್ಲಿದ್ದರೂ ಸೀಟ್ ಬೆಲ್ಟ್ ಧರಿಸುವುದು ಒಳ್ಳೆಯದೇ. ಎಷ್ಟೋ ಬಾರಿ ಇವುಗಳಿಂದ ಪ್ರಾಣ ಉಳಿದ ನಿದರ್ಶನಗಳಿವೆ. ಅಪಘಾತದ ಸಂದರ್ಭದಲ್ಲಿ ಗಾಯದ ಪ್ರಮಾಣವನ್ನಂತೂ ಇದು ಖಂಡಿತವಾಗಿ ತಗ್ಗಿಸುತ್ತದೆ.
ಕೆಂಪುದೀಪ: ಎಷ್ಟೇ ಅವಸರದಲ್ಲಿ ಇದ್ದರೂ, ಸಂಚಾರಿ ಸಿಗ್ನಲ್ ಉಲ್ಲಂಘಿಸಬೇಡಿ. ಇದು ನಿಮಗೆ ಮಾತ್ರವಲ್ಲ, ಸಿಗ್ನಲ್ ಉಲ್ಲಂಘಿಸದೆ ಇರುವ ಅಮಾಯಕರನ್ನೂ ಅಪಾಯಕ್ಕೆ ದೂಡಬಹುದು. ಇನ್ನೊಬ್ಬರ ಬದುಕಿನೊಂದಿಗೆ ಆಟವಾಡುವ ಹಕ್ಕು ನಿಮಗಿಲ್ಲ.
ಲಕ್ಷ್ಯವಿರಲಿ: ಗಾಡಿ ಓಡಿಸುವಾಗ ಗೆಜೆಟ್ ಉಪಯೋಗಿಸುವಂಥ ಅನಿವಾರ್ಯತೆ ಯಾರಿಗೂ ಇರುವುದಿಲ್ಲ. ಅಷ್ಟೊಂದು ಮುಖ್ಯವಾದ ಕೆಲಸವಿದ್ದರೆ, ಗಾಡಿಯನ್ನು ರಸ್ತೆ ಬದಿಗೆ ನಿಲ್ಲಿಸಿಕೊಳ್ಳಿ. ಪ್ರಯಾಣಿಸುವಾಗ ಲಕ್ಷ್ಯ ರಸ್ತೆ ಮೇಲೆಯೇ ಇರಲಿ, ಬೇರೆಡೆಗೆ ಅಲ್ಲ.
ಅತಿ ವೇಗ: ʻಅತಿ ವೇಗ ತಿಥಿ ಬೇಗʼ ಎನ್ನುವಂಥ ಘೋಷಣೆಯನ್ನು ಓದಿ ನಕ್ಕು ಮರೆತುಬಿಡುತ್ತೇವೆ. ಆದರೆ ಅತಿ ವೇಗಕ್ಕೆ ತಿಥಿಯಾಗುವವರ ಸಂಖ್ಯೆ ವರ್ಷಕ್ಕೆ ಲಕ್ಷವನ್ನೂ ಮೀರುತ್ತದೆ. ರಸ್ತೆಯಲ್ಲಿ ಚಲಿಸುವ ಇತರ ವಾಹನಗಳ ಅಂಚಲ್ಲಿ ಒತ್ತರಿಸಿಕೊಂಡು ಚಲಿಸಬೇಡಿ. ಕೊಂಚ ಜಾಗ ಬಿಟ್ಟುಕೊಳ್ಳಿ.
ವಿರಾಮ ಇರಲಿ: ರಾತ್ರಿಯಿಡೀ ಗಾಡಿ ಓಡಿಸುವುದು, ನಿದ್ದೆಗೆಟ್ಟು, ಆಯಾಸಗೊಂಡು ಓಡಿಸುವ ಸಂದರ್ಭದಲ್ಲೇ ಅಪಘಾತಗಳು ಹೆಚ್ಚು. ಹಾಗಾಗಿ ಶರೀರಕ್ಕೆ ಆಯಾಸವಾದಾಗ ವಿಶ್ರಾಂತಿ ತೆಗೆದುಕೊಳ್ಳಿ. ದೀರ್ಘ ಕಾಲ ಡ್ರೈವ್ ಮಾಡುವ ಹೊತ್ತಲ್ಲಿ, ನಡುವೆ ಚಹಾ-ಕಾಫಿಗಳ ನೆವದಲ್ಲಿ ವಿರಾಮ ಇರಲಿ. ಇದರಿಂದ ಮೆದುಳು ಜಾಗೃತ ಸ್ಥಿತಿಯಲ್ಲಿ ಇರುತ್ತದೆ.
ಹವಾಮಾನ: ಅಪಘಾತಗಳಿಗೆ ಕೆಟ್ಟ ಹವಾಮಾನವೂ ಕಾರಣವಾಗುತ್ತದೆ. ತೀವ್ರ ಮಳೆ-ಗಾಳಿಯಲ್ಲಿ, ಮಂಜು ಸುರಿಯುವಾಗ ಅಥವಾ ಇಂಥ ಯಾವುದೇ ಪ್ರತಿಕೂಲ ಹವಾಮಾನದ ಹೊತ್ತಿನಲ್ಲಿ ಪ್ರಯಾಣ ನಿಲ್ಲಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ.
ಈ ಸುದ್ದಿಯನ್ನೂ ಓದಿ:Crime News: ಜಾಮೀನಿನ ಮೇಲೆ ಹೊರಬಂದ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ!