ಗಗನಮುಖಿ
ರಮಾನಂದ ಶರ್ಮಾ
ರಾಜ್ಯದಲ್ಲೀಗ ಬೆಲೆಯೇರಿಕೆಯ ಪರ್ವದ ಕುರಿತೇ ಚರ್ಚೆ ನಡೆಯುತ್ತಿದೆ! ಪೆಟ್ರೋಲ್ 3 ರು., ಡೀಸೆಲ್ 2 ರು.,
ಅಫಿಡವಿಟ್ 20ರಿಂದ 100 ರು., ಟ್ರಸ್ಟ್ ಡೀಡ್ 1000ದಿಂದ 2000 ರು., ಆಸ್ತಿ ಪರಭಾರೆ ಪತ್ರ 1000ದಿಂದ 2000 ರು. ಹೀಗೆ ಏರಿಕೆ ಕಂಡಿವೆ. ವಿದ್ಯುಚ್ಛಕ್ತಿ ದರವು ಯುನಿಟ್ಗೆ 75 ಪೈಸೆ ಏರಿಕೆಯಾದ ಮೇಲೆ, ಈಗ ಬಸ್ ಟಿಕೆಟ್ ದರ ಶೇ.15ರಷ್ಟು ಹೆಚ್ಚಿದೆ. ಮೆಟ್ರೋ ಟಿಕೆಟ್ಟು, ಹಾಲು, ಆಟೋ ಮತ್ತು ನೀರಿನ ದರಗಳೂ ಹೆಚ್ಚಾಗುವ ಕುರಿತು ಮಾತುಗಳು ಹರಿದಾಡುತ್ತಿವೆ.

ರಾಜ್ಯದಲ್ಲೀಗ ಬೆಲೆಯೇರಿಕೆಯ ಪರಿಪಾಠವು ‘ಪವರ್ ಟಾಪ್ಗೇರ್ ’ಗೆ ತಿರುಗಿದೆ ಎನ್ನುವ ಜನಸಾಮಾನ್ಯರ ಆಕ್ರೋಶ ದಲ್ಲಿ ಅರ್ಥವಿಲ್ಲದಿಲ್ಲ. ಹಾಗೆಯೇ, ಈ ಏರಿಕೆಯ ಪರ ಹಾಗೂ ವಿರುದ್ಧವಾಗಿ ರಾಜಕೀಯ ಪಕ್ಷಗಳ ಸಮರ್ಥನೆ ಮತ್ತು ಪ್ರತಿಭಟನೆಗಳಿಗೆ ಕೂಡ ತೂಕ ದಕ್ಕುವುದಿಲ್ಲ. ‘ನೀವು ಮಾಡಿದರೆ ಸರಿ, ಅದನ್ನೇ ನಾವು ಮಾಡಿದರೆ ತಪ್ಪಾ?’ ಎಂದು ಕೆಲ ರಾಜಕಾರಣಿಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವುದು ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ಹಾಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಹಿಂದೆ ಸಾರಿಗೆ ಸಚಿವರಾಗಿದ್ದಾಗ ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿದ್ದಾಗ ಪ್ರಯಾಣ ದರವನ್ನು ಏರಿಸಿದ ನಿದರ್ಶನಗಳಿವೆ. ಆಗ ಕಾಂಗ್ರೆಸ್ನವರು ಪ್ರತಿಭಟಿಸಿದ್ದರು.
ಈಗಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, “2020ರ ನಂತರ ಮೊದಲ ಬಾರಿಗೆ ಈಗ ದರ ಏರಿಸಲಾಗಿದೆ” ಎಂದಿದ್ದಾರೆ; ಇತರ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಶೇ.12ರಷ್ಟು ಏರಿಕೆ ಮಾಡಿದ್ದರೂ, ಬಿಎಂಟಿಸಿಯಲ್ಲಿ 2014ರ ಬಳಿಕ ಸಾರಿಗೆ ದರದ ಪರಿಷ್ಕರಣೆಯಾಗದಿರುವುದನ್ನು ಅವರು ಎತ್ತಿತೋರಿಸಿ, ದರ ಹೆಚ್ಚಳವನ್ನು ಸಮರ್ಥಿಸಿ ಕೊಂಡಿದ್ದಾರೆ. ಹಾಗೆಯೇ ಹಿಂದಿನ ಸರಕಾರವು 5999 ಕೋಟಿ ರು. ಮೊತ್ತದ ಸಾಲವನ್ನು ಬಿಟ್ಟುಹೋಗಿರುವುದನ್ನು ಅವರು ಒತ್ತಿ ಹೇಳಿ, ಪ್ರಯಾಣದರ ಏರಿಕೆಗೆ ಅದನ್ನೂ ಕಾರಣವಾಗಿಸಿದ್ದಾರೆ.
