Sunday, 11th May 2025

‌Dr Prakash A S Column: ತುಳು ಚಿತ್ರರಂಗಕ್ಕೆ ಬೇಕು ಹೊಸ ಪ್ರಯೋಗ!

ಪ್ರಸ್ತುತ

ಡಾ.ಪ್ರಕಾಶ್‌ ಎ.ಎಸ್.

ತುಳು ಚಿತ್ರರಂಗ ಅನೇಕ ವರ್ಷಗಳಿಂದ ಹಾಸ್ಯದ ಜಾಡಿಗೆ ಬಿದ್ದು ಅದರಿಂದ ಹೊರಬರಲಾಗದ ಮಟ್ಟಿಗೆ ಹಾಸ್ಯಕ್ಕೆ
ಜೋತು ಬಿದ್ದಿದೆ. ತುಳುವರು ಹಾಸ್ಯಕ್ಕೆ ನೀಡಿರುವ ಮಹತ್ವವೊ ಅಥವಾ ಚಿತ್ರರಂಗವೇ ಪ್ರೇಕ್ಷಕರಲ್ಲಿ ಈ ಅಭಿರುಚಿ ಯನ್ನು ಬೆಳೆಸಿತೊ ಅನ್ನುವುದು ಒಂದು ಧ್ವಂದ್ವ. ನನ್ನ ಅಧ್ಯಯನದ ಪ್ರಕಾರ ಈ ಹಾಸ್ಯ ತುಳುವರ ಬದುಕನ್ನು ಹೆಚ್ಚು ಪ್ರಭಾವಿಸಿದ್ದು ತುಳುರಂಗಭೂಮಿ.

ತುಳು ಚಿತ್ರರಂಗದಲ್ಲೂ ಹಾಸ್ಯವೇ ಪ್ರಧಾನವಾಗಿರಲು ಇದೂ ಒಂದು ಪ್ರಮುಖ ಕಾರಣ. ತುಳು ಚಿತ್ರರಂಗ ಹಾಸ್ಯ ವನ್ನೇ ನೆಚ್ಚಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಗಂಭೀರ ಸಿನಿಮಾಗಳಿಗೆ ತುಳುವರು ತೋರಿದ ನಿರ್ಲಕ್ಷ್ಯ. ಸಿನಿಮಾ ಅಥವಾ ಚಲನಚಿತ್ರ ಕೇವಲ ಮನರಂಜನಾ ಮಾಧ್ಯಮವಲ್ಲ. ಅದು ನಮ್ಮ ಬದುಕು ಮತ್ತು ಸಂಸ್ಕೃತಿಯ ಪ್ರತಿಬಿಂಬ.

ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವುದರ ಜೊತೆಗೆ ಜಾಗೃತಿಯನ್ನು ಮೂಡಿಸುತ್ತದೆ. ಒಂದು ಕಾಲಘಟ್ಟದ ಬದುಕು ಮತ್ತು ಸಂಸ್ಕೃತಿಯನ್ನು ದಾಖಲೀಕರಣ ಮಾಡುತ್ತದೆ. ಅನೇಕ ಸಂದರ್ಭದಲ್ಲಿ ಕೇವಲ ಹಾಸ್ಯದ ಹೊನಲಿ ನಲ್ಲಿ ಸಿನಿಮಾದ ನಿಜವಾದ ಉದ್ದೇಶ ತುಳು ಚಿತ್ರರಂಗದಲ್ಲಿ ಕೊಚ್ಚಿ ಹೋಗಿರುವುದಂತೂ ಸತ್ಯ. ಇತ್ತೀಚಿನ ವರ್ಷ ಗಳಲ್ಲಿ ತುಳು ಭಾಷೆಯಲ್ಲಿ ನಿರ್ಮಾಣಗೊಂಡ ಚಿತ್ರಗಳಲ್ಲಿ ಉತ್ತಮ ಪ್ರಯತ್ನ ದಸ್ಕತ್. ತುಳು ಚಿತ್ರ ನಿರ್ಮಾ ಪಕ, ನಿರ್ದೇಶಕ ಮತ್ತು ಕಥೆಗಾರರು ಈ ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಾಗಾದರೆ ಈ ಹಿಂದೆ ತುಳು ನಾಡಿನಲ್ಲಿ ಗಂಭೀರ ಸಿನಿಮಾಗಳು ನಿರ್ಮಾಣಗೊಂಡಿಲ್ಲವೇ? ತುಳುನಾಡಿನ ಸಂಸ್ಕೃತಿ ಮತ್ತು ಜನಜೀವನದ ಬಗೆಗಿನ ಗಂಭೀರ ಸಿನಿಮಾಗಳು ನಿರ್ಮಾಣಗೊಂಡು ಬಿಡುಗಡೆಯಾಗಿದೆ. ಆದರೆ ಅದನ್ನು ನೋಡಿದ ಪ್ರೇಕ್ಷಕರೆಷ್ಟು ಎಂದು ಅಧ್ಯಯನ ಮಾಡಿದರೆ ಅದು ಶೇ.10ನ್ನು ಮೀರುವುದಿಲ್ಲ.

