Thursday, 15th May 2025

IND vs AUS: ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದ ರೋಹಿತ್‌ ಶರ್ಮಾ ಬಗ್ಗೆ ಗವಾಸ್ಕರ್ ಅಭಿಪ್ರಾಯ!

IND vs AUS: 'The Melbourne Test will be Rohit Sharma's last game',says Sunil Gavaskar

ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶುಕ್ರವಾರ ಆರಂಭವಾಗಿರುವ ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಿಂದ ರೋಹಿತ್‌ ಶರ್ಮಾ ಹೊರಗುಳಿದಿದ್ದಾರೆ. ಅವರೇ ಸ್ವತಃ ತಾವು ಸಿಡ್ನಿ ಟೆಸ್ಟ್‌ನಿಂದ ವಿರಾಮ ಪಡೆಯುವುದಾಗಿ ಹೇಳಿದ್ದಾರೆಂದು ಟಾಸ್‌ ವೇಳೆ ನಾಯಕ ಜಸ್‌ಪ್ರೀತ್‌ ಬುಮ್ರಾ ಬಹಿರಂಗಪಡಿಸಿದ್ದರು. ರೋಹಿತ್‌ ಶರ್ಮಾ ಅವರ ಈ ನಿರ್ಧಾರದ ಬಗ್ಗೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಹಾಗೂ ಮಾಜಿ ಹೆಡ್‌ ರವಿ ಶಾಸ್ತ್ರಿ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಎರಡನೇ ಮಗುವಿನ ಕಾರಣ ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದ ರೋಹಿತ್‌ ಶರ್ಮಾ, ಎರಡನೇ ಟೆಸ್ಟ್‌ ಪಂದ್ಯದ ಮೂಲಕ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಈ ಸರಣಿಯಲ್ಲಿ ಅವರು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಮೂರು ಟೆಸ್ಟ್‌ ಪಂದ್ಯಗಳ ಐದು ಇನಿಂಗ್ಸ್‌ಗಳಿಂದ ಅವರು ಗಳಿಸಿರುವುದು ಕೇವಲ 31 ರನ್‌ಗಳು ಮಾತ್ರ. ಇದರ ಪರಿಣಾಮವಾಗಿ ರೋಹಿತ್‌ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್‌ ಪಂದ್ಯದಿಂದ ಹೊರಗಿಡಲಾಗಿದೆ. ಆದರೂ, ಸ್ವತಃ ರೋಹಿತ್‌ ಶರ್ಮಾ ಅವರೇ ಐದನೇ ಟೆಸ್ಟ್‌ ಪಂದ್ಯದಿಂದ ವಿರಾಮ ಪಡೆದಿದ್ದಾರೆ.

IND vs AUS: ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಆಡದೆ ಇರಲು ಕಾರಣ ತಿಳಿಸಿದ ಜಸ್‌ಪ್ರೀತ್‌ ಬುಮ್ರಾ!

ರೋಹಿತ್‌ ಶರ್ಮಾ ನಿರ್ಧಾರದ ಬಗ್ಗೆ ಗವಾಸ್ಕರ್‌ ಹೇಳಿದ್ದೇನು?

ಮೊದಲ ದಿನದಾಟದ ಭೋಜನ ವಿರಾಮದ ವೇಳೆ ಸುನೀಲ್‌ ಗವಾಸ್ಕರ್, “ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ, ಮೆಲ್ಬೋರ್ನ್ ಟೆಸ್ಟ್ ರೋಹಿತ್ ಶರ್ಮಾ ಅವರ ಪಾಲಿಗೆ ಕೊನೆಯ ಟೆಸ್ಟ್ ಆಗಿರುತ್ತದೆ,”ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭವಾಗಲಿದೆ ಮತ್ತು ಆಯ್ಕೆದಾರರು 2027ರ ಫೈನಲ್‌ನಲ್ಲಿ ಆಡಬಹುದಾದ ಆಟಗಾರನನ್ನು ಬಯಸುತ್ತಾರೆ. ಭಾರತ ತಂಡ ಫೈನಲ್‌ಗೆ ತಲುಪುತ್ತದೆಯೇ ಅಥವಾ ಇಲ್ಲವೇ ಎಂಬುದು ನಂತರದ ವಿಷಯವಾಗಿದೆ. ಆದರೆ ಇದು ಆಯ್ಕೆ ಸಮಿತಿಯ ಆಲೋಚನೆಯಾಗಿದೆ. ನಾವು ಬಹುಶಃ ರೋಹಿತ್ ಶರ್ಮಾ ಕೊನೆಯ ಬಾರಿ ಟೆಸ್ಟ್ ಆಡುವುದನ್ನು ನೋಡಿದ್ದೇವೆ,” ಎಂದು ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

ಗವಾಸ್ಕರ್‌ ಹೇಳಿಕೆಯನ್ನು ಒಪ್ಪಿದ ರವಿ ಶಾಸ್ತ್ರಿ

“ಟಾಸ್‌ ಬಳಿಕ ಜಸ್‌ಪಪ್ರೀತ್‌ ಬುಮ್ರಾ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದರು. ರೋಹಿತ್‌ ಶರ್ಮಾ ಅವರೇ ಸ್ವತಃ ಸಿಡ್ನಿ ಟೆಸ್ಟ್‌ನಿಂದ ವಿರಾಮ ಪಡೆಯಲು ಬಯಸಿದ್ದಾರೆಂಬ ಅಂಶವನ್ನು ಬುಮ್ರಾ ತಿಳಿಸಿದ್ದಾರೆ,” ಎಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಕಾಮೆಂಟರಿ ವೇಳೆ ಹೇಳಿದ್ದಾರೆ.