ಭಾರತೀಯ ಜನತಾ ಪಕ್ಷವಂತೂ, ಈ ಬೆಲೆಯೇರಿಕೆಯ ಹಿಂದಿರುವ ಸರಕಾರದ ಅಸಹಾಯಕತೆ ಮತ್ತು ಸಮೀಕರಣ ವನ್ನು ಅರಿಯಲು ಯತ್ನಿಸದೆಯೇ, ‘ವಿರೋಧಿಸುವುದೇ ವಿಪಕ್ಷಗಳ ಕೆಲಸ’ ಎಂಬ ಅಲಿಖಿತ, ಆದರೆ ಧಾರಾಳವಾಗಿ ಅಳವಡಿಸಿಕೊಂಡು ಅನುಸರಿಸಲಾಗುವ ರಾಜಕೀಯ ತಂತ್ರಗಾರಿಕೆಗೆ ಶರಣಾಗಿದೆ. “ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯವನ್ನು ನೀಡಿದ್ದರಿಂದಲೇ ಸಾರಿಗೆ ನಿಗಮಗಳು ನಷ್ಟವನ್ನು ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸಲು ಸರಕಾರವು ಪ್ರಯಾಣದರವನ್ನು ಏರಿಸುವ ಅನಿವಾರ್ಯತೆಯಲ್ಲಿ ಸಿಲುಕಿದೆ” ಎಂದು ದೂರುತ್ತಿದೆ ಬಿಜೆಪಿ.
ವಿಚಿತ್ರವೆಂದರೆ, ಕೇಂದ್ರ ಸರಕಾರವು ಯಾವುದೇ ವಸ್ತು ಮತ್ತು ಸೇವೆಯ ಬೆಲೆಯನ್ನು ಏರಿಸಿದಾಗಲೂ ರಾಜ್ಯ
ಬಿಜೆಪಿ ಪ್ರತಿಭಟಿಸಲಿಲ್ಲ. ಕಳೆದ 10 ವರ್ಷಗಳಲ್ಲಿ ತೈಲಬೆಲೆಯು ಹಲವು ಬಾರಿ ಹೆಚ್ಚಾಗಿದೆ, ಅಡುಗೆ ಅನಿಲದ ಸಿಲಿಂಡರ್ ಬೆಲೆ ಸಾವಿರ ರು. ದಾಟಿದೆ. ಕೋವಿಡ್ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿದಾಗ ಕೂಡ ಭಾರತದಲ್ಲಿ ತೈಲಬೆಲೆ ಇಳಿಯಲಿಲ್ಲ. ‘ಜಿಎಸ್ಟಿ’ ಬಾಬತ್ತಿನಿಂದಾಗಿ ಹಲವು ಪದಾರ್ಥಗಳ ಬೆಲೆ ಏರುತ್ತಲೇ ಇದ್ದು, ಪಾಪ್ ಕಾರ್ನ್ ಕೂಡ ಜಿಎಸ್ಟಿಗೆ ಸಿಲುಕಿದೆ! ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಟೋಲ್ ನಿರಂತರ ಏರುತ್ತಲೇ ಇದೆ, ಇದು ರಾಜ್ಯ ಬಿಜೆಪಿಯ ಗಮನಕ್ಕೆ ಬರುವುದಿಲ್ಲ. ಆದರೆ, ರಾಜ್ಯ ಸರಕಾರ ಯಾವುದಾದರೂ ಸಾಮಗ್ರಿಯ/
ಸೇವೆಯ ಬೆಲೆಯೇರಿಸಿದರೆ ನಮ್ಮಲ್ಲಿನ ಬಿಜೆಪಿಯವರು ಅದನ್ನು ಫಕ್ಕನೆ ಹಿಡಿದುಕೊಳ್ಳುತ್ತಾರೆ, ಅರೆಕ್ಷಣವೂ ವಿಳಂಬಿ ಸದೆ ಅದನ್ನು ಪ್ರತಿಭಟಿಸಲು ರಸ್ತೆಗಿಳಿಯುತ್ತಾರೆ. ರಾಜ್ಯದಲ್ಲಿ ಅಕಸ್ಮಾತ್ ಬಿಜೆಪಿ ಅಧಿಕಾರದಲ್ಲಿದ್ದು, ಬಸ್ ಪ್ರಯಾಣ ದರವನ್ನು ಏರಿಸಿದ್ದಿದ್ದರೆ, ಕಾಂಗ್ರೆಸ್ ಕೂಡ ಇದೇ ಮಾದರಿಯಲ್ಲಿ ಬೀದಿಗಿಳಿಯುತ್ತಿತ್ತು. ಆ ಮಾತು ಬೇರೆ!
