Saturday, 10th May 2025

Y S Ganesh Column: ಸಮಯೋಚಿತ ಲೇಖನ

ಪ್ರತಿಸ್ಪಂದನ

ವೈ.ಎಸ್.ಗಣೇಶ್‌, ಬೆಂಗಳೂರು

ವೆಂಕಟೇಶ ಬೈಲೂರು ಅವರ ‘ಮಂಗಳ ದ್ರವ್ಯಗಳನ್ನು ತುಳಿಯುವುದು ತರವೇ?’ ಎಂಬ ಲೇಖನ (ವಿಶ್ವವಾಣಿಯ ‘ಆರಾಮ’ ಪುರವಣಿ, ಜ.೭) ಸಮಯೋಚಿತವಾಗಿದೆ. ಲೇಖಕರು ಗಮನಿಸಿರುವ ಅಂಶಗಳೆಲ್ಲಾ ನಮಗೂ ಅನಿಸಿರು ವಂಥವೇ. ವಿವಾಹ ಮಂಟಪದ ಮೇಲಿನ ಅಕ್ಷತೆಕಾಳು ತುಳಿಯುವುದು, ಊಟಕ್ಕೆ ಒಂದು ಪಂಕ್ತಿಯವರು ಕೂತಿರು ವಾಗಲೇ ಮುಂದಿನ ಪಂಕ್ತಿಯವರು ಅವರ ಹಿಂದೆ ಹಾತೊರೆದು ನಿಲ್ಲುವುದು, ಹಿರಿಯರನ್ನು ಗಮನಿಸದ-ಗೌರವಿಸದ ಬಂಧುಗಳು ಮತ್ತು ಕಿರಿಯರು- ಇವೆಲ್ಲಾ ಇಂದು ಕಲ್ಯಾಣ ಮಂಟಪಗಳಲ್ಲಿ ಕಾಣುವಂಥ ದೃಶ್ಯಗಳೇ!

ಇನ್ನು, ಪುರೋಹಿತರ ಪಾಡನ್ನಂತೂ ಕೇಳುವುದೇ ಬೇಡ! ಒಂದು ರೀತಿಯಲ್ಲಿ ತಾತ್ಸಾರಕ್ಕೆ ಗುರಿಯಾಗುವ ಮಂದಿ ಇವರು, ಕಾರಣ ಛಾಯಾಗ್ರಾಹಕರ ‘ಏಕಸ್ವಾಮ್ಯತೆ’ಯೇ ಅಲ್ಲಿ ಮನೆಮಾಡಿರುತ್ತದೆ. ಮದುವೆ ಮಂಟಪವನ್ನೇ ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡವರಂತೆ ಕೆಲ ಛಾಯಾಗ್ರಾಹಕರು ವರ್ತಿಸುವುದಿದೆ. ಮದುವೆಯ ವಿಧಿಯ ಆಚರಣೆ ನಡೆಯುವಾಗ ಸಾಕಷ್ಟು ದೂರದಲ್ಲಿದ್ದುಕೊಂಡೇ ಪೋಟೋ ತೆಗೆಯುವ ಸಾಧ್ಯತೆಯಿದ್ದರೂ, ಅದರ ಬದಲಿಗೆ ಚಲನಚಿತ್ರದ ಷೂಟಿಂಗ್‌ನ ಛಾಯಾಗ್ರಾಹಕರಂತೆ ಇವರು ಪುರೋ ಹಿತರು ಸೇರಿದಂತೆ ಮಂಟಪದ ಬಹುತೇಕರನ್ನು ನಿಯಂತ್ರಿ ಸುವುದಿದೆ.

