Wednesday, 14th May 2025

ಅಬ್ಬರ ತೋರಲು ಸಜ್ಜಾದ ಪ್ರಜ್ವಲ್‌

ಈ ಹಿಂದೆ ‘ಜೆಂಟಲ್‌ಮ್ಯಾನ್’ ಆಗಿ ಎಂಟ್ರಿಕೊಟ್ಟಿದ್ದ ಆಕ್ಷನ್ ಪ್ರಿನ್ಸ್ ಪ್ರಜ್ವಲ್ ದೇವರಾಜು ಈಗ ‘ಅಬ್ಬರ’ ತೋರಲು  ಸಿದ್ಧವಾಗುತ್ತಿದ್ದಾರೆ.

ಹೌದು, ಪ್ರಜ್ವಲ್ ಹೊಸ ಸಿನಿಮಾ ಮೂಲಕ ಮತ್ತೆ ಭರ್ಜರಿಯಾಗಿ ತೆರೆಗೆ ಎಂಟ್ರಿಕೊಡಲಿದ್ದಾರೆ. ‘ಅಬ್ಬರ’ ಶೀರ್ಷಿಕೆಗೆ ತಕ್ಕಂತೆ ಪಕ್ಕಾ ಆಕ್ಷನ್ ಸಿನಿಮಾವಾಗಿದೆ. ಜತೆಗೆ ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ. ಸಮಾಜದಲ್ಲಿ ದುಷ್ಟರ ಹಾವಳಿ ಹೆಚ್ಚಾದಾಗ, ದೇವರೆ ವಿವಿಧ ರೂಪದಲ್ಲಿ ಅವತಾರ ಎತ್ತಿ ದುಷ್ಟರನ್ನು ಸಂಹರಿಸುತ್ತಾನೆ. ಅಂತೆಯೇ ಚಿತ್ರದಲ್ಲಿ ಸಮಾಜಘಾತುಕ ಶಕ್ತಿಗಳು ಮಿತಿ ಮೀರಿದಾಗ ಅವರ ಹುಟ್ಟಡಗಿಸಲು ನಾಯಕನ ಅಗತ್ಯ ಇರುತ್ತದೆ. ಚಿತ್ರದ ನಾಯಕ ಹೇಗೆ ವಿವಿಧ ಅವತಾರದಲ್ಲಿ ದುಷ್ಟರನ್ನು ಹೆಡೆಮುರಿಕಟ್ಟುತ್ತಾನೆ ಎಂಬುದೇ ‘ಅಬ್ಬರ’ ಚಿತ್ರದ ಒನ್‌ಲೈನ್ ಸ್ಟೋರಿ.

ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಐದು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಂದರಲ್ಲಿ ಮುಗ್ಧ ಹುಡುಗನಾಗಿ ಮತ್ತೊಂದರಲ್ಲಿ ಆಂಗ್ರಿ ಮ್ಯಾನ್ ಆಗಿ… ಹೀಗೆ ವಿವಿಧ ಶೇಡ್‌ನಲ್ಲಿ ಕಂಗೊಳಿಸಿದ್ದಾರೆ. ಪ್ರಜ್ವಲ್ ಜತೆಯಾಗಿ ಮೂವರು ನಾಯಕಿ ಯರು ನಟಿಸಿದ್ದಾರೆ. ಮಂಗಳೂರು ಬೆಡಗಿ ನಿಮಿಕಾ ರತ್ನಾಕರ್, ರಫ್‌ ಅಂಡ್ ಟಫ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಹಿಂದಿನ ಸಿನಿಮಾಗಳಲ್ಲಿ ಗ್ಲಾಮರ್ ಲುಕ್‌ನಲ್ಲಿಯೇ ಕಂಗೊಳಿಸಿದ್ದ ರಾಜಶ್ರೀ ಪೊನ್ನಪ್ಪ ಸಂಪ್ರದಾಯಸ್ಥ ಹುಡುಗಿಯಾಗಿ ಬಣ್ಣಹಚ್ಚಿದ್ದಾರೆ. ನಟಿ ಲೇಖಾಚಂದ್ರ ವೈದ್ಯೆಯಾಗಿ ನಟಿಸಿ ದ್ದಾರೆ. ಈ ಮೂವರೊಂದಿಗೆ ನಾಯಕ ಸಿಲುಕಿ ಹೇಗೆ ಚಡಪಡಿಸುತ್ತಾನೆ ಎಂಬುದನ್ನು ಕೊಂಚ ಕಾಮಿಡಿಯ ಮೂಲಕ ತೋರಿಸಲಾಗಿದೆಯಂತೆ. ಡೈನಾಮಿಕ್ ಸ್ಟಾರ್ ದೇವರಾಜು ನಟಿಸಿರುವ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿರುವ ನಿರ್ದೇಶಕ ರಾಮ್‌ನಾರಾಣ್, ‘ಅಬ್ಬರ’ ಚಿತ್ರಕ್ಕೆ ಆಕ್ಷನ್ ಕಟ್
ಹೇಳಿದ್ದಾರೆ.

ಸಿನಿಮಾ ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ನೀಡಬೇಕು ಎಂಬ ಕನಸು ಬಹುದಿನಗಳಿಂದಲೂ ಇತ್ತು. ಆದರೆ ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಈಗ ಅಂದುಕೊಂಡಂತೆ ಚಿತ್ರ ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದೇನೆ. ಎಲ್ಲಾ ಸಿನಿಪ್ರಿಯರಿಗೂ ಇಷ್ಟವಾಗುವ ಕಥೆ ಚಿತ್ರದಲ್ಲಿದೆ ಎನ್ನುತ್ತಾರೆ ರಾಮ್ ನಾರಾಯಣ್. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಉಳಿದ ಭಾಗದ ಶೂಟಿಂಗ್ ಪೂರ್ಣಗೊಳಿಸಿ ಮುಂದಿನ ವರ್ಷ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ರಾಮ್‌ನಾರಾಯಣ್ ಗೆಳೆಯ ಬಸವರಾಜು ಮಂಚಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *