- ಕೇಶವ ಪ್ರಸಾದ್ ಬಿ.
ಎಷ್ಟೋ ಮಂದಿ ತಾವು ಗಳಿಸುವ ಆದಾಯದಲ್ಲಿ ಒಂದು ಪಾಲನ್ನು ಹೂಡಿಕೆ ಮಾಡುತ್ತಾರೆ. ಅದು ಚಿನ್ನ, ಸೈಟ್, ಷೇರು, ಮ್ಯೂಚುವಲ್ ಫಂಡ್ ಇರಬಹುದು. ಆದರೆ ಹೂಡಿಕೆಯಷ್ಟೇ ಮುಖ್ಯ ಜೀವ ವಿಮೆಯನ್ನು ಖರೀದಿಸುವುದು ಎಂಬುದನ್ನು ಮರೆಯುವವರೂ ಇದ್ದಾರೆ. ಆದ್ದರಿಂದ ಹೂಡಿಕೆಗೂ ಮುನ್ನ ಜೀವ ವಿಮೆ(Life Insurance)ಯನ್ನು ಹೊಂದಲು ಮರೆಯದಿರಿ. ಹಾಗಾದರೆ ಜೀವ ವಿಮೆಯ ಪ್ರಯೋಜನಗಳು, ಅವುಗಳ ವಿಧಗಳು ಮತ್ತು ಯಾರಿಗೆ ಯಾವ ಜೀವ ವಿಮೆ ಬೆಸ್ಟ್ ಎಂಬುದನ್ನು ನೋಡೋಣ.
ಮನುಷ್ಯನ ಜೀವನ ಅನಿಶ್ಚಿತತೆಯಿಂದ ಕೂಡಿದೆ. ಆರೋಗ್ಯವಂತರಂತೆ ಲವಲವಿಕೆಯಿಂದ ಇರುವವರೂ ಹಠಾತ್ ಸಾವಿಗೀಡಾಗಬಹುದು. ಚಿಕ್ಕ ವಯಸ್ಸಿನವರಿಗೂ ಹೃದಯಾಘಾತ, ಕ್ಯಾನ್ಸರ್ ಇತ್ಯಾದಿ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು. ಆದ್ದರಿಂದ ಹಣಕಾಸು ಯೋಜನೆಯಲ್ಲಿ ಜೀವ ವಿಮೆಯು ಇಂದು ಹೂಡಿಕೆಯಷ್ಟೇ ಪ್ರಾಮುಖ್ಯತೆ ಪಡೆದಿದೆ. ನಿಮ್ಮ ಹೂಡಿಕೆಯ ಸುರಕ್ಷತೆಗೆ ಜೀವ ವಿಮೆಯೂ ಅತ್ಯವಶ್ಯಕ.
ಮೋಹನ ಎಂಬುವರ ಉದಾಹರಣೆ ತೆಗೆದುಕೊಳ್ಳಿ. ಅವರಿಗೆ ತಿಂಗಳಿಗೆ 25,000 ರೂ. ಖರ್ಚು ವೆಚ್ಚಗಳು ಇವೆ. ಜತೆಗೆ 25 ಲಕ್ಷ ರೂ.ಗಳ ಗೃಹ ಸಾಲ ಇದೆ. ಇದರ ಅವಧಿ 10 ವರ್ಷಗಳು. ಮೋಹನ ಅವರ ವಯಸ್ಸು ಈಗ 27. ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಪೋಷಕರ ಪಾಲನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈ ಕೇಸ್‌ನಲ್ಲಿ ಒಂದು ವೇಳೆ ಮೋಹನ್ ಅವರು ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟರು ಎಂದು ಭಾವಿಸಿ. ಆಗ ಹೋಮ್‌ಲೋನ್ ಕಂತುಗಳನ್ನು ಕಟ್ಟುವವರು ಯಾರು? ಜೀವನ ನಡೆಸಲು ಪ್ರತಿ ತಿಂಗಳೂ ದುಡ್ಡು ಹೊಂದಿಸುವುದು ಹೇಗೆ?
