Saturday, 10th May 2025

Vaikuntha Ekadashi: ವೈಕುಂಠ ಏಕಾದಶಿ ದೇವಾಲಯಗಳಲ್ಲಿ ಹರಿದು ಬಂದ ಜನಸಾಗರ

ಗೋವಿಂದ ನಾಮಸ್ಮರಣೆಯಲ್ಲಿ ತಲ್ಲೀನರಾದ ಜಿಲ್ಲೆಯ ಜನತೆ

ಚಿಕ್ಕಬಳ್ಳಾಪುರ : ವೈಕುಂಠ ಏಕಾದಶಿ ಜಿಲ್ಲೆಯ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ಆಯೋಜಿಸಿಲಾಗಿತ್ತು. ಉತ್ತರ ದ್ವಾರದಿಂದ ದೇವರ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಉತ್ತರ ದ್ವಾರದಿಂದ ಏಕಾದಶಿಯಂದು ದೇವರ ದರ್ಶನ ಪಡೆದಲ್ಲಿ ವೈಕುಂಠ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯು ಭಕ್ತರಲ್ಲಿದ್ದು, ಈ ನಿಟ್ಟಿನಲ್ಲಿ ಉತ್ತರ ದ್ವಾರದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಇಟ್ಟು ಅದರ ಕೆಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡುವ ಪದ್ಧತಿ ಅನಾದಿ ಕಾಲದಿಂದ ನಡೆದು ಬಂದಿದೆ. ಅಂತೆಯೇ ಸೋಮವಾರ ದೇವಾ ಲಯಗಳಲ್ಲಿ ಭಕ್ತರಿಗೆ ವಿಶೇಷ ಉತ್ತರ ದ್ವಾರ ದರ್ಶನ ನಡೆಯಿತು.

ವೈಷ್ಣವ ಕ್ಷೇತ್ರ ಎಂದೇ ಪ್ರಸಿದ್ಧಿಯಾಗಿರುವ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯ, ಕಂದವಾರಪೇಟೆ ಯಲ್ಲಿನ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಶ್ರೀನಿವಾಸಸಾಗರ ಹಾಗೂ ಗವಿಗಾನಹಳ್ಳಿ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ, ಪೇಟೆ ಆಂಜನೇಯಸ್ವಾಮಿ ದೇವಾಲಯ, ನಂದಿಯ ವೆಂಕಟೇಶ್ವರ ದೇವಾ ಲಯ , ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರದೊಂದಿಗೆ ವೈಕುಂಠ ದ್ವಾರ ದರ್ಶನ ಏರ್ಪಡಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ನಗರದ ಕಂದವಾರಪೇಟೆಯ ದೇವಾಲಯದಲ್ಲಿ ದೇವರ ದರ್ಶನಕ್ಕೆ ಕಿಲೋಮೀಟರ್‌ ಗಟ್ಟಲೆ ಜನತೆ ಸರತಿಯಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ತಿರುಪತಿ ಲಾಡು ವಿತರಣೆ
ತಾಲೂಕಿನ ಗವಿಗಾನಹಳ್ಳಿ ಗ್ರಾಮದಲ್ಲಿರುವ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಶೇಷವಾಗಿ ವೈಕುಂಠ ಏಕಾದಶಿ, ಸ್ವಾಮಿಯ ರಥೋತ್ಸವ ಏರ್ಪಡಿಸಿದ್ದರು.ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ತಿರುಪತಿ ತಿರುಮಲ ಮಾದರಿಯಲ್ಲಿ ಉಚಿತವಾಗಿ ಲಾಡು ವಿತರಿಸಿ,ಅನ್ನದಾನ ಏರ್ಪಡಿಸಿ ದೇವರ ಸೇವೆ ನಡೆಸಿಕೊಟ್ಟರು.ನೂರಾರು ಭಕ್ತಾಧಿಗಳು ಈ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *