Saturday, 10th May 2025

Fraud Case: ಪಿಎಂ ಮೋದಿಯ ಪ್ರಧಾನ ಕಾರ್ಯದರ್ಶಿ ಮಗಳು-ಅಳಿಯ ಎಂದು ನಂಬಿಸಿ ಉದ್ಯಮಿಗಳಿಗೆ ಕೋಟಿ..ಕೋಟಿ ಪಂಗನಾಮ!

ಭುವನೇಶ್ವರ: ಕಾಂಗ್ರೆಸ್‌ ಮುಖಂಡ ಡಿ.ಕೆ. ಸುರೇಶ್‌ ಹೆಸರು ದುರ್ಬಳಕೆ ಮಾಡಿಕೊಂಡು ಕಿಲಾಡಿ ದಂಪತಿ ಚಿನ್ನಾಭರಣ ಖರೀದಿಸಿ ವಂಚಿಸಿರುವ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹದ್ದೇ ಒಂದು ಘಟನೆ ಒಡಿಶಾದಲ್ಲಿ ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯವರ ಪುತ್ರಿ ಮತ್ತು ಅಳಿಯ ಎಂದು ಹೇಳಿಕೊಂಡು ಅಮಾಯಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಜೋಡಿಯೊಂದು ಖಾಕಿ ಬಲೆಗೆ ಬಿದ್ದಿದೆ(Fraud Case).

ಭುವನೇಶ್ವರ ಮೂಲದ ದಂಪತಿ ಹನ್ಸಿತಾ ಅಭಿಲಿಪ್ಸಾ(38)ಮತ್ತು ಆಕೆ ಪತಿ ಅನಿಲ್‌ ಕುಮಾರ್‌ ಮೊಹಂಟಿ ಪೊಲೀಸ್‌ ಬಲೆಗೆ ಬಿದ್ದ ಕಿಲಾಡಿ ಜೋಡಿ. ಇವರು ತಮ್ಮನ್ನು ತಾವು ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ನಂಬಿಸಿ, ತಮಗೆ ಗಣ್ಯರ ಪರಿಚಯ ಇರುವುದಾಗಿ ಜನರಿಗೆ ಹಣ ವಂಚಿಸುತ್ತಿದ್ದರು ಎನ್ನಲಾಗಿದೆ.

ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳಿಗೆ ಪಂಗನಾಮ

ಭುವನೇಶ್ವರದ ಹೆಚ್ಚುವರಿ ಡಿಸಿಪಿ ವಲಯ 6 ಸ್ವರಾಜ್ ದೇಬಾಟಾ ಈ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರ ಈ ಕಿಲಾಡಿ ಜೋಡಿಯನ್ನು ಬಂಧಿಸಲಾಯಿತು ಮತ್ತು ಅವರ ವಿರುದ್ಧ BNS ನ ಸೆಕ್ಷನ್ 329 (3), 319 (2), 318 (4), ಮತ್ತು 3 (5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರೂ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ವಂಚನೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಪೊಲೀಸರು ದಂಪತಿಯ ನಿವಾಸದಿಂದ ಹಲವಾರು ಛಾಯಾಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳ ಜೊತೆಗೆ ಅವರು ನಿಂತಿರುವ ಫೊಟೋಗಳು ಇವೆ. ಇದನ್ನೆಲ್ಲಾ ತೋರಿಸಿ ಈ ಜೋಡಿಯು ಭುವನೇಶ್ವರದ ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಣಿ ಮಾಲೀಕರ ದೂರಿನ ಮೇರೆಗೆ ಇವರಿಬ್ಬರನ್ನೂ ಅರೆಸ್ಟ್‌ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: DK Suresh: ಹೆಸರು ದುರ್ಬಳಕೆ; ಐಶ್ವರ್ಯ ಗೌಡ ವಿರುದ್ಧ ಕ್ರಮ ಕೈಗೊಳ್ಳಲು ಡಿ.ಕೆ.ಸುರೇಶ್‌ ದೂರು