Saturday, 10th May 2025

‌Roopa Gururaj Column: ಗಿಡವನ್ನು ಹೆಚ್ಚಾಗಿ ಬೆಳೆಸಲು ಬೇರು ಗಟ್ಟಿಯಾಗಬೇಕು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಮಾವೋ ತ್ಸೇ ತುಂಡ್’ ಇನ್ನೂ ಚಿಕ್ಕ ಹುಡುಗನಾಗಿದ್ದಾಗ, ಅವರ ತಾಯಿ ಮನೆಯ ಮುಂದೆ ಸುಂದರವಾದ ಹೂದೋಟವನ್ನು ಮಾಡಿದ್ದರು. ತೋಟದಲ್ಲಿ ಅತ್ಯಂತ ಸುಂದರವಾದ ವಿವಿಧ ಜಾತಿಯ ಬಣ್ಣದ ಹೂಗಳು ಬಿಡುತ್ತಿದ್ದವು. ಅದರಲ್ಲೂ ಬಣ್ಣ ಬಣ್ಣದ ಗುಲಾಬಿ ಹೂಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತಿದ್ದವು. ಇದನ್ನು
ನೋಡಲು, ದೂರ ದೂರದಿಂದ ಜನರು ಬಂದು ಹೋಗುತ್ತಿದ್ದರು. ಆಕೆಗೆ ಸ್ವಲ್ಪ ವಯಸ್ಸಾಗುತ್ತಾ ಬಂದಂತೆ, ಯಾವುದೋ ಕಾಯಿಲೆಯಿಂದ ನೆರಳತೊಡಗಿದರು.

ಅವರಿಗೆ ತಮ್ಮ ಖಾಯಿಲೆಯ ಬಗ್ಗೆ ಯಾಗಲಿ, ವಯಸ್ಸಿನ ಬಗೆಯಾಗಲಿ ಚಿಂತೆ ಇರಲಿಲ್ಲ, ಅವರ ಚಿಂತೆ ಎಲ್ಲವೂ ಆಕೆ ನೆಟ್ಟ ಹೂವಿನ ಗಿಡಗಳ ಬಗ್ಗೆ ಇತ್ತು. ಆಗ ಅವಳ ಮಗ ಮಾವೋ, ತಾಯಿಯನ್ನು ಸಮಾಧಾನಪಡಿಸುತ್ತಾ, ‘ಅಮ್ಮಾ, ನೀನು ಹೂವಿನ ಗಿಡಗಳ ಬಗ್ಗೆ ಚಿಂತಿಸಬೇಡ. ನಿನ್ನ ಹೂದೋಟವನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಆಶ್ವಾಸನೆ ನೀಡಿದ.

ಹಾಗೆಯೇ ತೋಟವನ್ನು ನೋಡಿಕೊಳ್ಳ ತೊಡಗಿದ. ಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ತೋಟದ ಓಡಾಡುತ್ತಿದ್ದ. ಸ್ವಲ್ಪ ದಿನಗಳ ನಂತರ ಅವನ ತಾಯಿ ಸ್ವಲ್ಪ ಚೇತರಿಸಿಕೊಂಡು, ತಾನು ಬೆಳೆಸಿದ ತೋಟವನ್ನು ನೋಡಲೆಂದು ಬಂದಳು. ತೋಟವನ್ನು ನೋಡಿ ಅವಳಿಗೆ ತುಂಬ ದುಃಖವಾಯಿತು. ತೋಟದಲ್ಲಿದ್ದ ಗಿಡಗಳೆಲ್ಲವೂ ಹಾಳಾಗಿ ಹೋಗಿದೆ, ಗಿಡದ ಎಲೆಗಳು, ಹೂಗಳೆಲ್ಲವೂ ಬಾಡಿ ಒಣಗಿ ನಿಂತಿವೆ. ಅದನ್ನು ನೋಡಿ ಆಕೆ ಬಹಳ ಬೇಸರದಿಂದ
ಮಗನನ್ನು ಕೇಳಿದಳು. ‘ಇಡೀ ದಿನ ನೀನು ತೋಟದಲ್ಲಿಯೇ ಇರುತ್ತಿದ್ದೆ ಇದೇ ಏನು ನೀನು ಗಿಡಗಳನ್ನು ನೋಡಿ ಕೊಳ್ಳುತ್ತಿರುವುದು? ಗಿಡಗಳೆಲ್ಲವೂ ಒಣಗಿ ಹಾಳಾಗಿ ಹೋಗಿದೆ ಇನ್ನೇನು ಅವೆಲ್ಲವೂ ಸಾಯುವ ಸ್ಥಿತಿಯಲ್ಲಿದ್ದಾವೆ ನಾನು ಇವನ್ನೆಲ್ಲ ಎಷ್ಟು ಕಷ್ಟಪಟ್ಟು ಬೆಳೆಸಿದ್ದೇ ಇಷ್ಟು ದಿನ ನೀನು ಮಾಡಿದ್ದಾದರೂ ಏನನ್ನು ಎಂದು ಅವನನ್ನು
ತರಾಟೆಗೆ ತೆಗೆದುಕೊಂಡಳು.

