Sunday, 11th May 2025

CM Siddaramaiah: ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಷಡಾಕ್ಷರಿಯಿಂದ ಸಿಎಂ ಸಿದ್ದರಾಮಯ್ಯ ಭೇಟಿ, ಬೇಡಿಕೆ ಮಂಡನೆ

cm siddaramaiah cs shadakshari

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Government Employees) ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ. ಎಸ್. ಷಡಾಕ್ಷರಿ (CS Shadakshari) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಜಿಲ್ಲೆ, ತಾಲೂಕು ಪದಾಧಿಕಾರಿಗಳು ಹಾಗೂ ಬೆಂಗಳೂರು ರಾಜ್ಯ ಪರಿಷತ್ ಸದಸ್ಯರ ನಿಯೋಗದೊಂದಿಗೆ ಈ ಭೇಟಿ ಮಾಡಲಾಯಿತು. 2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಈ ಭೇಟಿ ಮಾಡಲಾಗಿದೆ. ಮುಖ್ಯಮಂತ್ರಿಗಳು 2ನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿ. ಎಸ್. ಷಡಾಕ್ಷರಿ ಅವರಿಗೆ ಶುಭ ಹಾರೈಸಿದರು, ಅಭಿನಂದಿಸಿದರು. ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು.

ಕರ್ನಾಟಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 2024ರಲ್ಲಿ ಹಲವು ಕೊಡುಗೆಗಳನ್ನು ನೀಡಿದೆ. ಪ್ರಮುಖವಾಗಿ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಸರ್ಕಾರಿ ನೌಕರರು ಇನ್ನೂ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಬೇಡಿಕೆಗಳು:

  • ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು
  • ಸಮಿತಿಯಿಂದ ವರದಿ ಪಡೆದು ಒಪಿಎಸ್ ಯೋಜನೆ ಮರು ಜಾರಿ
  • ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಅನುದಾನ ಬಿಡುಗಡೆ. ಸಂಘದ ನೂತನ ಚುನಾಯಿತ ನಿರ್ದೇಶಕರು ಮತ್ತು ಪದಾಧಿಕಾರಿಗಳ ಸಮ್ಮಿಲನ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ದಿನಾಂಕ ಮತ್ತು ಸಮಯ ನೀಡಲು ಮನವಿ ಸಲ್ಲಿಕೆ.

ಸಿ. ಎಸ್. ಷಡಾಕ್ಷರಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು:

  • ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ಧತಿ ಮತ್ತು ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ. ಒಪಿಎಸ್ ಅನುಷ್ಠಾನಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಈಗಾಗಲೇ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದ್ದು, ಸರ್ಕಾರದ ಮೇಲೆ ಒತ್ತಡ ತಂದು ಒಪಿಎಸ್ ಮರುಜಾರಿಗೊಳಿಸಲು ಪ್ರಯತ್ನ ನಡೆಸಲಾಗುತ್ತದೆ.
  • ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ಕುಟುಂಬದ ಎಲ್ಲಾ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆ ಕುರಿತು ಸರ್ಕಾರಿ ಆದೇಶ ಹೊರಡಿಸಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವ ಭರವಸೆ.
  • ಭಾರತದ ಸಂವಿಧಾನ ಅನುಚ್ಛೇದ 371ಜೆ ರಂತೆ ಹೈದರಾಬಾದ್-ಕರ್ನಾಟಕದ ಭಾಗದವರಿಗೆ ಮುಂಬಡ್ತಿಯ ಅವಕಾಶವನ್ನು ಕಲ್ಪಿಸುವುದು. ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಎ, ಬಿ, ಸಿ, ಡಿ ವೃಂದಗಳ ಸರ್ಕಾರಿ ಅಧಿಕಾರಿ-ನೌಕರರಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಿಯಮ ಜಾರಿಗೆ ತರುವ ಭರವಸೆ.
  • 7ನೇ ವೇತನ ಆಯೋಗದ ಒಂದನೇ ವರದಿಯ ಶಿಫಾರಸ್ಸಿನಂತೆ ಅನುಷ್ಠಾನಗೊಳ್ಳದೇ ಬಾಕಿ ಇರುವ ಎಲ್ಲಾ ಇತರೆ ಭತ್ಯೆ ಮತ್ತು ಸೌಲಭ್ಯಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವುದು. 7ನೇ ವೇತನ ಆಯೋಗದ 2ನೇ ವರದಿಯನ್ನು ಶಿಫಾರಸ್ಸುಗಳನ್ನು ಶೀಘ್ರ ಜಾರಿಗೊಳಿಸಲು ಕ್ರಮವಹಿಸುವ ಭರವಸೆ.

ಇದನ್ನೂ ಓದಿ: Govt Employees: 2ನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್‌.ಷಡಾಕ್ಷರಿ ಆಯ್ಕೆ