ಲಾಸಾ: ಮಂಗಳವಾರ (ಜ. 7) ಬೆಳಗ್ಗೆ ಟಿಬೆಟ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಹಲವು ಮನೆಗಳಿಗೆ, ಕಟ್ಟಡಗಳಿಗೆ ಹಾನಿಯಾಗಿದೆ (Tibet Earthquake).
ಇನ್ನು ಮಂಗಳವಾರ ಸಂಜೆ ಟಿಬೆಟ್ನಲ್ಲಿ ಮತ್ತೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಆಫ್ ಸೀಸ್ಮಾಲಜಿ (National Centre of Seismology) ವರದಿ ಮಾಡಿದೆ. ಭಾರತೀಯ ಕಾಲಮಾನ ಸಂಜೆ 5:52ಕ್ಕೆ ಭೂಮಿ ಮತ್ತೊಮ್ಮೆ ಕಂಪಸಿದೆ. ಈ ಭೂಕಂಪವು 16 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಸದ್ಯ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
8,00,000 ಜನಸಂಖ್ಯೆ ಹೊಂದಿರುವ ಟಿಬೆಟ್ನ ಶಿಗಾಟ್ಸೆ ಪ್ರದೇಶದಾದ್ಯಂತ ಭೂಕಂಪದ ಪರಿಣಾಮ ಕಂಡುಬಂದಿದೆ. ನೆರೆಯ ನೇಪಾಳದ ರಾಜಧಾನಿ ಕಠ್ಮಂಡು, ಭೂತಾನ್ ಮತ್ತು ಉತ್ತರ ಭಾರತದ ಬಿಹಾರ ಸೇರಿದಂತೆ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಕ್ಸಿನ್ಹುವಾ ಸುದ್ದಿಸಂಸ್ಥೆಯ ಪ್ರಕಾರ, ಭೂಕಂಪದ ನಂತರ ಚೀನಾ ಎವರೆಸ್ಟ್ ಪ್ರವೇಶವನ್ನು ಮುಚ್ಚಿದೆ.
A massive earthquake of 7.1 magnitude struck the Tibet-Nepal border #Tibet #nepal #earthquake #hhpvvirus #lockdown pic.twitter.com/fyxT0TZf3G
— Kreatly (@kreatlylingdoh1) January 7, 2025
ಚೀನಾದಿಂದ ಪರಿಸ್ಥಿತಿ ಅವಲೋಕನ
ಭೂಕಂಪದ ಕೇಂದ್ರಬಿಂದುವಿನ ಪರಿಸ್ಥಿತಿಯನ್ನು ಅವಲೋಕಿಸಲು ಚೀನಾದ ಮಿಲಿಟರಿ ಡ್ರೋನ್ ಅನ್ನು ನಿಯೋಜಿಸಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (People’s Liberation Army)ಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಘೋಷಿಸಿದೆ. ವಾಯುಪಡೆಯು ತಕ್ಷಣವೇ ವಿಪತ್ತು ಪರಿಹಾರ ತುರ್ತು ಯೋಜನೆಯನ್ನು ಸಕ್ರಿಯಗೊಳಿಸಿದೆ. ವಿಪತ್ತು ಪರಿಹಾರಕ್ಕೆ ಸಹಾಯ ಮಾಡಲು ಸಾರಿಗೆ ಮತ್ತು ವೈದ್ಯಕೀಯ ವಿಮಾನಗಳು, ಹೆಲಿಕಾಪ್ಟರ್ ಮತ್ತಿತರ ಪಡೆಗಳ ತಂಡವು ಸನ್ನದ್ಧವಾಗಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ. ಸದ್ಯ ವಿವಿಧ ಕಡೆಗಳಿಂದ ನೆರವು ಹರಿದು ಬರುತ್ತಿದೆ.
ಸಂತಾಪ ಸೂಚಿಸಿದ ಪುಟಿನ್, ದಲೈಲಾಮಾ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು ಟಿಬೆಟ್ನ ಆಧ್ಯಾತ್ಮಿಕ ಗುರು 14ನೇ ದಲೈಲಾಮಾ ಟೆಂಜಿನ್ ಗ್ಯಾಟ್ಸೊ ಅವರು ಕೂಡ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಟಿಬೆಟ್ನ ಕೆಲವು ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ 5 ವರ್ಷಗಳಲ್ಲಿ 200 ಕಿ.ಮೀ. ವ್ಯಾಪ್ತಿಯಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ. ಇಲ್ಲಿ ಕಳೆದ 3 ವರ್ಷಗಳಲ್ಲಿ ಸುಮಾರು 100ರಷ್ಟು ಸಾರಿ ಭೂಮಿ ಕಂಪಿಸಿದ್ದರೂ ಅವು ಇಷ್ಟು ಶಕ್ತವಾಗಿರಲಿಲ್ಲ. ಭಾರತದಲ್ಲಿ ಭೂಕಂಪದ ಅನುಭವವಾಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Earthquake: ಟಿಬೆಟ್ ಭೂಕಂಪದ ಸಾವಿನ ಸಂಖ್ಯೆ 53ಕ್ಕೆ ಏರಿಕೆ- ಶಾಕಿಂಗ್ ವಿಡಿಯೊಗಳು ಭಾರೀ ವೈರಲ್