ಬೆಂಗಳೂರು: ಆಸ್ಟ್ರೇಲಿಯಾ(AUS vs IND) ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್(Border–Gavaskar Trophy) ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಭಾರೀ ಟೀಕೆಗೆ ಗುರಿಯಾಗಿರುವ ರೋಹಿತ್ ಶರ್ಮ(Rohit Sharma) ಹಾಗೂ ವಿರಾಟ್ ಕೊಹ್ಲಿಯ(Virat Kohli) ಟೆಸ್ಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸಿಡ್ನಿ(Sydney Test) ಪಂದ್ಯದಲ್ಲಿಯೂ ಭಾರತ ಸೋತು ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಗಳಿಸದಿದ್ದರೆ ಕೊಹ್ಲಿ ಮತ್ತು ರೋಹಿತ್ ಟೆಸ್ಟ್ನಿಂದ ನಿವೃತ್ತಿಯಾಗುವುದು ಖಚಿತ ಎಂ ಚರ್ಚೆಗಳು ಆರಂಭಗೊಂಡಿವೆ.
ರೋಹಿತ್ ಈ ವರ್ಷ 14 ಟೆಸ್ಟ್ ಆಡಿದ್ದು, 26 ಇನ್ನಿಂಗ್ಸ್ಗಳಲ್ಲಿ 24.76ರ ಸರಾಸರಿಯಲ್ಲಿ ಕೇವಲ 619 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಕೊನೆ ಬಾರಿ ಅರ್ಧಶತಕ ಬಾರಿಸಿರುವ ಅವರು, ಆಸ್ಟ್ರೇಲಿಯಾ ಸರಣಿಯಲ್ಲಿ ಕ್ರಮವಾಗಿ 3, 6, 10, 3 ಮತ್ತು 9 ರನ್ ಗಳಿಸಿದ್ದಾರೆ.
ಕೊಹ್ಲಿ ಪರ್ತ್ ಟೆಸ್ಟ್ನಲ್ಲಿ ಶತಕ ಬಾರಿಸಿದರೂ ಈ ವರ್ಷ 10 ಟೆಸ್ಟ್ನ 19 ಇನ್ನಿಂಗ್ಸ್ಗಳಲ್ಲಿ ಅವರು ಗಳಿಸಿದ್ದು ಕೇವಲ 417 ರನ್. ಅವರ ಸರಾಸರಿ ಕೇವಲ 24.52. ಮೊದಲ ಪಂದ್ಯದ ಶತಕ ಹೊರತುಪಡಿಸಿ ಉಳಿದ 6 ಇನ್ನಿಂಗ್ಸ್ಗಳಲ್ಲಿ ಅವರು ಕ್ರಮವಾಗಿ 5, 7, 11, 3, 36 ಮತ್ತು 5 ರನ್ ಗಳಿಸಿದ್ದಾರೆ. ಈಗಾಗಲೇ ಸುನೀಲ್ ಗವಾಸ್ಕರ್ ಸೇರಿ ಹಲವು ಮಾಜಿ ಆಟಗಾರರು ನೇರ ಪ್ರಸಾರದ ಕಾಮೆಂಟ್ರಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದರು. ಮಾಜಿ ಕೋಚ್ ರವಿಶಾಸ್ತ್ರಿ ರೋಹಿತ್ ಶೀಘ್ರದಲ್ಲೇ ಟೆಸ್ಟ್ನಿಂದ ನಿವೃತ್ತಿ ಪಡೆಯಬಹುದು. ಆದರೆ ಕೊಹ್ಲಿ ಇನ್ನೂ 3-4 ವರ್ಷ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಿವೃತ್ತಿ ತಳ್ಳಿ ಹಾಕಿದ ರೋಹಿತ್
ಮೆಲ್ಬರ್ನ್ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಹಿತ್, ನಿವೃತ್ತಿಯ ಬಗ್ಗೆ ಯೋಚನೆಯನ್ನು ತಳ್ಳಿಹಾಕಿದರು ನಿವೃತ್ತಿಯ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸದಿದ್ದರೂ, ಮೆಲ್ಬೋರ್ನ್ ಪಂದ್ಯ ತನ್ನ ಕೊನೇ ಟೆಸ್ಟ್ ಅಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ನನ್ನ ಬ್ಯಾಟಿಂಗ್ ಫಾರ್ಮ್ನತ್ತ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ನನಗೆ ಸಾಧಿಸಬೇಕೆನಿಸಿದ್ದನ್ನು ಸಾಧಿಸಲು ಸಾಧ್ಯವಾಗದ ಬಗ್ಗೆ ಬೇಸರವಿದೆ. ಸಿಡ್ನಿ ಟೆಸ್ಟ್ನಲ್ಲಿ ಪುಟಿದೇಳುವ ವಿಶ್ವಾಸವಿದೆ’ ಎಂದ ರೋಹಿತ್ ಹೇಳಿದರು.