ಬೆಂಗಳೂರು: ಇತ್ತೀಚೆಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ʼಅಪಾಯವಿದೆ ಎಚ್ಚರಿಕೆʼ (Apaayavide Eccharike Movie) ಚಿತ್ರತಂಡ ಅದರ ವಿಶೇಷತೆಯಿಂದ ನಿರೀಕ್ಷೆ ಹುಟ್ಟಿಸಿತ್ತು. ನಂತರ ʼಬ್ಯಾಚುಲರ್ ಬದುಕುʼ ಅನ್ನುವ ಸಾಂಗ್ ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿ ಕಚಗುಳಿ ಇಟ್ಟ ಚಿತ್ರತಂಡ ಇದೀಗ ಟೀಸರ್ ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ತುಂಬಾ ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಸಿನಿಮಾವನ್ನು ಬರೆದು, ನಿರ್ದೇಶಿಸಿದ ಅಭಿಜಿತ್ ತೀರ್ಥಹಳ್ಳಿ, ಚಿತ್ರದ ಬಹುತೇಕ ಭಾಗವನ್ನು ಕತ್ತಲೆಯ ಕಾಡಲ್ಲಿ ಚಿತ್ರೀಕರಿಸಿದ್ದು, ನೋಡುಗನ ಗಮನ ಸೆಳೆಯುವಂತೆ ಮಾಡಿದ್ದಾರೆ. ಹೊಸ ತರಹದ ಚಿತ್ರಕಥೆಯುಳ್ಳ ಈ ಚಿತ್ರದ ಮೇಕಿಂಗ್, ಮ್ಯೂಸಿಕ್, ಲೊಕೇಶನ್, ಎಲ್ಲವು ಭರವಸೆ ಮಾಡಿಸುವುದರ ಮೂಲಕ ಸದ್ದು ಮಾಡುತ್ತಿದೆ. ವಿ.ಜಿ. ಮಂಜುನಾಥ್ ಮತ್ತು ಪೂರ್ಣಿಮ ಎಂ ಗೌಡ ನಿರ್ಮಾಣದ ಈ ಚಿತ್ರಕ್ಕೆ ಸಂಗೀತ, ಛಾಯಾಗ್ರಹಣ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಸುನಾದ್ ಗೌತಮ್.

ʼಅಣ್ಣಯ್ಯʼ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ʼ’ಅಮೃತಧಾರೆʼ’ ಖ್ಯಾತಿಯ ರಾಧಾ ಭಗವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Shri Raghavendra Chitravani Awards 2024: ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರಕಟ
ʼಅಪಾಯವಿದೆ ಎಚ್ಚರಿಕೆʼ ಚಿತ್ರ ತಾಂತ್ರಿಕವಾಗಿ, ಕ್ರಿಯಾತ್ಮಕವಾಗಿ ಕೂಡ ಅದ್ಭುತವೆನಿಸುವಂತೆ ಟೀಸರ್ನಲ್ಲಿ ಕಂಡ ದೃಶ್ಯಗಳು, ಮ್ಯೂಸಿಕ್ ಮೂಲಕ ತಿಳಿಯುತ್ತದೆ. ಒಟ್ಟಾರೆ ಕುರ್ಚಿ ತುದಿಯಲ್ಲಿ ಕೂತು ನೋಡುವ ಸಿನಿಮಾ ಇದಾಗಿದ್ದು ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಭರವಸೆ ನೀಡಿದ್ದಾರೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಇದೇ ಫೆಬ್ರವರಿ 7 ಕ್ಕೆ ʼಅಪಾಯವಿದೆ ಎಚ್ಚರಿಕೆʼ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.