ಹಣದುಬ್ಬರದ ಈ ದಿನಗಳಲ್ಲಿ ತಿಂಗಳ ಕೊನೆ ತಲುಪುವುದೂ ದುಸ್ತರವಾಗಿರುವಾಗ ಈ ಬೆಲೆಯೇರಿಕೆಯು ‘ಬಾಗಿದವನ ಬೆನ್ನ ಮೇಲೆ ಇನ್ನೊಂದು ಏಟು’ ಎನ್ನುವಂತಾಗಿರುವುದರಲ್ಲಿ ಎರಡು ಮಾತಿಲ್ಲ. ಆರ್ಥಿಕವಾಗಿ ‘ಮಧ್ಯಮ ಮತ್ತು ಬಡ’ ಎಂಬ ವರ್ಗದಲ್ಲಿರುವವರಿಗೆ ಇದು ಸಹಿಸಲಾಗದ ಒತ್ತಡ. ಆಡಳಿತಗಾರರ ದೃಷ್ಟಿಯಲ್ಲಿ- ‘ಇದು ಕೇವಲ ಶೇ.೧೫ರಷ್ಟು ಹೆಚ್ಚಳವಾಗಿದ್ದು ಜನಸಾಮಾನ್ಯರಿಗೆ ಭಾರವಾಗದು’. ಆದರೆ, ಬೂಟು ಧರಿಸಿದವನಿಗೆ ಮಾತ್ರವೇ ಗೊತ್ತು, ಅದು ಎಲ್ಲಿ ಕಚ್ಚುತ್ತದೆ ಎನ್ನುವ ಸತ್ಯ. ಇದು ಆಡಳಿತಗಾರರಿಗೆ ಅರಿವಾಗದ ಕಹಿಸತ್ಯ! ತಮಗೆ ಬರುವ ಆದಾಯದಲ್ಲಿಯೂ ಇದೇ ಪ್ರಮಾಣದಲ್ಲಿ ಏರಿಕೆಯಾದರೆ ಜನರ್ಯಾರೂ ಸರಕಾರ ಕೈಗೊಳ್ಳುವ ಬೆಲೆಯೇರಿಕೆಯನ್ನು ಪ್ರಶ್ನಿಸುವುದಿಲ್ಲ.