ಕಲಾತ್ಮಕ ಸಿನಿಮಾ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ಸಿನಿಮಾಗಳ ಶೀರ್ಷಿಕೆಯೂ ಹೆಚ್ಚಿನ ಯುವಕ ಯುವತಿಯರಿಗೆ ಗೊತ್ತಿಲ್ಲ. ಅದು ಕೇವಲ ಪ್ರಶಸ್ತಿ ಮತ್ತು ಹೆಸರಿಗಷ್ಟೇ ಸೀಮಿತವಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿದ ಉದಾಹರಣೆಗಳೂ ಬೆರಳೆಣಿಕೆಯಷ್ಟು ಮಾತ್ರ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ‘ದಸ್ಕತ್’ ಗಟ್ಟಿ ಕಥೆಯನ್ನು ಹೊಂದಿರುವ ಉತ್ತಮ ಮನರಂಜನಾತ್ಮಕ ಸಿನಿಮಾ. ಯಾವುದೇ ಸಿನಿಮಾದ ಯಶಸ್ಸು ಇರುವುದು ಉತ್ತಮ ಕಥೆ ಮತ್ತು ನಿರ್ದೇಶನದ ಮೇಲೆ ಈ ಎರಡರಲ್ಲೂ ದಸ್ಕತ್ ಗೆದ್ದಿದೆ. ಚೊಚ್ಚಲ ನಿರ್ದೇಶನವಾ
ದರೂ ನಿರ್ದೇಶಕನ ಪ್ರಯತ್ನ ಫಲಕೊಟ್ಟಿದೆ.

ಪ್ರೇಕ್ಷಕರನ್ನು ಮಾತನಾಡಿಸಿದಾಗ ಅನೇಕ ಹೊಸ ವಿಚಾರಗಳು ತಿಳಿಯುತ್ತದೆ. ಸುಮಾರು ೨೦, ೨೫ ವರ್ಷಗಳ ನಂತರ ಥೀಯೆಟರ್‌ಗೆ ಬಂದವರೂ ಇದ್ದಾರೆ. ಈಗಾಗಲೇ 800ಕ್ಕೂ ಅಧಿಕ ಶೋಗಳು ಆಗಿದೆ. ಅಂದರೆ ಹೆಚ್ಚು ಹಾಸ್ಯ ಮತ್ತು ಸ್ಟಾರ್ ಕಲಾವಿದರು ಇದ್ದರೆ ಮಾತ್ರ ತುಳು ಸಿನಿಮಾ ಗೆಲ್ಲುವುದು ಎಂಬ ಈ ಹಿಂದಿನ ಮಾತುಗಳನ್ನು ಈ ಸಿನಿಮಾ ಅಲ್ಲಗಳೆದಿದೆ. ಮುಖ್ಯಭೂಮಿಕೆ ಯಲ್ಲಿರುವ ಕಲಾವಿದರು ಹೊಸಬರು. ತಂತ್ರಜ್ಞರೂ ಹೊಸಬರೇ ಆಗಿದ್ದಾರೆ. ಇಲ್ಲಿ ಗೆದ್ದಿರುವುದು ಪ್ರತಿಭೆ ಮತ್ತು ಪರಿಶ್ರಮ.