“ನೀವು ರನ್ ಗಳಿಸದಿದ್ದಾಗ ಮತ್ತು ಮಾನಸಿಕವಾಗಿ ನೀವು ಇಲ್ಲದಿದ್ದಾಗ ಇಂಥಾ ಸಂದರ್ಭವನ್ನು ಎದುರಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಹೊರಗುಳಿಯಲು ಒಪ್ಪಿಕೊಂಡಿರುವುದು ನಾಯಕನ ಅತ್ಯಂತ ಧೈರ್ಯದ ನಿರ್ಧಾರವಾಗಿದೆ,” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.

ಭಾರತವು ಸರಣಿಯಲ್ಲಿ 1-2 ಹಿನ್ನಡೆಯಲ್ಲಿದೆ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲು ಸಿಡ್ನಿ ಟೆಸ್ಟ್ ಅನ್ನು ಭಾರತ ಗೆಲ್ಲಬೇಕಾಗಿದೆ. ಇಲ್ಲಿ ತಂಡ ಸೋತರೆ ಡಬ್ಲ್ಯುಟಿಸಿ ಫೈನಲ್‌ಗೆ ತಲುಪುವ ಎಲ್ಲಾ ನಿರೀಕ್ಷೆಗಳು ಕಳೆದುಹೋಗುತ್ತವೆ. ಭಾರತ ಮುಂದಿನ ಟೆಸ್ಟ್ ಸರಣಿಯನ್ನು ಜೂನ್‌ನಲ್ಲಿ ಆಡಬೇಕಿದೆ.

ರೋಹಿತ್‌ ನಿರ್ಧಾರವನ್ನು ಶ್ಲಾಘಿಸಿದ ಮಾಂಜ್ರೇಕರ್‌

“ಅವರು ಚಿಕ್ಕವರಲ್ಲ ಮತ್ತು ಭಾರತಕ್ಕೆ ಯುವಕರ ಕೊರತೆ ಇಲ್ಲವೇ ಇಲ್ಲ. ಅತ್ಯಂತ ಪ್ರತಿಭಾವಂತ ಆಟಗಾರರು ತಂಡದ ಬಾಗಿಲ ಬಳಿ ನಿಂತು ಕಾಯುತ್ತಿದ್ದಾರೆ. ಇದು ಕಠಿಣ ನಿರ್ಧಾರ ಆದರೆ ಎಲ್ಲರೂ ಮುಂದೊಂದು ದಿನ ಈ ನಿರ್ಧಾರ ತೆಗೆದುಕೊಳ್ಳಲೇಬೇಕು,” ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ರೋಹಿತ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಕಳಪೆ ಫಾರ್ಮ್‌ನಿಂದ ಕೈ ಬಿಡಲಾಗಿದೆ: ಮಾರ್ಕ್‌ ಟೇಲರ್‌

ನಿರ್ಣಾಯಕ ಟೆಸ್ಟ್‌ನಿಂದ ಹೊರಗುಳಿಯಲು ನಾಯಕ ನಿರ್ಧರಿಸುವುದಿಲ್ಲ ಮತ್ತು ಕಳಪೆ ಫಾರ್ಮ್‌ನಿಂದಾಗಿ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಯಾವುದೇ ತಂಡದ ನಾಯಕ ಸರಣಿಯ ಕೊನೆಯ ಟೆಸ್ಟ್‌ಗೆ ವಿಶ್ರಾಂತಿ ಪಡೆಯುವುದಿಲ್ಲ, ಅದೂ ನಿರ್ಣಾಯಕ ಪಂದ್ಯದಲ್ಲಿ. ಅವರು ಹೊರಹಾಕಲ್ಪಟ್ಟಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ಸುಮ್ಮನೆ ಹೇಳುತ್ತಿಲ್ಲ. ಅವರು ಶಾಶ್ವತವಾಗಿ ಹೊರಗಿದ್ದಾರೆ ಎಂದು ಇದರ ಅರ್ಥವಲ್ಲ. ಅವರು ಔಟ್ ಆಗಿದ್ದಾರೆ ಏಕೆಂದರೆ ಅವರು ಫಾರ್ಮ್‌ನಿಂದ ಹೊರಗಿದ್ದಾರೆ. ಇದು ವೃತ್ತಿಪರ ಆಟವಾಗಿದೆ.,” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ತಪ್ಪು ತಿದ್ದಿಕೊಳ್ಳದ ಪತಿ ವಿರಾಟ್‌ ಕೊಹ್ಲಿ ವಿರುದ್ಧ ಅನುಷ್ಕಾ ಶರ್ಮಾ ಗರಂ!