ನಮ್ಮ ಆಳುಗರಲ್ಲಿ ಕಾಣಬರುವ ಒಂದು ವಿಶೇಷವೆಂದರೆ, ಯಾವುದಾದರೊಂದು ಬಾಬತ್ತಿನ ಬೆಲೆಯೇರಿಸಬೇಕಾಗಿ ಬಂದಾಗ, “ಕಳೆದ ಕೆಲವು ವರ್ಷಗಳಿಂದ ಏರಿಸಿಲ್ಲ, ನೆರೆರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ದರ
ಇದೆ” ಎನ್ನುವ ವಾದವನ್ನು ಮುಂದಿಟ್ಟು, ಬೆಲೆಯೇರಿಕೆಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ (ದುಡಿಯುವ ವರ್ಗಕ್ಕೆ ಸಂಬಳ ಹೆಚ್ಚಿಸುವ ನಿಟ್ಟಿನಲ್ಲಿ ಈ ಮಾನದಂಡವನ್ನು ಬಳಸುವುದಿಲ್ಲ, ಅದು ಇನ್ನೊಂದು ವಿಪರ್ಯಾಸ!). ಆದರೆ, ಅನ್ಯರಾಜ್ಯಗಳಲ್ಲಿ ನಮಗಿಂತ ಕಡಿಮೆಯಿದ್ದರೆ ‘ಜಾಣಕುರುಡು’ ಪ್ರದರ್ಶಿಸುತ್ತಾರೆ. ಉದಾಹರಣೆಗೆ, ಹಾಲಿನ ದರವು ಮಹಾರಾಷ್ಟ್ರದಲ್ಲಿ 56.19 ರು., ಕೇರಳದಲ್ಲಿ 52 ರು., ಗುಜರಾತ್ನಲ್ಲಿ 54 ರು. ಇದ್ದು, ಕರ್ನಾಟಕದಲ್ಲಿ ಹಾಲಿನ ದರವನ್ನು ಏರಿಸುವಾಗ ಈ ಮಾಹಿತಿಯನ್ನು ದೊಡ್ಡ ದನಿಯಲ್ಲಿ ಉಲ್ಲೇಖಿಸಲಾಗುತ್ತದೆ ಅಥವಾ ಪ್ರಯಾಣದರದ ವಿಷಯ ಬಂದಾಗ, ‘ಕರ್ನಾಟಕದಲ್ಲಿ ಕನಿಷ್ಠ ದರ 5 ರು. ಇದ್ದರೆ ಹೈದರಾಬಾದ್ನಲ್ಲಿ 10 ರು. ಇದೆ’ ಎಂಬ ಮಾಹಿತಿ ಯನ್ನು ಕರ್ನಾಟಕದ ಜನರ ಗಮನಕ್ಕೆ ತರಲಾಗುತ್ತದೆ; ಆದರೆ, ತಮಿಳುನಾಡಿನಲ್ಲಿ ಕನಿಷ್ಠದರವು 4 ರು.ನಷ್ಟು ಇರುವುದನ್ನು ಮರೆಮಾಚಲಾಗುತ್ತದೆ!
ವಸ್ತು ಅಥವಾ ಸೇವೆ ಯಾವುದೇ ಇರಲಿ, ಅವುಗಳ ಬೆಲೆಯು ಆಗಿಂದಾಗ್ಗೆ ಏರುವುದು ಒಂದು ಸಾಮಾನ್ಯ ಪ್ರಕ್ರಿಯೆ; ಅದು ನಿಂತ ನೀರಿನಂತೆ ಸ್ಥಿರವಾಗಿರುವುದು ಅಸಾಧ್ಯ. ಕಳೆದೊಂದು ದಶಕದಲ್ಲಿ ಡೀಸೆಲ್ ದರದಲ್ಲಿ ಭಾರಿ ಏರಿಕೆ ಯಾಗಿದೆ (2020ರಲ್ಲಿ 68 ರು., ಪ್ರಸ್ತುತ 69 ರು.). ಹಾಗೆಯೇ ಹೊಸ ಬಸ್ಸುಗಳ ಖರೀದಿ, ಬಿಡಿಭಾಗಗಳ ದರ ಮತ್ತು ಬಸ್ಸುಗಳ ನಿರ್ವಹಣಾ ವೆಚ್ಚದಲ್ಲಿ ಕೂಡ ಭಾರಿ ಹೆಚ್ಚಳವಾಗಿದೆ. ಐಷಾರಾಮಿ ಪ್ರಯಾಣಕ್ಕಾಗಿ ಸಂಸ್ಥೆಯು ಕೋಟ್ಯಂತರ ರು. ವೆಚ್ಚದಲ್ಲಿ ನೂರಾರು ಸುಖಾಸೀನ ಬಸ್ಸುಗಳನ್ನು ಒದಗಿಸಿದೆ. ಸಿಬ್ಬಂದಿಗೆ ಆಗುತ್ತಿರುವ ವೆಚ್ಚವೇ ಸಂಸ್ಥೆಯ ಬಹುಪಾಲು ಆದಾಯವನ್ನು ಕಬಳಿಸುತ್ತದೆ ಎಂಬುದು ಗಮನಿಸಬೇಕಾದ ಮತ್ತಷ್ಟು ಅಂಶಗಳು. ಒಟ್ಟಾರೆಯಾಗಿ ಹೇಳುವುದಾದರೆ, ವಸ್ತು ಅಥವಾ ಸೇವೆಯ ಬೆಲೆಯೇರಿಕೆಗೆ ಯಾವುದೇ ರಾಜಕೀಯ ಪಕ್ಷವನ್ನು ನೇರವಾಗಿ ದೂರುವಂತಿಲ್ಲ; ಯಾವ ಪಕ್ಷ ಅಽಕಾರದಲ್ಲಿದ್ದರೂ ಇದು ಅನಿವಾರ್ಯ ಕ್ರಮ. ನಿತ್ಯಜೀವನದ ಪ್ರತಿಯೊಂದು ಸ್ತರದಲ್ಲೂ ಬೆಲೆಯೇರಿಕೆಯ ಛಾಯೆಯಿದೆ.
ಸೂಜಿಯಿಂದ ಹಿಡಿದು ಮಠ-ಮಂದಿರದಲ್ಲಿ ಪೂಜಾಸೇವೆಗೆ ನಿಗದಿ ಪಡಿಸಲಾಗಿರುವ ಶುಲ್ಕದವರೆಗೂ ಬೆಲೆಯೇರಿಕೆ ಯು ತನ್ನ ಬಾಲವನ್ನು ಚಾಚಿರುವಾಗ, ಬಸ್ ಪ್ರಯಾಣದರವನ್ನಷ್ಟೇ ಪ್ರತ್ಯೇಕವಾಗಿ ನೋಡಲು ಸಾಧ್ಯವೇ? ಎಂಬ ಪ್ರಶ್ನೆಯಲ್ಲಿ ತಥ್ಯವಿದೆ. ಬೆಲೆಯೇರಿಕೆಗೆ ಇರುವ ಕಾರಣಗಳು ಹಲವು; ಆದರೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಅದರ ಹೊಣೆಯನ್ನು ಹೊರಬೇಕಾಗಿ ಬರುತ್ತದೆಯಷ್ಟೇ. ಬೆಲೆಯೇರಿಕೆಯನ್ನು ಪ್ರಸ್ತುತ ನಖಶಿಖಾಂತವಾಗಿ ಪ್ರತಿಭಟಿಸುತ್ತಿರುವ ಪಕ್ಷದವರು ಅಧಿಕಾರದಲ್ಲಿದ್ದಿದ್ದರೂ ಮಾಡುತ್ತಿದ್ದುದು ಇದನ್ನೇ!
ಬಹುಶಃ ಈ ಸತ್ಯ ಅವರಿಗೂ ಗೊತ್ತು. ಆದರೆ, ‘ಪಕ್ಷ ರಾಜಕೀಯ’ ಅವರ ಕೈಯನ್ನು ಕಟ್ಟುತ್ತದೆ. ‘ನಾವು ಮಾಡಿದರೆ ಸರಿ, ಅದನ್ನೇ ನೀವು ಮಾಡಿದರೆ ತಪ್ಪು’ ಎಂಬ ಅಲಿಖಿತ ಸಿದ್ಧಾಂತದ ಮೇಲೆಯೇ ದೇಶದ ರಾಜಕೀಯ ನಡೆಯೋದು. ಉದಾಹರಣೆಗೆ- ಕಾಂಗ್ರೆಸ್ ಪಕ್ಷವು ಮತದಾರರಿಗೆ ‘ಪಂಚ ಗ್ಯಾರಂಟಿ’ ಹೆಸರಲ್ಲಿ ಹಲವು ಉಚಿತ ಸೌಲಭ್ಯಗಳ ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯೇರಿದಾಗ, ದೇಶಾದ್ಯಾಂತ ಅವನ್ನು ‘ಬಿಟ್ಟಿಭಾಗ್ಯ’ ಎಂದು ಜರಿಯಲಾಗಿತ್ತು. ಹಾಗೆ ಲೇವಡಿ ಮಾಡಿದವರೇ ಇತ್ತೀಚೆಗೆ ಆ ‘ಉಚಿತ’ಗಳಿಗೆ ತಲೆಬಗ್ಗಿಸಿ ಅಧಿಕಾರದ ಗದ್ದುಗೆಯೇರಿದ್ದಾರಲ್ಲಾ, ಇದಕ್ಕೇ ನಂತೀರಿ?!
