Thursday, 15th May 2025

Australian Open: ನೂತನ ಕೋಚ್‌ ಜತೆ ಅಭ್ಯಾಸ ಆರಂಭಿಸಿದ ಜೊಕೊವಿಕ್

ಮೆಲ್ಬರ್ನ್‌: ದಾಖಲೆಯ 25ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಪ್ರಸಿದ್ಧ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಜನವರಿ 12 ರಿಂದ ಆರಂಭಗೊಳ್ಳುವ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ತಮ್ಮ ನೂತನ ಕೋಚ್‌ ಆ್ಯಂಡಿ ಮರ್ರೆ ಮಾರ್ಗದರ್ಶನದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವಿಡಿಯೊಗಳನ್ನು ಆಸ್ಟ್ರೇಲಿಯನ್‌ ಓಪನ್‌ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ನೊವಾಕ್ ಜೊಕೊವಿಕ್ ಅವರು ತಮ್ಮ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಆ್ಯಂಡಿ ಮರ್ರೆ ಅವರನ್ನು ಕಳೆದ ವರ್ಷ ಕೋಚ್‌ ಆಗಿ ನೇಮಕ ಮಾಡಿಕೊಂಡಿದ್ದರು. ಕೋಚ್‌ ಆಗಿ ಇದು ಮರ್ರೆಗೆ ಮೊದಲ ಪಂದ್ಯಾವಳಿಯಾಗಿದೆ. ಮುಂಬರುವ ಆಸ್ಟ್ರೇಲಿಯನ್ ಓಪನ್‌ನ ತನಕ ಅವರ ಕೋಚಿಂಗ್‌ ಅವಧಿ ಇರಲಿದೆ.

ಆ್ಯಂಡಿ ಮರ್ರೆ ಮತ್ತು ಜೋಕೊ ವೃತ್ತಿಪರ ಟೆನಿಸ್‌ನಲ್ಲಿ ಒಟ್ಟು 36 ಬಾರಿ ಮುಖಾಮುಖಿಯಾಗಿದ್ದರು. ಈ ವೇಳೆ ಜೋಕೊ 25 ಬಾರಿ ಗೆದ್ದಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ 10 ಬಾರಿ ಎದುರಾಗಿದ್ದು ಜೋಕೊ 8 ಬಾರಿ ಗೆದ್ದಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ಗೆ ಪೂರ್ವ ಭಾವಿಯಾಗಿ ನಡೆದಿದ್ದ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಜೊಕೊವಿಕ್‌ ಅಮೆರಿಕದ ‘ಲಂಬೂಜಿ’ ರೀಲಿ ಒಪೆಲ್ಕಾ ಎದುರು ನೇರ ಸೆಟ್‌ಗಳ ಸೋಲು ಕಂಡಿದ್ದರು.

Leave a Reply

Your email address will not be published. Required fields are marked *