ಅಲಿಘಡ್: ರಜೆಯಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಯೋಧರೊಬ್ಬರು ಚಲಿಸುತ್ತಿರುವ ರೈಲು ಮತ್ತು ಪ್ಲ್ಯಾಟ್ ಫಾರಂ ನಡುವೆ ಸಿಲುಕಿಕೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಘಡ್ ರೈಲು ನಿಲ್ದಾಣದಲ್ಲಿ (Aligarh Railway Station) ನಡೆದಿದ್ದು, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಜೆ.ಎನ್. ಮೆಡಿಕಲ್ ಕಾಲೇಜಿನಲ್ಲಿ (JN Medical College) ಮೃತಪಟ್ಟಿದ್ದಾರೆ. ಈ ಘಟನೆಯ ಸಿಸಿ ಫೂಟೇಜ್ (CC Footage) ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಪೋಸ್ಟ್ ಮಾರ್ಟಂ ಬಳಿಕ ಯೋಧನ ಮೃತದೇಹವನ್ನು ಪೊಲೀಸರು ಆರ್.ಎ.ಎಫ್.ಗೆ (RAF) ಹಸ್ತಾಂತರಿಸಿದ್ದಾರೆ. ಬಳಿಕ ಮೃತದೇಹವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬಿಹಾರದಲ್ಲಿರುವ (Bihar) ಅವರ ಮನೆಗೆ ಕೊಂಡೊಯ್ದು ಮನೆಯವರಿಗೆ ಹಸ್ತಾಂತರಿಸಲಾಗಿದೆ.
ಈ ನತದೃಷ್ಟ ಆರ್.ಎ.ಎಫ್. (RAF) ಯೋಧನನ್ನು ಎ.ಎಸ್.ಐ. ಬಿಂದಾ ರೈ ಎಂದು ಗುರುತಿಸಲಾಗಿದೆ. ಇವರು ಅಲಿಘಡ್ನ 104ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಮೂಲತಃ ಬಿಹಾರದ ಪಟ್ನಾ (Patna) ಜಿಲ್ಲೆಯವರಾಗಿದ್ದಾರೆ. ರಜೆ ಪಡೆದು ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಡಿ. 29ರ ರಾತ್ರಿ ಇವರು ಅಲಿಘಡ್ ರೈಲು ನಿಲ್ದಾಣಕ್ಕೆ ತಲುಪಿದ್ದರು ಮತ್ತು ಬಿಹಾರಕ್ಕೆ ಹೋಗುವ ರೈಲಿನ ಎಸಿ ಬೋಗಿಯಲ್ಲಿ ಇವರ ಟಿಕೆಟ್ ರಿಸರ್ವ್ ಆಗಿತ್ತು. ಆದರೆ ವಿಧಿಯಾಟ ಬೇರೆಯೇ ಅಗಿತ್ತು.
ಯೋಧ ಬಿಂದಾ ಅವರು ತನ್ನ ಬೋಗಿಯನ್ನು ಪ್ರವೇಶಿಸಿದ್ದರು. ಆದರೆ ಮೊಬೈಲ್ನಲ್ಲಿ ಮಾತನಾಡಲೆಂದು ಕೆಳಗಿಳಿದಿದ್ದರು. ಅಷ್ಟೊತ್ತಿಗಾಗಲೇ ರೈಲು ಚಲಿಸಲಾರಂಭಿಸಿತು. ಇದನ್ನು ಕಂಡ ಅವರು ರೈಲನ್ನೇರುವ ಪ್ರಯತ್ನದಲ್ಲಿದ್ದಾಗ ಕಾಲು ಜಾರಿ ಪ್ಲ್ಯಾಟ್ ಫಾರಂನಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ರೈಲು ಮತ್ತು ಪ್ಲ್ಯಾಟ್ ಫಾರಂ ನಡುವೆ ಸಿಲುಕಿದ ಸ್ಥಿತಿಯಲ್ಲಿ ಅವರನ್ನು ರೈಲು ಒಂದಷ್ಟು ದೂರ ಎಳೆದುಕೊಂಡು ಸಾಗಿರುವುದು ಈ ಸಿಸಿ ಕೆಮ್ಯಾರದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ: Heart Attack: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಯುವ ಕ್ರಿಕೆಟಿಗ
ಬಳಿಕ ರೈಲಿನಲ್ಲಿದ್ದ ಪ್ರಯಾಣಿಕರು ಚೈನನ್ನು ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಅಲ್ಲಿಂದ ಹೊರಗೆಳೆಯಲಾಯಿತು ಹಾಗೂ ತೀವ್ರವಾಗಿ ಗಾಯಗೊಂಡಿದ್ದ ಯೋಧನನ್ನು ತಕ್ಷಣವೇ ಜೆ.ಎನ್. ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಅದೇ ದಿನ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.