Thursday, 15th May 2025

Fact Check: ಸದ್ದಿಲ್ಲದೆ ಬಾಲಿವುಡ್‌ ನಟಿಯೊಂದಿಗೆ 2ನೇ ಮದುವೆಯಾದ್ರಾ ಮಾಜಿ ಕ್ರಿಕೆಟಿಗ ಧವನ್‌?

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌(Shikhar Dhawan) ಅವರು ಬಾಲಿವುಡ್‌ ನಟಿ ಹುಮಾ ಖುರೇಷಿ(Huma Qureshi) ಅವರೊಂದಿಗೆ ರಹಸ್ಯವಾಗಿ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಅಲ್ಲದೆ ಈ ಜೋಡಿ ಮದುವೆ ಉಡುಪಿನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಕೂಡ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಅಸಲಿಗೆ ಈ ಜೋಡಿ ಮದುವೆಯಾಗಿಲ್ಲ. ಕೆಲ ಕಿಡಿಗೇಡಿಗಳು ಎಐ(AI) ತಂತ್ರಜ್ಞಾನವನ್ನು(Fact Check) ಬಳಿಸಿ ಈ ನಕಲಿ ಫೋಟೊವನ್ನು ರಚಿಸಿದ್ದಾರೆ.

ಕೆಲ ದಿನಗಳ ಹಿಂದೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ದುಬೈನಲ್ಲಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ನಕಲಿ ಫೋಟೊ ವೈರಲ್‌ ಆಗಿತ್ತು. ಎಐ ತಂತ್ರಜ್ಞಾನವನ್ನು ಬಳಿಸಿ ಈ ರೀತಿ ನೆಟ್ಟಿಗರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಇದು ಅಪಾಯಕಾರಿಯಾಗುವ ಸಾಧ್ಯತೆ ಇದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ನಟಿ ಹುಮಾ ಖುರೇಷಿ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಧವನ್​ ಅವರ ವಿಚ್ಛೇದಿತ ಪತ್ನಿ ಆಯೇಶಾ ಮುಖರ್ಜಿ ಧವನ್​ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.

ಶಿಖರ್​ ಧವನ್​ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಎಲ್ಲ ಮಾದರಿಯ ಅಂತಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಭಾರತ ಪರ ಧವನ್‌ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.