ಮುಂಬೈ: ಗ್ರಾಹಕರ ಸೋಗಿನಲ್ಲಿ ಬಂದು ಹಾಡಹಗಲೇ ಚಿನ್ನದಂಗಡಿಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮುಂಬೈ ನಗರದ ಹೆಸರಾಂತ ರಿಷಭ್ ಜ್ಯುವೆಲ್ಲರ್ಸ್‌ನಿಂದ(Rishabh Jewelers) ಭಾನುವಾರ(ಡಿ.29) ಹಾಡ ಹಗಲಿನಲ್ಲಿಯೇ ಗ್ರಾಹಕರ ಸೋಗಿನಲ್ಲಿ ಇಬ್ಬರು ದರೋಡೆಕೋರರು 1.91 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ(Robbery)
ಇಬ್ಬರು ದರೋಡೆಕೋರರು ಅನುಮಾನ ಬರದ ರೀತಿಯಲ್ಲಿ ಮೊದಲು ಆಭರಣ ಅಂಗಡಿಯನ್ನು ಪ್ರವೇಶಿಸಿದ್ದು, ಆಭರಣ ಖರೀದಿ ಮಾಡುವ ಗ್ರಾಹಕರಂತೆ ವರ್ತಿಸಿದ್ದಾರೆ. ಕೆಲ ನಿಮಿಷಗಳ ನಂತರ ದರೋಡೆಕೋರರು ಮಾರಕಾಸ್ತ್ರಗಳನ್ನು ತೋರಿಸಿ ಅಂಗಡಿಯ ಸಿಬ್ಬಂದಿಯನ್ನು ಬೆದರಿಸಿ 1.91 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 15 ಸಾವಿರ ನಗದು ಹಾಗೂ ವೈಫೈ ರೂಟರ್ ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಂಚಪೋಕ್ಲಿಯಲ್ಲಿ ವಾಸವಾಗಿರುವ ಉದ್ಯಮಿ ಭವರಲಾಲ್ ಧರಂಚಂದ್ ಜೈನ್ ಎಂಬುವವರು ನೀಡಿದ ದೂರಿನ ಪ್ರಕಾರ ಭಾನುವಾರ ಮಧ್ಯಾಹ್ನ 3.30ರ ಸರಿ ಸುಮಾರಿಗೆ ಈ ಘಟನೆ ನಡೆದಿದೆ ಎಂಬ ಮಾಹಿತಿಯಿದೆ. ಆಭರಣ ಖರೀದಿಸುವ ನೆಪದಲ್ಲಿ ಇಬ್ಬರು ವ್ಯಕ್ತಿಗಳು ಅಂಗಡಿಯೊಳಗೆ ಹೋಗಿದ್ದು, ಇಬ್ಬರೂ ಅಂಗಡಿ ಉದ್ಯೋಗಿ ಪುರಣ್ ಕುಮಾರ್ ಅವರಿಗೆ ಬಂದೂಕು ಮತ್ತು ಚಾಕು ತೋರಿಸಿ ಬೆದರಿಸಿದ್ದಾರೆ. ನಂತರ ಅವರನ್ನು ಹಗ್ಗದಿಂದ ಕಟ್ಟಿಹಾಕಿದ್ದು, ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಕಳುವಾದ ವಸ್ತುಗಳಲ್ಲಿ 2,458 ಗ್ರಾಂ ಚಿನ್ನಾಭರಣ, 2,200 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ 1.77 ಲಕ್ಷ ರೂ ನಗದು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದರೋಡೆಕೋರರ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
350 ಕೆ.ಜಿ ಬೆಳ್ಳಿ, ₹1 ಕೋಟಿ ನಗದು ದೋಚಿದ ತಂಡ
ಕೆಲ ತಿಂಗಳ ಹಿಂದೆಯಷ್ಟೇ ತುಮಕೂರು ತಾಲ್ಲೂಕಿನ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬೆಳಗಿನ ಜಾವ ಕಾರು ಅಡ್ಡಗಟ್ಟಿ 350 ಕೆ.ಜಿ ಬೆಳ್ಳಿ ಗಟ್ಟಿ, ₹1 ಕೋಟಿ ಹಣ ದರೋಡೆ ಮಾಡಲಾಗಿತ್ತು. ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್ ಮಹದೇವ್ ಎಂಬುವರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು. ಮಗ ಬಾಲಾಜಿ, ಸ್ನೇಹಿತರಾದ ಗಣೇಶ್, ವಿನೋದ್ ಜತೆಗಿದ್ದರು. ದಾರಿ ಮಧ್ಯೆ ಮೂರು ಕಾರುಗಳಲ್ಲಿ ಬಂದ ಏಳೆಂಟು ಮಂದಿ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಬಾಲಾಜಿ, ಗಣೇಶ್, ವಿನೋದ್ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದರು.
ದರೋಡೆಕೋರರು ಅನಿಲ್ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದರು. ಸ್ವಲ್ಪ ದೂರ ಕರೆದೊಯ್ದು ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೇನಹಳ್ಳಿ ಬಳಿ ಅನಿಲ್ ಮತ್ತು ಕಾರನ್ನು ಬಿಟ್ಟು, ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಅನಿಲ್ ಪೊಲೀಸರಿಗೆ ದೂರು ನೀಡಿದ್ದರು.
ಈ ಸುದ್ದಿಯನ್ನೂ ಓದಿ: Viral News: ಕೊರಿಯಾ ಪಾಪ್ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್