ದೆಹಲಿ: ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.
ನಿಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆಯೇ ಎಂದು ಕೇಳಿದಾಗ, ʼಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ತೆರಳಿದ್ದೆʼ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | DK Shivakumar: ‘ಗೃಹಲಕ್ಷ್ಮಿʼ ಮಾದರಿಯಲ್ಲಿ ʼಪ್ಯಾರಿ ದೀದಿ ಯೋಜನೆʼ; ದೆಹಲಿ ಚುನಾವಣೆಗೆ ಕಾಂಗ್ರೆಸ್ ಮೊದಲ ಗ್ಯಾರಂಟಿ ಭರವಸೆ
ಡಿಸಿಎಂ ಅವರ ಅನುಪಸ್ಥಿತಿಯಲ್ಲಿ ಔತಣಕೂಟ ಸಭೆ ನಡೆದಿದೆ ಎಂದು ಕೇಳಿದಾಗ, ಅನೇಕ ಮಂತ್ರಿಗಳು ಸಹ ಕುಟುಂಬದವರ ಜತೆ ವಿದೇಶಿ ಪ್ರವಾಸ ಹೋಗಿದ್ದರು. ಬೆಂಗಳೂರಿನಲ್ಲಿ ಇದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ತಿಳಿಸಿದರು.
ಕ್ಯಾಬಿನೆಟ್ ಪುನರ್ ರಚನೆಯಾಗಬೇಕು ಎಂದು ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎಂದಾಗ, ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದರು.
ಈ ಸುದ್ದಿಯನ್ನೂ ಓದಿ | Shri Raghavendra Chitravani Awards 2024: ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರಕಟ
ರಾಜ್ಯದಲ್ಲಿ ಎಂಟು ತಿಂಗಳ ಮಗುವಿನಲ್ಲಿ ಎಚ್ಎಂವಿ ವೈರಸ್ ಪತ್ತೆಯಾಗಿರುವ ಬಗ್ಗೆ ಕೇಳಿದಾಗ, ಈಗಾಗಲೇ ನಮ್ಮ ಆರೋಗ್ಯ ಸಚಿವರು ಕೆಲಸ ಮಾಡುತ್ತಿದ್ದಾರೆ. ಯಾರೂ ಸಹ ಆತಂಕಪಡುವ ಅವಶ್ಯಕತೆಯಿಲ್ಲ. ಸರ್ಕಾರ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.