ವಿವಾಹ/ಉಪನಯನಗಳ ಆಚಾರ-ವಿಚಾರಗಳು ಪುರೋಹಿತರಿಗಿಂತ ತಮಗೇ ಜಾಸ್ತಿ ಗೊತ್ತು ಎನ್ನುವಂತೆ ಅವರು ವರ್ತಿಸುವುದು, ಯಾವುದಾದರೊಂದು ಆಚರಣೆಯನ್ನು ಕ್ಲಿಕ್ಕಿಸಲು ಆಗದಿದ್ದರೆ ಅದನ್ನು ಮತ್ತೊಮ್ಮೆ ನಿರ್ವಹಿಸು ವಂತೆ ಆಗ್ರಹಿಸುವುದು, ಹೀಗೆ ವಿಲಕ್ಷಣ ರೀತಿಯಲ್ಲಿ ಕೆಲ ಛಾಯಾಗ್ರಾಹಕರು ವರ್ತಿಸುವುದಿದೆ. ಮದುವೆ ಮಂಟಪ ದಲ್ಲಿರುವ ವಧು-ವರರು ‘ಕಂಕಣಬದ್ಧ’ರಾಗಿ ಇರುವಂಥವರಾಗಿರುತ್ತಾರೆ, ಅವರಲ್ಲಿ ‘ಲಕ್ಷ್ಮೀ-ನಾರಾಯಣರ ಆವಾಹನೆ’ ಆಗಿರುತ್ತದೆ.

ಇಂಥ ಸಂದರ್ಭಗಳಲ್ಲಿ ಅವರನ್ನು ಆಶೀರ್ವದಿಸುವ ಆಶಯವು ಪುರೋಹಿತರ ಮೂಲಕ ನೆರವೇರಬೇಕು ಹಾಗೂ
ಅಕ್ಷತೆಯನ್ನು ಅವರಿಬ್ಬರ ಮೇಲೆ ಹಾಕಿ ಆಶೀರ್ವದಿಸಬೇಕು ಎಂಬುದು ಕ್ರಮ. ಆದರೆ ಮದುವೆ ಮಂಟಪದ ಮೇಲಿನ ನೂಕುನುಗ್ಗಲಿನಲ್ಲಿ ಮತ್ತು ಛಾಯಾಗ್ರಾಹಕರು ಒಡ್ಡುವ ಅಡೆತಡೆಯಲ್ಲಿ ಇದನ್ನು ಮಾಡಲೂ ಆಗುವುದಿಲ್ಲ, ಎಷ್ಟೋ ಸಂದರ್ಭದಲ್ಲಿ ಅಕ್ಷತೆಯೇ ಸಿಗುವುದಿಲ್ಲ. ಹೀಗಾಗಿ ವಧು-ವರರ ಪಾಲಿಗೆ ಅತ್ಯಗತ್ಯವಾಗಿರುವ ಹಿರಿಯರ ಶುಭಾಶೀರ್ವಾದ ಮತ್ತು ಸಮಾನಮನಸ್ಕರ ಶುಭಹಾರೈಕೆಯ ಶಾಸ್ತ್ರಗಳು ಅಂದುಕೊಂಡಂತೆ ನಡೆಯುವುದಿಲ್ಲ.

ಇನ್ನು ‘ಸೆಲೆಬ್ರಿಟಿ’ ಎನಿಸಿಕೊಂಡವರು ಬಂದುಬಿಟ್ಟರಂತೂ, ಆಮಂತ್ರಿತರಲ್ಲಿ ಕೆಲವರು ಇದು ಮದುವೆ ಸಮಾರಂಭ ಎಂಬುದನ್ನೂ ಮರೆತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹಾತೊರೆಯವುದಿದೆ. ಕಲ್ಯಾಣ ಮಂಟಪಗಳಲ್ಲಿ ಆಗುವ ಇಂಥ ಘಟನೆಗಳಿಂದ ಸಂಭಾವಿತ ಆಮಂತ್ರಿತರಿಗೆ ಇರಿಸು-ಮುರಿಸು ಆಗುವುದು ದಿಟ. ಆದರೆ ಇಲ್ಲಿ ಯಾರೂ ಯಾರಿಗೂ ಏನನ್ನೂ ಹೇಳದಂಥ ಪರಿಸ್ಥಿತಿ ಇರುತ್ತದೆ. ಇನ್ನು ಮೇಲಾದರೂ ಇಂಥ ಪರಿಪಾಠಗಳಿಗೆ ಪೂರ್ಣವಿರಾಮ
ಇಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯೂ, ಸಂದರ್ಭದ ಸೂಕ್ಷ್ಮತೆಯನ್ನು ಅರಿಯುವ ಗುಣವೂ ಇರಬೇಕು.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ

Leave a Reply

Your email address will not be published. Required fields are marked *