ಪ್ರತಿ ತಿಂಗಳೂ 25,000 ರೂ. ಎಂದರೆ ವರ್ಷಕ್ಕೆ 3 ಲಕ್ಷ ರೂ. ಬೇಕು. ಬ್ಯಾಂಕ್‌ನಲ್ಲಿ 35 ರಿಂದ 40 ಲಕ್ಷ ರೂ. ಠೇವಣಿ ಇಟ್ಟರೆ ತಿಂಗಳಿಗೆ 25,000 ರೂ. ಸಿಗಬಹುದು. ಇನ್ನು 25 ಲಕ್ಷ ಹೋಮ್‌ಲೋನ್ ಇರುವುದರಿಂದ ಈ ಕುಟುಂಬಕ್ಕೆ ಕನಿಷ್ಠ 65 ಲಕ್ಷ ರೂ.ಗಳ ಜೀವ ವಿಮೆ ಕವರೇಜ್ ಅವಶ್ಯಕ. ಆದರೆ ಈಗಿನ ಹಣದುಬ್ಬರವನ್ನು ಪರಿಗಣಿಸಿದರೆ, 65 ಲಕ್ಷ ರೂ.ಗಳ ಇನ್ಷೂರೆನ್ಸ್ ಸಾಕಾಗದು. ಮೋಹನ ಅವರು 75 ಲಕ್ಷದಿಂದ 80 ಲಕ್ಷ ರೂ. ಮೊತ್ತದ ವಿಮೆ ಕವರೇಜ್ ಪಡೆಯುವುದು ಸೂಕ್ತ.
ಹಾಗಾದರೆ ಎಷ್ಟು ಮೊತ್ತದ ಜೀವ ವಿಮೆ ಕವರೇಜ್ ಅಗತ್ಯ ಎಂಬ ಪ್ರಶ್ನೆ ಬರುವುದು ಸಹಜ. ಮೊದಲನೆಯದಾಗಿ ನಿಮ್ಮ ಆದಾಯವನ್ನು ನಿಮ್ಮ ಕುಟುಂಬದ ಎಷ್ಟು ಮಂದಿ ಅವಲಂಬಿಸಿದ್ದಾರೆ ಎಂಬುದನ್ನು ಗಮನಿಸಿ. ಎರಡನೆಯದಾಗಿ ಲಾಯಬಿಲಿಟಿಸ್ ಅಂದ್ರೆ ಸಾಲ ಸೋಲಗಳು ಎಷ್ಟಿವೆ ಎಂಬುದನ್ನು ಪರಿಗಣಿಸಿ. ತಜ್ಞರ ಪ್ರಕಾರ, ನಿಮ್ಮ ಆದಾಯದ ಕನಿಷ್ಠ 10ರಿಂದ 15 ಪಟ್ಟು ವಿಮೆ ಕವರೇಜ್ ಅಗತ್ಯ.
