ಒಂದೊಳ್ಳೆ ಮಾತು
ರೂಪಾ ಗುರುರಾಜ್
ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುತ್ತಿದ್ದರು. ಮಕ್ಕಳು ಕೀಟಲೆ ಮಾಡಿಕೊಳ್ಳುತ್ತಿದ್ದವು. ಚಿವುಟುವುದು, ಹೊಡೆಯು ವುದು, ಕೂತ ತಳ್ಳುವುದು.. ಹೀಗೆ. ಕೇಳಿದರೆ ಆ ಮಕ್ಕಳು ನೆನ್ನೆ ಅವನು ನನಗೆ ಹೀಗೆ ಹೊಡೆದಿದ್ದ ಅದಕ್ಕೆ ನಾನು ಇಂದು ಹೊಡೆದೆ ಚಿವುಟಿದೆ ಎಂದು ದೂರು ಹೇಳುತ್ತಿದ್ದರು. ಒಬ್ಬರು ಮಾಡಿದರೆಂದು ಮತ್ತೊಬ್ಬರು ಅವರಿಗೆ ಕೀಟಲೆ ಮಾಡುವುದು ಮುಂದುವರೆದಿತ್ತು. ಶಿಕ್ಷಕಿ ಯೋಚಿಸಿದರು ಈ ಮಕ್ಕಳಿಗೆ ಹೇಳಿದರೆ ಅರ್ಥ ಆಗುವುದಿಲ್ಲ, ಕೇಳುವು ದಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದೇ ಈಗಲೇ ಇದನ್ನು ಸರಿ ಮಾಡಬೇಕು ಎಂದು ನಿರ್ಧರಿಸಿದರು.
‘ನಾಳೆ ದಿನ ನೀವು ಬರುವಾಗ ಒಂದಷ್ಟು ಆಲೂಗಡ್ಡೆಯನ್ನು ಕೈ ಚೀಲದಲ್ಲಿ ಹಿಡಿದುಕೊಂಡು ಬನ್ನಿ’ ಎಂದರು ಶಿಕ್ಷಕಿ . ಮಕ್ಕಳಿಗೆ ಇದು ಯಾಕೆ ಎಂದು ಅರ್ಥವಾಗಲಿಲ್ಲ. ಶಿಕ್ಷಕಿ ಹೇಳಿದಂತೆ ಒಂದು ಕೈಚೀಲದಲ್ಲಿ ಐದಾರು ಆಲೂಗಡ್ಡೆ ತುಂಬಿ ತಂದು ಟೀಚರಿಗೆ ತೋರಿಸಿದವು. ಅದನ್ನು ‘ನೋಡಿ ಮಕ್ಕಳೇ ನಾಳೆಯಿಂದ, ಈ ಆಲೂಗಡ್ಡೆ ಚೀಲವನ್ನು
ಮನೆಯಿಂದ ಬರುವಾಗ ತರಬೇಕು, ಹೋಗುವಾಗ ತೆಗೆದುಕೊಂಡು ಹೋಗಬೇಕು’ ಎಂದರು. ಇದನ್ನು ಕೇಳಿದ ಮಕ್ಕಳಿಗೆ ಆಶ್ಚರ್ಯವಾಯಿತು. ಶಿಕ್ಷಕಿ ಹೇಳಿದ ಮಾತನ್ನು ಕೇಳಲೇಬೇಕು ಅಲ್ಲವೇ? ಅವರು ಹೇಳಿದಂತೆ ಪಠ್ಯ ಪುಸ್ತಕದ ಜೊತೆ ನಿತ್ಯವೂ ಆಲೂಗಡ್ಡೆ ಚೀಲವನ್ನು ಹೊತ್ತು ತರುತ್ತಿದ್ದವು ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದವು. ಮನೆಯಿಂದ ಬರುವಾಗ ಶಾಲಾ ಪಠ್ಯಪುಸ್ತಕದ ಚೀಲದ ಜೊತೆ, ಆಲೂಗಡ್ಡೆ ಚೀಲ ತರುವುದು ಹೋಗುವಾಗ ತೆಗೆದುಕೊಂಡು ಹೋಗುವುದು. ಎರಡು ಮೂರು ದಿನ ಏನೂ ಅನ್ನಿಸಲಿಲ್ಲ.
ಕ್ರಮೇಣ ಅದು ಭಾರ ಎನಿಸಿತು. ಒಂದು ವಾರವಾದರೂ ಶಿಕ್ಷಕಿ ಬೇಡ ಅನ್ನಲಿಲ್ಲ. ಎಂಟು ಹತ್ತು ದಿನ ಕಳೆಯಿತು. ಚೀಲದಲ್ಲಿದ್ದ ಆಲೂಗಡ್ಡೆ ಕೊಳೆಯಲು ಆರಂಭಿಸಿತು. ಮತ್ತೆರಡು ದಿನ ಕಳೆದ ಮೇಲೆ ಕೊಳೆತು ದುರ್ಗಂಧ ಬರಲು
ಶುರುವಾಯಿತು. ಕಷ್ಟಪಟ್ಟು ಹೇಗೋ ಎರಡು ದಿನ ತಂದವು ಆಮೇಲೆ ಆಗಲಿಲ್ಲ. ನೇರವಾಗಿ ಶಿಕ್ಷಕಿ ಬಳಿ ಬಂದು, ‘ಟೀಚರ್ ಇನ್ನು ಮೇಲೆ ಈ ಆಲೂಗಡ್ಡೆ ಹೊತ್ತು ತರಲು ನಮ್ಮಿಂದ ಆಗುವುದಿಲ್ಲ. ಕೆಟ್ಟು ಹೋಗಿ ಕೆಟ್ಟ ವಾಸನೆ
ಬರುತ್ತಿದೆ, ಮೂಗು ಮುಚ್ಚಿಕೊಂಡು ಬರಬೇಕು. ನಮಗೆ ಸಹಿಸಲು ಆಗುತ್ತಿಲ್ಲ’ ಎಂದವು.