ಆಗ ಮಗ ಅಳಲಾರಂಭಿಸಿದ. ‘ಅಮ್ಮ ನಾನು ತುಂಬಾ ಶ್ರಮಪಟ್ಟು ಪ್ರೀತಿಯಿಂದಲೇ ಎಲ್ಲ ಗಿಡಗಳನ್ನು ನೋಡಿ ಕೊಳ್ಳುತ್ತಿದ್ದೇನೆ. ಆದರೂ ಈ ಗಿಡಗಳ ಸ್ಥಿತಿ ಈ ರೀತಿ ಆಗಿದೆ, ನಾನು ಪ್ರತಿ ಹೂವಿಗೂ ಪ್ರತಿದಿನ ಪ್ರೇಮದಿಂದ ಮುತ್ತಿಟ್ಟೇ ಮಾತನಾಡಿಸುವುದು. ಪ್ರತಿ ಎಲೆಯ ಮೇಲಿದ್ದ ಧೂಳನ್ನು ಒರೆಸಿ ಸ್ವಚ್ಛವಾಗಿ ಇಡುತ್ತಿದ್ದ, ಏಕೆ ಹೀಗಾ ಯಿತು ಎಂದು ನನಗೂ ಗೊತ್ತಾಗುತ್ತಿಲ್ಲ, ಇದರಿಂದ ನನಗೂ, ಬಹಳ ಬೇಸರವಾಗುತ್ತಿದೆ, ಅಮ್ಮಾ’ ಎಂದು ಕಣ್ಣೀರಿಟ್ಟ.

ಆಗ ಅವನ ತಾಯಿ ‘ಥೂ ದಡ್ಡ, ನೀನೊಬ್ಬ ಮೂರ್ಖ, ಹೂಗಳ ಜೀವ, ಅವುಗಳ ಹೂಗಳಲ್ಲಿ, ಅಥವಾ ಎಲೆಗಳಲ್ಲಿ ಇಲ್ಲ, ಅವುಗಳ ಜೀವವಿರುವುದು, ಗಿಡದ ಬುಡದಲ್ಲಿರುವ ಬೇರಿನಲ್ಲಿ. ನೀನು ಎಷ್ಟೇ ಪ್ರೇಮದಿಂದ ಹೂವನ್ನು
ಮುದ್ದಿಸಿ, ಎಲೆಗಳ ಮೇಲಿನ ಧೂಳನ್ನು ತೆಗೆದರೂ, ಗಿಡ ಮಾತ್ರ ಒಣಗಿ ಒಂದು ದಿನ ಗಿಡವೇ ಇಲ್ಲವಾಗುತ್ತದೆ. ಗಿಡದ ಬೇರುಗಳಿಗೆ, ಆಹಾರ , ನೀರನ್ನು ಕೊಟ್ಟಾಗ ಮಾತ್ರ ಅವು ಬದುಕಿ ಉಳಿಯುವುದು. ಹೂಗಳು ನಳನಳಿಸುವುದು’ ಎಂದು ಹೇಳಿದಳು.

ಇಷ್ಟು ಸರಳವಾದ ವಿಚಾರ ತನ್ನ ತಲೆಗೆ ಹೊಳದೇ ಇರಲಿಲ್ಲವೆಂದು ಮಾವೋಗೆ ನಾಚಿಕೆಯಾಯಿತು. ಗಿಡಗಳ ಜೀವವಿರುವುದು ಯಾರಿಗೂ ಕಾಣದ, ನೆಲದೊಳಗೆ ಅವಿತುಕೊಂಡಿರುವ ಅವುಗಳ ಬೇರುಗಳಲ್ಲಿ. ಯಾರು ಬೇರುಗಳನ್ನು ಪೋಷಿಸುವರೊ ಅವರು ಹೂಗಳ ಬಗ್ಗೆ ಎಲೆಗಳ ಬಗ್ಗೆ ಅಷ್ಟೇನು ಕಾಳಜಿ ವಹಿಸಬೇಕಾಗಿಲ್ಲ.

ನಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ ಕೂಡ ಅವರಿಗೆ ಮೊದಲು ಜೀವನ ಕಲೆಯನ್ನು ಕಲಿಸಿ ಅವರನ್ನು ಬೇರಿನಿಂದ ಗಟ್ಟಿಯಾಗಿರಬೇಕು. ಅವರಿಗೆ ಒಳ್ಳೆ ಸಂಸ್ಕಾರ ಕೊಟ್ಟು ಚೆನ್ನಾಗಿ ಬದುಕುವ ರೀತಿ ಹೇಳಿಕೊಟ್ಟಾಗ, ಮೇಲಿನ ಅತಿಯಾದ ಕಾಳಜಿ ಸಿಗದಿದ್ದರೂ ಆ ಮಕ್ಕಳು ಬದುಕುವ ದಾರಿ ಕಂಡುಕೊಳ್ಳುತ್ತಾರೆ. ಅವರಿಗೆ ನಮ್ಮ ಮುದ್ದು, ಉಡುಗೊರೆಗಳು ಇವೆಲ್ಲವೂ ಅವರನ್ನು ಬೆಳೆಸುವುದಿಲ್ಲ. ಶಿಸ್ತು, ಮನೆ ಕೆಲಸ, ಒಳ್ಳೆ ವಿದ್ಯಾಭ್ಯಾಸ, ಸಂಸ್ಕಾರ ಪೌಷ್ಟಿಕವಾದ ಆಹಾರ ಇಂದಿನ ಮಕ್ಕಳನ್ನ ನಾಳಿನ ಜವಾಬ್ದಾರಿಯುತ ಪ್ರಜೆಗಳನ್ನಾಗಿಸುತ್ತದೆ.

ಇದನ್ನೂ ಓದಿ: #RoopaGururaj