Saturday, 10th May 2025

Tumkur News: ಮಾಜಿ ಶಾಸಕ ಗೌರಿಶಂಕರ್ ತಾಯಿ ಸಿದ್ದಗಂಗಮ್ಮ ಅನಾರೋಗ್ಯದಿಂದ ವಿಧಿವಶ

Tumkur News

ತುಮಕೂರು: ಮಾಜಿ ಸಚಿವ ದಿ.ಸಿ.ಚನ್ನಿಗಪ್ಪ ಅವರ ಪತ್ನಿ ಹಾಗೂ ತುಮಕೂರು ಗ್ರಾಮಾಂತರ (Tumkur News) ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಅವರ ತಾಯಿ ಸಿದ್ದಗಂಗಮ್ಮ ಅವರು ಶನಿವಾರ ಮಧ್ಯಾಹ್ನ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಗಂಗಮ್ಮ ಅವರು ಬೆಂಗಳೂರಿನ ಸಾಗರ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಪುತ್ರರಾದ ಮಾಜಿ ಶಾಸಕ ಗೌರಿಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೇಣುಗೋಪಾಲ್, ಮಕ್ಕಳು, ಮೊಮ್ಮಕ್ಕಳು, ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿಯಲ್ಲಿ ಭಾನುವಾರ ಸಿದ್ದಗಂಗಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Boiler Explosion: ಬಿಡದಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಐವರು ಕಾರ್ಮಿಕರಿಗೆ ಗಂಭೀರ ಗಾಯ!

ಎಸ್ಐಟಿ ಕಾಲೇಜಿನ ನಿರ್ದೇಶಕ ಚನ್ನಬಸಪ್ಪ ನಿಧನ

ತುಮಕೂರು: ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ನಿರ್ದೇಶಕರಾಗಿದ್ದ ಡಾ. ಎಂ.ಎನ್. ಚನ್ನಬಸಪ್ಪ (95) ವಯೋಸಹಜದಿಂದ ನಿಧನರಾಗಿದ್ದಾರೆ. 1931ರ ಜೂನ್ 9 ರಂದು ಜನಿಸಿದ ಇವರು 1941ರಿಂದ 1955ರ ವರೆಗೆ ಶ್ರೀ ಸಿದ್ಧಗಂಗಾ ಗುರುಕುಲದಲ್ಲಿ ವ್ಯಾಸಂಗ ಮಾಡಿದ್ದು, 1953ರಲ್ಲಿ ಮೈಸೂರು ಯೂನಿವರ್ಸಟಿಯಲ್ಲಿ (ಭೌತಶಾಸ್ತ್ರ ಹಾಗೂ ಗಣಿತದಲ್ಲಿ) ಬಿಎಸ್‌ಸಿ ಪದವಿ ಪಡೆದಿದ್ದಾರೆ. 1953ರಲ್ಲಿ ಎಂಎ, 1967ರಲ್ಲಿ ದೆಹಲಿಯ ಐಐಟಿ ವಿವಿಯಿಂದ ಗಣಿತ ಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. 1991ರಿಂದ 2006 ರವರೆಗೆ ಸಿದ್ದಗಂಗಾ ತಾಂತ್ರಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2006ರಿಂದ ಇಲ್ಲಿಯವರೆಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಠದ ಸ್ವತಂತ್ರ ಪೂರ್ವದ ಹಳೆಯ ವಿದ್ಯಾರ್ಥಿಯಾಗಿ, ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಶ್ರೀ ಸಿದ್ಧಗಂಗಾ ಸಂಸ್ಥೆಗೆ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಇವರು ವರ್ಷಕ್ಕೆ 1 ರೂ.ಗಳನ್ನು ಮಾತ್ರ ಗೌರವಧನ ಪಡೆಯುವ ಮೂಲಕ ಸೇವೆ ಸಲ್ಲಿಸಿದ್ದರು.

ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗಾ ಕಾಲೇಜಿನ ಸಿಇಒ ಶಿವಕುಮಾರಯ್ಯ, ಪ್ರಾಂಶುಪಾಲ ದಿನೇಶ್, ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಂಜುಂಡಯ್ಯ, ಮಠದ ಆಡಳಿತಾಧಿಕಾರಿ ವಿಶ್ವನಾಥ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಜಿ.ಎಸ್. ಬಸವರಾಜು, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಸಿಇಒ ಸಂಜೀವ್ ಮೂರ್ತಿ ಅಂತಿಮ ನಮನ ಸಲ್ಲಿಸಿದರು.

ಭಾನುವಾರ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸೋಮವಾರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.