ಪ್ರಯಾಣದರ ಏರಿಕೆಯು ಜನಸಾಮಾನ್ಯರ ದೃಷ್ಟಿಯಲ್ಲಿ ‘ಸ್ವೀಕಾರಾರ್ಹವಲ್ಲದ’ ಕ್ರಮ ಇರಬಹುದು; ಆದರೆ ಇದನ್ನು ರಾಜಕೀಯದ ಕನ್ನಡಕದೊಳಗಿಂದ ನೋಡದೆ ವಾಸ್ತವಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ಇಂದು ಸಾರ್ವತ್ರಿಕವಾಗಿರುವ ಬೆಲೆಯೇರಿಕೆಗೆ ಸಾರಿಗೆ ನಿಗಮವೂ ತಲೆಬಾಗಬೇಕಾಗಿ ಬಂದಿರುವುದನ್ನು ಅನಿ ವಾರ್ಯತೆಯ ದೃಷ್ಟಿಯಲ್ಲಿ ವಿಶ್ಲೇಷಿಸಬೇಕಿದೆ. ನಿಗಮವು ನಷ್ಟ ಅನುಭವಿಸುವಂತೆ ಆಗಿರುವುದರಲ್ಲಿ, ಮಹಿಳೆ ಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುವ ‘ಶಕ್ತಿ’ ಯೋಜನೆಯ ಪಾಲು ಸಾಕಷ್ಟಿದೆ ಎಂಬ ಮಾತಿನಲ್ಲಿ ಅರ್ಥವಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಹಿಂತೆಗೆದುಕೊಳ್ಳುವುದು ಕಷ್ಟ ಮತ್ತು ಇಂಥ ಕ್ರಮವು
ಆಡಳಿತ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಅಡ್ಡಗಾಲು ಹಾಕುವುದು ಸತ್ಯ. ಈ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಮಾಡುವವರಿಗೆ, ‘ಗರಿಷ್ಠ ಅಂತರ, ದಿನಕ್ಕೆ ಒಮ್ಮೆ ಮಾತ್ರ, ದಿನಗೂಲಿ ಮಹಿಳೆಯರಿಗೆ ಮಾತ್ರ, ನಿರ್ದಿಷ್ಟ ಮಾರ್ಗ/ತಾಲೂಕು/ಜಿಲ್ಲೆಯಲ್ಲಿ ಮಾತ್ರ, ಹಿರಿಯ ನಾಗರಿಕರು, ರೋಗಿಗಳು, ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ
ಮಾತ್ರ’ ಎಂಬಂಥ ನಿಬಂಧನೆಗಳನ್ನು ಹಾಕಿದ್ದಿದ್ದರೆ, ಈ ಯೋಜನೆಯ ದುರುಪಯೋಗ ಕಡಿಮೆಯಾಗುತ್ತಿತ್ತೇನೋ ಎಂಬ ಅಭಿಪ್ರಾಯ ಅಲ್ಲಲ್ಲಿ ಕೇಳಿಬರುತ್ತಿದೆ.
ಹಾಗೆಯೇ, ‘ಇದು ಸಾರಿಗೆ ನಿಗಮವು ಮುಂದಿನ ದಿನಗಳಲ್ಲಿ ಕೂಡ ಪುನಃ ಪ್ರಯಾಣದರ ಏರಿಕೆಗೆ ಶರಣಾಗುವುದನ್ನು ತಪ್ಪಿಸಬಹುದು’ ಎನ್ನಲಾಗುತ್ತಿದೆ. ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿ, ಪುರುಷರಿಂದ
ಮಾತ್ರ ಹಣ ಪೀಕಿಸುವುದು ಯಾವ ನ್ಯಾಯ? ಎಂಬ ಪ್ರಶ್ನೆ ಕ್ರಮೇಣ ಜೋರಾಗಿ ಕೇಳುತ್ತಿದೆ. ಸಮಾನತೆ ಮತ್ತು ತಾರತಮ್ಯದ ಹೆಸರಿನಲ್ಲಿ ಈ ‘ವಿಷಯ’ವು ‘ವಿವಾದ’ವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?