Friday, 16th May 2025

Manipur Violence: ಮಣಿಪುರ ಹಿಂಸಾಚಾರ; ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ: ಸಿಎಂ ಬಿರೇನ್‌ ಸಿಂಗ್‌

ಇಂಫಾಲ್:‌ ಕಳೆದ ವರ್ಷ ಪ್ರಾರಂಭವಾದ ಜನಾಂಗೀಯ ಘರ್ಷಣೆಯಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್(Biren Singh) “ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದಾರೆ. ಈ ವರ್ಷವು ಆಶಾದಾಯಕದೊಂದಿಗೆ ಕೊನೆಗೊಳ್ಳುತ್ತದೆ ಮತ್ತು 2025ರಲ್ಲಿ ರಾಜ್ಯವು ಸಹಜ ಸ್ಥಿತಿಗೆ ಮರಳುತ್ತದೆ ಎಂದು ಆಶಿಸಿತ್ತೇನೆ ಎಂಬುದಾಗಿ ಹೇಳಿದ್ದಾರೆ (Manipur Violence).

ನನ್ನನ್ನು ಕ್ಷಮಿಸಿ: ಬಿರೇನ್‌ ಸಿಂಗ್

“ಈ ಇಡೀ ವರ್ಷ ಅತ್ಯಂತ ದುರದೃಷ್ಟದಿಂದ ಕೂಡಿತ್ತು. ಮೇ 3ರಿಂದ ಇಂದಿನವರೆಗೆ ಏನಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಣಿಪುರದ ಹಿಂಸಾಚಾರದಿಂದಾಗಿ ನನಗೆ ತುಂಬಾ ನೋವಾಗಿದೆ. ನಾನು ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವರು ತಮ್ಮ ಮನೆಗಳನ್ನು ತೊರೆದಿದ್ದಾರೆ. ನನಗೆ ವಿಷಾದವಿದೆ, ನಾನು ಕ್ಷಮೆ ಯಾಚಿಸುತ್ತೇನೆ. ಆದರೆ ಈಗ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶಾಂತಿಯತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ. 2025ರ ವೇಳೆಗೆ ರಾಜ್ಯವು ಮತ್ತೆ ಸಹಜ ಸ್ಥಿತಿಗೆ ಮರಳುವ ವಿಸ್ವಾಸವಿದೆ” ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ರಾಜ್ಯದ ಎಲ್ಲ ಸಮುದಾಯಗಳಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ನೀವು ಹಿಂದಿನ ತಪ್ಪುಗಳನ್ನು ಕ್ಷಮಿಸಬೇಕು ಮತ್ತು ಮರೆತು ಬಿಡಬೇಕು. ನಾವು ಶಾಂತಿಯುತ ಮತ್ತು ಸಮೃದ್ಧ ಮಣಿಪುರದ ಕಡೆಗೆ ಹೊಸ ಹೆಜ್ಜೆ ಇಡಬೇಕು. ಮಣಿಪುರದ ಎಲ್ಲ 35 ಬುಡಕಟ್ಟು ಜನಾಂಗದವರು ಸಾಮರಸ್ಯದಿಂದ ಬದುಕಬೇಕು” ಎಂದು ಅವರು ಹೇಳಿದ್ದಾರೆ.

ಏನಿದು ಹಿಂಸಾಚಾರ?

ಮಣಿಪುರದಲ್ಲಿ ವರ್ಷ ಮೇಯಲ್ಲಿ ಆರಂಭವಾದ ಹಿಂಸಾಚಾರವು 180ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈಟಿ ಸಮುದಾಯದ ಬೇಡಿಕೆ ಮತ್ತು ಬುಡಕಟ್ಟು ಕುಕಿಗಳ ವಿರೋಧದಿಂದ ಹಿಂಸಾಚಾರ ಭುಗಿಲೆದ್ದಿತ್ತು. ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈಟಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಜನಸಂಖ್ಯೆಯ ಶೇ. 40ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ:Pinarayi Vijayan: ಕೇರಳ ಮಿನಿ ಪಾಕಿಸ್ತಾನ; ನಿತೇಶ್‌ ರಾಣೆ ಹೇಳಿಕೆಯನ್ನು ಟೀಕಿಸಿದ ಸಿಎಂ ಪಿಣರಾಯಿ