ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರೇಳಿ 8.41 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಪ್ರಕರಣದಲ್ಲಿ (Fraud Case) ಬಂಧನವಾಗಿದ್ದ ಐಶ್ವರ್ಯ ಗೌಡ ದಂಪತಿಗೆ (Aishwarya Gowda) ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಐಶ್ವರ್ಯಾ ಗೌಡ ಹಾಗೂ ಪತಿ ಹರೀಶ್ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದ್ದು, ಆರೋಪಿಗಳನ್ನು ಬಿಡುಗಡೆ ಮಾಡಲು ಸೂಚಿಸಿದೆ.
ಐಶ್ವರ್ಯ ಗೌಡ 8.41 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿಗಳಿಗೆ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ಏಕಸದಸ್ಯ ಪೀಠದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಐಶ್ವರ್ಯಗೌಡ ದಂಪತಿ ತನಿಖೆಗೆ ಸಹಕರಿಸಬೇಕು, ಅರ್ಜಿದಾರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾಧಿಕಾರಿ ಶೋಧ ನಡೆಸಬಹುದು ಹಾಗೂ ತನಿಖೆ ಮುಂದುವರಿಸುವಂತೆಯೂ ಹೈಕರ್ಟ್ ನ್ಯಾಯಮೂರ್ತಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು.
ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ದಂಪತಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿ, ಡಿ. 28ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ಮತ್ತೊಂದು ದೂರು ದಾಖಲು
ಚಿನ್ನಾಭರಣ ವಂಚನೆ ಕೇಸ್ನಲ್ಲಿ ಬಂಧನವಾಗಿದ್ದ ಐಶ್ವರ್ಯ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ಮತ್ತೊಬ್ಬರಿಗೆ ಐಶ್ವರ್ಯಗೌಡ ವಂಚನೆ ಮಡಿದ್ದಾರೆ ಎಂದು ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಆರ್.ಆರ್.ನಗರ ಠಾಣೆಯಲ್ಲಿ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಮತ್ತು ಬೌನ್ಸರ್ ಗಜಾ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Naxals: ಅಂತಾರಾಜ್ಯ ಗಡಿಗಳತ್ತ ನುಗ್ಗುತ್ತಿದೆ ನಕ್ಸಲ್ ಪಡೆ; ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ
ಬ್ರಿಡ್ಜ್ ಮೇಲಿಂದ ಭೀಮಾ ನದಿಗೆ ಲಾರಿ ಬಿದ್ದು ಚಾಲಕ ನಾಪತ್ತೆ

ಕಲಬುರಗಿ: ಇಟಗಾ ಮತ್ತು ಗಾಣಗಾಪುರ್ ಮಧ್ಯೆ ಇರುವ ಬ್ರಿಡ್ಜ್ ಮೇಲಿಂದ ಕಬ್ಬಿನ ಲಾರಿಯೊಂದು ಭೀಮಾ ನದಿಗೆ ಬಿದ್ದು ಚಾಲಕ ನಾಪತ್ತೆಯಾಗಿರುವ ಘಟನೆ (Kalaburagi News) ನಡೆದಿದೆ. ಲಾರಿಯಲ್ಲಿರುವ ಕಬ್ಬು ಜೇವರ್ಗಿ ತಾಲೂಕಿನ ನೆಲೋಗಿ ರೈತರದ್ದಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಲಾರಿ ಚಾಲಕ ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ್, ಪಿಎಸ್ಐ ರಾಹುಲ್ ಪಾವಡೆ, ಪೊಲೀಸ್ ಸಿಬ್ಬಂದಿ ಸಂಗಣ್ಣ ಸೇರಿ ಅಗ್ನಿ ಶಾಮಕ ದಳ ಭೇಟಿ ನೀಡಿ ಪರಿಶೀಲಿಸಿದ್ದು, ನದಿಯಿಂದ ಲಾರಿ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆ ಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.