Saturday, 17th May 2025

Rajiv Kumar: ಇವಿಎಂ ಹ್ಯಾಕ್‌ ಸಾಧ್ಯವಿಲ್ಲವೆಂದು ನ್ಯಾಯಾಲಯವು 42 ಬಾರಿ ಹೇಳಿದೆ; ಸಿಇಸಿ ರಾಜೀವ್‌ ಕುಮಾರ್‌ ಸ್ಪಷ್ಟನೆ

ನವದೆಹಲಿ: ಇವಿಎಂಗಳನ್ನು(EVM) ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅವುಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಆಧಾರರಹಿತ ಎಂದು ನ್ಯಾಯಾಲಯಗಳು ಈವರೆಗೆ 42 ಬಾರಿ ತೀರ್ಪುಗಳನ್ನು ನೀಡಿವೆ ಎಂದು ಮುಖ್ಯ ಚುನಾವಣಾ ಆಯುಕ್ತ (Chief Election Commissioner Of India) ರಾಜೀವ್ ಕುಮಾರ್ (Rajiv Kumar) ಮಂಗಳವಾರ (ಜ. 7) ಹೇಳಿದ್ದಾರೆ.

ಮತಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ರಾಜೀವ್‌ ಕುಮಾರ್ ನ್ಯಾಯಾಲಯಗಳ ತೀರ್ಪನ್ನು ಪ್ರಸ್ತಾಪಿಸುವ ಮೂಲಕ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ ಸಿಇಸಿ, ಸುಳ್ಳು ಮಾಹಿತಿಗಳನ್ನು ನಂಬದಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

“ಮತದಾನದ ದಿನಕ್ಕಿಂತ ಏಳರಿಂದ ಎಂಟು ದಿನಗಳ ಮೊದಲು ಮಾತ್ರ ಇವಿಎಂಗಳನ್ನು ನಿಯೋಜಿಸಲಾಗುತ್ತದೆ ಮತ್ತು ಅಭ್ಯರ್ಥಿಗಳಿಗೆ ಇವುಗಳ ಬಗ್ಗೆ ಪ್ರತಿ ಹಂತದಲ್ಲೂ ಅವರ ಏಜೆಂಟರ ಮೂಲಕ ಮಾಹಿತಿ ನೀಡಲಾಗುತ್ತದೆ. ಇವಿಎಂಗಳನ್ನು ಹ್ಯಾಕ್ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು 42 ಬಾರಿ ತೀರ್ಪು ನೀಡಿವೆ. ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ” ಎಂದು ರಾಜೀವ್ ಕುಮಾರ್‌ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಪಡಿಸಿದ್ದಾರೆ.

ಮತದಾನದ ದತ್ತಾಂಶ ಬದಲಾಯಿಸಲು ಸಾಧ್ಯವಿಲ್ಲ

ಮತದಾನದ ದತ್ತಾಂಶವನ್ನು ಬದಲಾಯಿಸುವುದು ಅಸಾಧ್ಯ. ಸಂಜೆ 5 ಗಂಟೆಯ ನಂತರ ಮತದಾನ ಹೆಚ್ಚಾಗುತ್ತಿದೆ ಎಂಬ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಸಿಇಸಿ ಹೇಳಿದ್ದಾರೆ. “ಮಾಹಿತಿಯನ್ನು ಬಹಿರಂಗಪಡಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ. ವಿವರವಾದ ಮಾರ್ಗಸೂಚಿಗಳು ಮತ್ತು ಡೇಟಾಸೆಟ್​ಗಳು ನಮ್ಮ ವೆಬ್​ಸೈಟ್​ನಲ್ಲಿ ಲಭ್ಯ” ಎಂದು ಅವರು ತಿಳಿಸಿದ್ದಾರೆ. “ನಿನ್ನೆ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ದೇಶದ ಮತದಾರರ ಸಂಖ್ಯೆ 99 ಕೋಟಿಯನ್ನು ದಾಟುತ್ತಿದೆ. ನಾವು ಶೀಘ್ರದಲ್ಲೇ ಒಂದು ಶತಕೋಟಿ ಮತದಾರರ ರಾಷ್ಟ್ರವಾಗಲಿದ್ದೇವೆ. ಇದು ಮತದಾನದಲ್ಲಿ ಮತ್ತೊಂದು ದಾಖಲೆಯಾಗಲಿದೆ” ಎಂದು ಸಿಇಸಿ ಹೇಳಿದ್ದಾರೆ.

“ಇಂದು ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಪಂಜಾಬ್ ಎಸ್ಎಸ್ಆರ್‌ ಘೋಷಿಸಿದ ನಂತರ, ನಾವು ಮೊದಲ ಬಾರಿಗೆ 99 ಕೋಟಿ ಮತದಾರರನ್ನು ದಾಟಲಿದ್ದೇವೆ. ಮಹಿಳಾ ಮತದಾರರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗುತ್ತಿದೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ದಿಲ್ಲಿ ವಿಧಾನಸಭಾ ಚುನಾವಣೆ ಫೆ. 5ರಂದು ನಡೆಯಲಿದೆ.

ಈ ಸುದ್ದಿಯನ್ನೂ ಓದಿ:Delhi Polls: ದೆಹಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಸ್ಪರ್ಧೆ

Leave a Reply

Your email address will not be published. Required fields are marked *