ಇದೆ ಸರಿಯಾದ ಸಮಯ ಎಂದು ಶಿಕ್ಷಕಿ ಹೇಳಿದರು. ‘ಮಕ್ಕಳೇ ಆಲೂಗಡ್ಡೆ ಚೆನ್ನಾಗಿರುವಷ್ಟು ದಿನ ಜೊತೆಯ ಇಟ್ಟುಕೊಳ್ಳಬಹುದು. ಆದರೆ ಅದು ಕೆಟ್ಟ ಮೇಲೆ, ಹತ್ತಿರ ಇಟ್ಟುಕೊಳ್ಳಲು ಆಗುವುದಿಲ್ಲ. ಅದರ ದುರ್ಗಂಧವನ್ನು ಸಹಿಸಲು ಆಗುತ್ತದೆಯೇ? ಒಂದೇ ತರಗತಿಯ ಮಕ್ಕಳಾದ ನೀವು, ಸಹಪಾಠಿಗಳೊಂದಿಗೆ ಆಡುವ ಸಮಯದಲ್ಲಿ, ಕೀಟಲೆ ಮಾಡಿ ಜಗಳಾಡಿಕೊಂಡು ಆ ಸಿಟ್ಟನ್ನು ಎಷ್ಟು ದಿನ ತಲೆಯಲ್ಲಿ ಇಟ್ಟುಕೊಳ್ಳುವಿರಿ. ಹೀಗೆ ಮುಂದುವರೆದರೆ ಆಲೂಗಡ್ಡೆ ಕೊಳೆತಂತೆ, ಅದೇ ವಿಚಾರಗಳು ನಿಮ್ಮ ತಲೆಯಲ್ಲಿ ಕೊಳೆತು ದುರ್ಗಂಧ ಬೀರುತ್ತದೆ.
ಇಂಥ ದುರ್ಗಂಧವನ್ನು ನಿಮ್ಮಿಂದ ಸಹಿಸಲು ಸಾಧ್ಯವಿಲ್ಲ ಅಲ್ಲವೇ? ನಿಮಗೆ ಪರಿಮಳ ಭರಿತ ಸುಗಂಧ
ಬೇಕೆಂದರೆ, ನಿಮ್ಮ ಗೆಳೆಯರ ಜೊತೆ ನಡೆದ, ಸಣ್ಣಪುಟ್ಟ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಳ್ಳದೆ, ಅಂದಿನ ಘಟನೆಯನ್ನು ಅಲ್ಲಿಗೆ ಮರೆತು ನಿಮ್ಮ ನಡುವೆ ನಡೆವ ಒಳ್ಳೆಯ ವಿಚಾರಗಳನ್ನು ಮೆಲಕು ಹಾಕಿ ಮುಂದೆ ಸಾಗಬೇಕು.
ಪಾಠದ ಕಡೆ ಗಮನ ಕೊಡಿ, ಎಲ್ಲರ ಜೊತೆಯಲ್ಲೂ ಸ್ನೇಹದಿಂದಿರಿ. ಈ ಸಂಗತಿಗಳಿಂದ ನಿಮ್ಮ ಭವಿಷ್ಯದಲ್ಲಿ ಕಠಿಣ ಸಮಸ್ಯೆಗಳು ಎದುರಾದರೆ ಅದನ್ನು ದಾಟಿ ಮುಂದೆ ಸಾಗುವ ಮನೋಸ್ಥೈರ್ಯ ಬರುತ್ತದೆ’ ಎಂದರು.
ದೊಡ್ಡವರಾಗಿ ನಾವು ಕೂಡ ದ್ವೇಷ, ಅಸೂಯೆ, ಈ ಭಾವನೆಗಳ ದುರ್ಗಂಧವನ್ನು ಹೃದಯದಲ್ಲಿ ಇಟ್ಟುಕೊಂಡು ತಿರುಗುವ ಬದಲು, ಅದನ್ನು ಅಲ್ಲ ಮರೆತು, ಒಳ್ಳೆಯ ನೆನಪುಗಳನ್ನು ಶೇಖರಿಸಿಕೊಳ್ಳುತ್ತಾ ನಿಷ್ಕಲ್ಮಶ ಮನಸ್ಸಿನಿಂದ
ಬದುಕುವುದು ಒಳ್ಳೆಯದಲ್ಲವೇ?
ಇದನ್ನೂ ಓದಿ: #RoopaGururaj