ಜೀವ ವಿಮೆ ಅಥವಾ ಲೈಫ್ ಇನ್ಷೂರೆನ್ಸ್‌ನಲ್ಲಿ ಮುಖ್ಯವಾಗಿ 5 ವಿಧಗಳಿವೆ. ಅವುಗಳೆಂದರೆ-
- ಟರ್ಮ್ ಇನ್ಷೂರೆನ್ಸ್: ಟರ್ಮ್ ಇನ್ಷೂರೆನ್ಸ್ ಎಂದರೆ ಹೆಸರೇ ಸೂಚಿಸುವಂತೆ ನಿರ್ದಿಷ್ಟ ಅವಧಿಯನ್ನು ಹೊಂದಿರುವ ಅಪ್ಪಟ ಜೀವ ವಿಮೆ. ಇದರ ವಿಶೇಷ ಏನೆಂದರೆ ಪ್ರೀಮಿಯಂ ಅಗ್ಗವಾಗಿರುತ್ತದೆ. 1ರಿಂದ 35 ವರ್ಷ ಅವಧಿಯ ಟರ್ಮ್ ಇನ್ಷೂರೆನ್ಸ್ ಪಡೆಯಬಹುದು. ಅವಧಿಯುದ್ದಕ್ಕೂ ಪ್ರೀಮಿಯಂ ಏರಿಕೆಯಾಗುವುದಿಲ್ಲ. ಅವಧಿಯ ನಡುವೆ ಪಾಲಿಸಿದಾರ ಮೃತಪಟ್ಟರೆ ಟರ್ಮ್ ಲೈಫ್ ಇನ್ಷೂರೆನ್ಸ್ ಕವರೇಜ್ ಪ್ರಕಾರ ವಿಮೆ ಮೊತ್ತ ಸಿಗುತ್ತದೆ. ಒಂದು ವೇಳೆ ಪಾಲಿಸಿಯ ಅವಧಿ ಮುಗಿದಾಗಲೂ ಪಾಲಿಸಿದಾರರು ಜೀವಿಸಿದ್ದರೆ, ಯಾವುದೇ ಕ್ಲೇಮ್ ಸಿಗುವುದಿಲ್ಲ.
- ಎಂಡೊಮೆಂಟ್ ಇನ್ಷೂರೆನ್ಸ್:ಎಂಡೊಮೆಂಟ್ ವಿಮೆಯಲ್ಲಿ ಜೀವ ವಿಮೆಯ ಜತೆಗೆ, ಮೆಚ್ಯೂರಿಟಿಯ ಅವಧಿ ಆದ ಬಳಿಕ ಹಣ ಸಿಗುತ್ತದೆ. ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ಇಡಿಯಾಗಿ ಪರಿಹಾರ ಮೊತ್ತ ಸಿಗುತ್ತದೆ. ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರ ಬದುಕಿದ್ದರೂ, ಆತನಿಗೆ ಮೆಚ್ಯೂರಿಟಿಯ ಬೆನಿಫಿಟ್‌ಗಳು ಸಿಗುತ್ತವೆ. ಇದರಿಂದ ಜೀವ ವಿಮೆಯ ಜತೆಗೆ ಉಳಿತಾಯದ ಅಭ್ಯಾಸವೂ ಹೆಚ್ಚುತ್ತದೆ.
- ಹೋಲ್ ಲೈಫ್ ಇನ್ಷೂರೆನ್ಸ್: ಹೋಲ್ ಲೈಫ್ ಇನ್ಸೂರೆನ್ಸ್ ಪಾಲಿಸಿಗಳಲ್ಲಿ ಫಿಕ್ಸೆಡ್ ಎಂಡ್ ಡೇಟ್ ಇರುವುದಿಲ್ಲ. ಪ್ರೀಮಿಯಂ ಕಟ್ಟುವವರೆಗೆ ಡೆತ್ ಬೆನಿಫಿಟ್ ಮಾತ್ರ ಇರುತ್ತದೆ. ಖಾತರಿಯ ಡೆತ್ ಬೆನಿಫಿಟ್ ಕೊಡುವುದು ಇದರ ಉದ್ದೇಶ. ಪಾಲಿಸಿದಾರರಿಗೆ 99 ವರ್ಷವಾಗುವ ತನಕ ಕವರೇಜ್ ಸಿಗುತ್ತದೆ. ಇದರದಲ್ಲಿ ಪ್ರೀಮಿಯಂ ಮೊತ್ತವು ಫಿಕ್ಸೆಡ್ ಆಗಿರುತ್ತದೆ. ಮಧ್ಯೆ ಬದಲಾಗುವುದಿಲ್ಲ. ಸಾವು ಸಂಭವಿಸಿದಾಗ ಅಥವಾ 100ನೇ ವಯಸ್ಸಿಗೆ ಪಾಲಿಸಿಯು ಮೆಚ್ಯೂರ್ ಆಗುತ್ತದೆ. ಟರ್ಮ್ ಇನ್ಷೂರೆನ್ಸಿಗೂ ಹೋಲ್ ಲೈಫ್ ಇನ್ಸೂರೆನ್ಸ್‌ಗೂ ವ್ಯತ್ಯಾಸ ಇರುತ್ತದೆ. ಟರ್ಮ್ ಇನ್ಸೂರೆನ್ಸ್‌ನಲ್ಲಿ 10ರಿಂದ 30 ವರ್ಷ ವಯಸ್ಸಿನ ಅವಧಿ ಇರುತ್ತದೆ. ಅವಧಿಗೆ ಮುನ್ನ ವಿತ್ ಡ್ರಾವಲ್ಸ್‌ಗೆ ನಿರ್ದಿಷ್ಟ ಮೊತ್ತವೂ ಇಲ್ಲಿ ಸಿಗುತ್ತದೆ.
