Saturday, 17th May 2025

Gujarat Borewell Tragedy:‌ ಗುಜರಾತ್‌ನಲ್ಲೂ ಬೋರ್‌ವೆಲ್‌ ದುರಂತ; 33 ಗಂಟೆಗಳ ಕಾರ್ಯಾಚರಣೆ ನಂತರ ಹೊರಬಂದ ಯುವತಿ ಸಾವು

ಗಾಂಧಿನಗರ: ಗುಜರಾತ್‌ನ(Gujarat) ಕಚ್ ಜಿಲ್ಲೆಯಲ್ಲಿ ಆಳವಾದ ಕೊಳವೆ ಬಾವಿಗೆ ಬಿದ್ದ 18 ವರ್ಷದ ಯುವತಿಯನ್ನು ಸತತ 33 ಗಂಟೆಗಳ ಕಾಲ ಕಾರ್ಯಾಚರಣೆಯ ನಂತರ ಮೇಲಕ್ಕೆತ್ತಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಳವೆ ಬಾವಿಯಿಂದ ಯುವತಿಯನ್ನು ಮಂಗಳವಾರ (ಜ. 7) ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ (Gujarat Borewell Tragedy).

ಕಚ್‌ ಜಿಲ್ಲೆಯ ಭುಜ್ ತಾಲೂಕಿನ ಕಂಡೆರೈ ಗ್ರಾಮದಲ್ಲಿ ಸೋಮವಾರ(ಜ. 6) ಬೆಳಗ್ಗೆ 6.30ರ ಸುಮಾರಿಗೆ ಯುವತಿ ಕೊಳವೆಬಾವಿಗೆ ಬಿದ್ದು ಬಿಟ್ಟಿದ್ದರು. 540 ಅಡಿ ಆಳದ ಕೊಳವೆಬಾವಿಯಲ್ಲಿ 18 ವರ್ಷದ ಯುವತಿ 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು.

ಮೃತ ಯುವತಿಯನ್ನು ರಾಜಸ್ಥಾನದ ವಲಸೆ ಕಾರ್ಮಿಕನ ಕುಟುಂಬಕ್ಕೆ ಸೇರಿರುವ ಇಂದ್ರಾ ಮೀನಾ (Indra Meena) ಎಂದು ಗುರುತಿಸಲಾಗಿದೆ. ʼʼಇಂದ್ರಾ ಮೀನಾ 540 ಅಡಿ ಆಳದ ಕೊಳವೆಬಾವಿಯಲ್ಲಿ 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾರೆʼʼ ಎಂದು ಭುಜ್ ಜಿಲ್ಲಾಧಿಕಾರಿ ಎ.ಬಿ ಜಾದವ್ ಕಾರ್ಯಾಚರಣೆ ವೇಳೆ ತಿಳಿಸಿದ್ದರು. ಯುವತಿ ಬೋರ್‌ವೆಲ್‌ಗೆ ಬಿದ್ದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಎನ್‌ಡಿಆರ್‌ಎಫ್ , ಬಿಎಸ್‌ಎಫ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಯುವತಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದವು. ಆಮ್ಲಜನಕ ಒದಗಿಸಲಾಗಿತ್ತು.

ಇತ್ತೀಚೆಗೆ ಯುವತಿಗೆ ನಿಶ್ಚಿತಾರ್ಥ ನಡೆದಿದ್ದು, ಭಾನುವಾರ (ಜ. 5ರಂದು) ರಾತ್ರಿ ಜೋಡಿಯ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿತ್ತು ಎಂದು ಯುವತಿ ಜತೆ ಕೆಲಸ ಮಾಡುತ್ತಿದ್ದ ಫಾತಿಮಾಬಾಯಿ ತಿಳಿಸಿದ್ದರು. ಹೀಗಾಗಿ ಯುವತಿ ಬೆಳಗ್ಗೆ ಬೋರ್‌ವೆಲ್‌ಗೆ ಹಾರಿದ್ದಾಳೆ ಎಂಬ ಅನುಮಾನವೂ ಮೂಡಿದೆ.

ʼʼನನ್ನ ಸಹೋದರಿ ಮತ್ತು ಮಗಳು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದರು. ವಾಪಾಸ್‌ ನನ್ನ ಮಗಳು ಮಾತ್ರ ಬಂದಿದ್ದಳು. ನನ್ನ ಸಹೋದರಿ ಬಂದಿರಲಿಲ್ಲ. ಹೀಗಾಗಿ ಹೊರಗೆ ಹೋಗಿ ನೋಡಿದಾಗ ನನ್ನ ಸಹೋದರಿ ಬೋರ್‌ವೆಲ್‌ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿದ್ದಳುʼʼ ಎಂದು ಯುವತಿಯ ಸಹೋದರ ಲಾಲ್ ಸಿಂಗ್ ಹೇಳಿದ್ದಾರೆ. ಸತತ 33 ಗಂಟೆಗಳ ಕಾರ್ಯಾಚರಣೆಯಿಂದ ಯುವತಿಯನ್ನು ಹೊರ ಕರೆತಂದರೂ ಬದುಕಿಸಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ಬೋರ್‌ವೆಲ್ ಗೆ ಬಿದ್ದಿದ್ದ 3 ವರ್ಷದ ಬಾಲಕಿ ಚೇತನಾಳನ್ನು ಸತತ 10 ದಿನgL ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಗಿತ್ತು. ಆದರೆ ಅವಳೂ ಮೃತಪಟ್ಟಿದ್ದಳು.

ಈ ಸುದ್ದಿಯನ್ನೂ ಓದಿ:Rajasthan Borewell tragedy : ಫಲಿಸಲಿಲ್ಲ ಪ್ರಾರ್ಥನೆ- ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಪುಟ್ಟ ಕಂದಮ್ಮ

Leave a Reply

Your email address will not be published. Required fields are marked *