Saturday, 10th May 2025

Mysore News: ಪಾಠ ಕಲಿಯಲು ಹೋದವಳಿಗೆ ಪ್ರೇಮಪಾಠ‌; ವಿದ್ಯಾರ್ಥಿನಿ ಜತೆ ಲೆಕ್ಚರರ್ ಎಸ್ಕೇಪ್‌!

Mysore News

ಮೈಸೂರು: ಗುರು ಎಂದರೆ ದೇವರ ಸಮ. ಆದರೆ ಇಲ್ಲೊಬ್ಬ ಲೆಕ್ಚರರ್ ವಿದ್ಯಾರ್ಥಿನಿ ಜತೆಯೇ ಪ್ರೀತಿ ಮಾಡಿ ಆಕೆಯ ಜತೆ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯಲ್ಲಿ (Mysore News) ನಡೆದಿದೆ. ತಮ್ಮನ್ನು ಬಿಟ್ಟು ಹೋದ ಮಗಳಿಗೆ ವಾಪಸ್‌ ಬರುವಂತೆ ತಂದೆ-ತಾಯಿ ಹೇಳಿದಾಗ, ನಮಗೆ ತೊಂದರೆ ಕೊಡಬೇಡಿ ನಾವು ಮದುವೆ ಆಗಿದ್ದೀವಿ ಎಂದು ಮಗಳು ಸಂದೇಶ ಕಳುಹಿಸಿದ್ದಾಳೆ. ಇದರಿಂದ ಯುವತಿಯ ಪೋಷಕರು ಕಂಗಾಲಾಗಿದ್ದಾರೆ.

ಮೈಸೂರು ಜಿಲ್ಲೆ‌ ಹುಣಸೂರು ಪಟ್ಟಣದ ಮಹಾವೀರ್ ಕಾಲೇಜ್ ಆಫ್ ಎಜ್ಯುಕೇಶನ್‌ನಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಂದಿಗೆ 39 ವರ್ಷದ ಲೆಕ್ಚರರ್ ಪರಾರಿಯಾಗಿದ್ದಾನೆ. ಲೆಕ್ಚರರ್ ಯಶೋದ್ ಕುಮಾರ್ ಎಂಬುವವರು ತನಗಿಂತ 15 ವರ್ಷದ ಕಿರಿಯ ಯುವತಿಯ ಜತೆ ಪ್ರೀತಿ ಶುರು ಮಾಡಿ, ಆಕೆಯೊಂದಿಗೆ ಪರಾರಿಯಾಗಿದ್ದಾನೆ.

ಇಬ್ಬರ ಪ್ರೇಮಪುರಾಣ ಹುಡುಗಿ ಮನೆಯವರಿಗೆ ತಿಳಿದಾಗ ಲೆಕ್ಚರರ್ ಸಹವಾಸ ಬಿಟ್ಟುಬಿಡು ಎಂದು ಪೋಷಕರು ಅಂಗಲಾಚಿದ್ದ‌ರು. ಆಕೆಯನ್ನು ಹೊರಗೆ ಬಿಡದೇ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಆದರೆ ಡಿ.26 ರಂದು ಯುವತಿಯು ಸರ್ಟಿಫಿಕೇಟ್ ತರುವುದಾಗಿ ಹೇಳಿ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ.

ಯುವತಿಯ ಕುಟುಂಬದವರು ಬೀದಿ‌ಬದಿ ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಕಷ್ಟದ ಬದುಕಿನಲ್ಲೂ ಪೋಷಕರು ಮಗಳ ವಿದ್ಯಾಭ್ಯಾಸಕ್ಕಾಗಿ ಎರಡು ಲಕ್ಷ‌ ಸಾಲ ಮಾಡಿಕೊಂಡಿದ್ದಾರೆ. ಆದರೆ, ಮಗಳು ಲೆಕ್ಚರರ್‌ ಜತೆ ಪ್ರೀತಿ-ಪ್ರೇಮ ಎಂದು ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ಬೇಸರಗೊಂಡು ತಂದೆ ಹಾಸಿಗೆ ‌ಹಿಡಿದಿದ್ದಾರೆ. ಮನೆಗೆ ವಾಪಸ್‌ ಬಂದುಬಿಡು ಎಂದು ಪೋಷಕರು ಹೇಳಿದಾಗ, ನಮಗೆ ತೊಂದರೆ ಕೊಡಬೇಡಿ ನಾವು ಮದುವೆ ಆಗಿದ್ದೀವಿ ಎಂದು ಯುವತಿ ತನ್ನ ಪೋಷಕರಿಗೆ ವಾಟ್ಸ್‌ಆ್ಯಪ್‌ ಮೆಸೇಜ್ ಕಳುಹಿಸಿದ್ದಾಳೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಈ ಬಗ್ಗೆ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Viral Video: ನ್ಯೂಇಯರ್‌ ಪಾರ್ಟಿಗೆ ಮದ್ಯ ಕದಿಯೋಕೆ ಬಾರ್‌ಗೆ ನುಗ್ಗಿದ ಐನಾತಿ ಕಳ್ಳ; ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ!

ಸಿಲಿಂಡರ್‌ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ (hubballi news) ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ (Gas Cylinder Blast) ಗಾಯಗೊಂಡವರು ದಿನಕ್ಕೊಬ್ಬರಂತೆ ಮೃತಪಡುತ್ತಿದ್ದು, ಮಂಗಳವಾರ ಬೆಳಗ್ಗೆ ಮತ್ತೊಬ್ಬರು ಮೃತಪಡುವ ಮೂಲಕ ಸಾವಿನ ಸಂಖ್ಯೆ 8ಕ್ಕೇರಿದೆ.

ಹುಬ್ಬಳ್ಳಿಯಲ್ಲಿ ಅಗ್ನಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ಪ್ರಕಾಶ ಬಾರಕೇರ (42) ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ ತೇಜಸ್ವರ್ (27)​​ ಮೃತಪಟ್ಟಿದ್ದರು. ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇದೀಗ 9 ಗಾಯಾಳುಗಳ ಪೈಕಿ ಕಿಮ್ಸ್​​ನಲ್ಲಿ ಓರ್ವ ಗಾಯಾಳು ಮಾಲಾಧಾರಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತ ಪ್ರಕಾಶ ಬಾರಕೇರ, ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದಾರೆ. ಸೋಮವಾರ ರಾತ್ರಿ ರಾಮನಗರ ನಿವಾಸಿ 26 ವರ್ಷದ ತೇಜಸ್ವರ್ ಸಾತರೆ ಉಸಿರು ಚೆಲ್ಲಿದ್ದಾರೆ. ಮೃತ ತೇಜಸ್ವರ್ 3 ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕುತ್ತಿದ್ದರು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕಿಮ್ಸ್ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಡಿಸೆಂಬರ್ 22ರಂದು ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿದೆ. 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಬೆಂಕಿಯಲ್ಲಿ ಬೆಂದು ಕಿಮ್ಸ್​ ಆಸ್ಪತ್ರೆ ಸೇರಿದ್ದರು. ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಗಾಯಾಳುಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಇದೀಗ ಒಬ್ಬ ಗಾಯಾಳು ಮಾತ್ರ ಬದುಕುಳಿದಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: LPG cylinder Blast: ಹುಬ್ಬಳ್ಳಿ ಸಿಲಿಂಡರ್‌ ಸ್ಫೋಟ ಪ್ರಕರಣ; ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ 7ಕ್ಕೆ ಏರಿಕೆ