ಜೀವ ವಿಮೆಗಳಿಗೆ ಸಂಬಂಧಿಸಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕ 1.50 ಲಕ್ಷ ರೂ. ತನಕದ ಪ್ರೀಮಿಯಂ ಪಾವತಿ ಮೇಲೆ ತೆರಿಗೆ ವಿನಾಯಿತಿ ಸೌಲಭ್ಯವು ಸಿಗುತ್ತದೆ. - ಮನಿ ಬ್ಯಾಕ್ ಪಾಲಿಸಿ:ಮನಿ ಬ್ಯಾಕ್ ಪಾಲಿಸಿಗಳಲ್ಲಿ ಪಾಲಿಸಿಯ ಅವಧಿಯುದ್ದಕ್ಕೂ ನಿಯಮಿತ ಅವಧಿಗಳಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುತ್ತೀರಿ. ಪಾಲಿಸಿಯ ಅವಧಿಯ ನಡುವೆ ಪಾಲಿಸಿದಾರ ಮೃತಪಟ್ಟರೆ, ಬೆನಿಫೀಶಿಯರಿಗೆ ವಿಮೆ ಪರಿಹಾರ ಮೊತ್ತ ಸಿಗುತ್ತದೆ. ವಿಮೆ ಮತ್ತು ಉಳಿತಾಯದ ಅನುಕೂಲ ಬೇಕೆನ್ನುವವರಿಗೆ ಇದು ಸೂಕ್ತ.
- ಯುಲಿಪ್:ಯುಲಿಪ್ ಎಂದರೆ ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಯಾಗಿದೆ. ಇಲ್ಲಿ ನಿಮಗೆ ಜೀವ ವಿಮೆ ಮತ್ತು ಮ್ಯೂಚುವಲ್ ಫಂಡ್ ಬೆನಿಫಿಟ್ ಸಿಗುತ್ತದೆ. ಯುಲಿಪ್‌ಗಳಲ್ಲಿ ಪ್ರೀಮಿಯಂನ ನಿರ್ದಿಷ್ಟ ಪಾಲನ್ನು ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಜೀವ ವಿಮೆಗಳಲ್ಲಿ ಇರುವ ವಿಧಗಳ ವ್ಯತ್ಯಾಸಗಳ ಬಗ್ಗೆ ಅರಿತುಕೊಂಡು ನಿಮ್ಮ ಅಗತ್ಯಕ್ಕೆ ಸೂಕ್ತವಾಗಬಲ್ಲ ವಿಮೆಯನ್ನು ಖರೀದಿಸಿಕೊಳ್ಳಿ.
ಈ ಸುದ್ದಿಯನ್ನೂ ಓದಿ: ಅನಿವಾಸಿ ಭಾರತೀಯರಿಗಾಗಿ ಅವಧಿ ವಿಮೆ ಯೋಜನೆ