ಅದೇನೆ ಇರಲಿ ಹೊಸ ಯುವಕರು ಮಾಡಿದ ಈ ಪ್ರಯತ್ನ ತುಳು ಚಿತ್ರ ಪ್ರೇಮಿಗಳಲ್ಲಿ ಹೊಸ ರೀತಿಯ ಸಿನಿಮಾಗಳ ಅಪೇಕ್ಷೆಯನ್ನು ಹುಟ್ಟು ಹಾಕಿದೆ. ಅನೇಕ ಸಂದರ್ಭದಲ್ಲಿ ಕೆಲವೊಂದು ಸಿನಿಮಾಗಳು ಆ ಚಿತ್ರರಂಗ ಮುಖ ಮಾಡಬೇಕಾದ ಹೊಸ ದಿಕ್ಕಿನ ದಾರಿಯ ಮುಂಚೂಣಿಯಲ್ಲಿ ನಿಂತು ಮೊದಲ ಹೆಜ್ಜೆಯನ್ನಿಡುತ್ತವೆ. ಆ ಹೆಜ್ಜೆ ಯನ್ನು ಭಿದಸ್ಕತ್‌ಭಿ ಸಿನಿಮಾ ಇಟ್ಟಿದೆ. ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ತುಳು ಚಿತ್ರರಂಗದ ಪ್ರಮುಖರ ಮೇಲೆ ಹೊಸ ಜವಾಬ್ದಾರಿ ಯನ್ನು ಹೊರಿಸಿದೆ. ಹೊಸ ಪ್ರಯತ್ನಗಳಿಗೆ, ಗಟ್ಟಿ ಕಥೆಗಳ ಮೂಲಕ ಕೋಸ್ಟಲ್ವುಡ್ಗೆ ಹೊಸ ಆಯಾಮವನ್ನು ನೀಡಬಹುದು ಎನ್ನುವ ಸ್ಪಷ್ಟ ಸಂದೇಶವನ್ನು ಈ ಚಿತ್ರ ರವಾ ನಿಸಿದೆ. ಚಲನಚಿತ್ರಗಳು ಜನಸಮುದಾಯದಲ್ಲಿ ಉಂಟು ಮಾಡುವ ಪರಿಣಾಮಗಳು ಬೇರೆಲ್ಲ ಮಾಧ್ಯಮ ಗಳಿಂದ ಹೆಚ್ಚು. ತುಳುನಾಡಿನಲ್ಲಿ ಅನೇಕ ರೀತಿಯ ಸಂಘರ್ಷಗಳಿವೆ ಅಧಿಕಾರಿಗಳು ಬಡವರನ್ನು ಲಂಚದ ಮೂಲಕ ಶೋಷಣೆ ಮಾಡುತ್ತಿರುವುದು. ಅರಣ್ಯವಾಸಿಗಳ ಬದುಕು ಮತ್ತು ಸಂಘರ್ಷ.

ಔದ್ಯೋಗಿಕ ವಲಸೆ ಮತ್ತು ಅನಾಥ ಪ್ರe ಎಷ್ಟೊಂದು ವಸ್ತುಗಳು ಕಣ್ಣಮುಂದೆ ಹರಡಿಕೊಂಡಿದೆ. ಆದರೆ ತುಳು ಚಿತ್ರರಂಗ ಇದನ್ನು ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇವಲ ಹಾಸ್ಯ ಪ್ರಧಾನ ಚಿತ್ರಗಳೇ ಒಂದು ಚಿತ್ರರಂಗ ವನ್ನು ಅನೇಕ ವರ್ಷಗಳ ಕಾಲ ಬಾಳಿಸ ಲಾರದು. ಹೊಸ ಪ್ರಯತ್ನಗಳು ನಿರಂತರವಾಗಿ ನಡಿಯಬೇಕು.

(ಲೇಖಕರು: ಪ್ರಾಧ್ಯಾಪಕ)

ಇದನ್ನೂ ಓದಿ: Shankaranarayana Bhat Column: ಕಠಿಣ ನಿರ್ಣಯದ ಅಗತ್ಯವಿದೆ