Wednesday, 14th May 2025

ನಾನೊಂಥರ ಎಂದ ತಾರಕ್‌

ವೃತ್ತಿಯಲ್ಲಿ ವೈದ್ಯರಾಗಿದ್ದ ತಾರಕ್ ಶೇಖರಪ್ಪ, ಸಿನಿಮಾ ಮೇಲಿನ ಪ್ರೀತಿಯಿಂದ ಕೊನೆಗೂ ‘ನಾನೊಂಥರ’ ಅಂತ ತೆರೆಗೆ ಬಂದಿದ್ದಾರೆ. ಶೀರ್ಷಿಕೆ ಹೀಗಿದ್ದರೂ, ಚಿತ್ರದಲ್ಲಿ ಒಳ್ಳೆಯ ಸಂದೇಶವೇ ಇದೆಯಂತೆ.

ಮುಗ್ಧ ಕಾಲೇಜು ಹುಡುಗನೊಬ್ಬ, ಇಡೀ ಊರಿಗೆ ಮಾದರಿಯಾಗಿರುತ್ತಾನೆ. ಸನ್ನಡತೆಯ ಮೂಲಕವೇ ಎಲ್ಲರ ಪ್ರೀತಿಗೆ ಪಾತ್ರ ನಾಗಿದ್ದ ಆ ಹುಡುಗ ಇದ್ದಕ್ಕಿದ್ದಂತೆ ಬದಲಾಗುತ್ತಾನೆ. ಕುಡಿತದ ಚಟಕ್ಕೆ ಬೀಳುತ್ತಾನೆ. ಈತನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದ ಜನ, ಈಗ ದೂಷಿಸಲು ಶುರು ಮಾಡುತ್ತಾರೆ. ಈತ ಬದಲಾಗಿದ್ದಾದರೂ ಯಾಕೆ ಎಂಬುದೇ ಚಿತ್ರದ ಟ್ವಿಸ್ಟ್. ಅದನ್ನು ತೆರೆಯಲ್ಲಿಯೇ ನೋಡಬೇಕಂತೆ.

ಸ್ವಲ್ಪ ದಿನ ಕಳೆದಂತೆ, ಕುಡಿತಕ್ಕೆ ದಾಸನಾಗಿದ್ದ ನಾಯಕ ಇದ್ದಕ್ಕಿದ್ದಂತೆ ಬದಲಾಗುತ್ತಾನೆ. ಮೊದಲಿನಂತೆಯೇ ಬಹಳ ಸೌಜನ್ಯ ದಿಂದ ನಡೆದುಕೊಳ್ಳುತ್ತಾನೆ. ಇದು ಊರಿನವರಲ್ಲಿ ಅಚ್ಚರಿಯನ್ನು ತರುತ್ತದೆ. ಹೀಗೆ ಈತ ಬದಲಾಗುವುದು ಯಾಕೆ ಎಂಬುದೇ ಚಿತ್ರದ ಸಸ್ಪೆನ್ಸ್. ಈ ನಡುವೆ ನವಿರಾದ ಪ್ರೇಮ ಕಥೆಯೂ ತೆರೆಯಲ್ಲಿ ಹಾದು ಹೋಗುತ್ತದೆ. ಕೌಟುಂಬಿಕ ಕಥೆಯ ಚಿತ್ರದಲ್ಲಿ ಲವ್, ಆಕ್ಷನ್, ಸಸ್ಪೆನ್ಸ್ ಎಲ್ಲವೂ ಬೆರತಿವೆ. ತಾರಕ್ ಈ ಚಿತ್ರದಲ್ಲಿ ಮೂರು ಶೇಡ್‌ನಲ್ಲಿ ಮಿಂಚಿದ್ದಾರೆ.

ತನಗೆ ನೀಡಿದ್ದ ಪಾತ್ರಕ್ಕೆ ಜೀವತುಂಬಬೇಕು ಎಂಬ ಉದ್ದೇಶದಿಂದ ಸತತ ಒಂದು ವರ್ಷ ಶ್ರಮವಹಿಸಿದ್ದಾರೆ. ಅಂತು ಅಂದು ಕೊಂಡಂತೆ ನಟಿಸಿದ್ದೇನೆ, ಪ್ರೇಕ್ಷಕರು ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾರಕ್‌ಗೆ ಜತೆಯಾಗಿ ನವ ನಟಿ ರಕ್ಷಿಕಾ ಅಭಿನಯಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದು ಚಿತ್ರಕ್ಕೆ ಮತ್ತಷ್ಟು ಬಲ ತಂದಿದೆಯಂತೆ. ಇನ್ನುಳಿದಂತೆ ಹಿರಿಯ ನಟಿ ಲಕ್ಷಮ್ಮ, ದಿ.ರಾಕ್‌ಲೈನ್ ಸುಧಾಕರ್ ಕೂಡ ಚಿತ್ರದ ತಾರಾಬಗಳದಲ್ಲಿದ್ದಾರೆ.

ಬೆಂಗಳೂರು ಹಾಗೂ ದೇವನಹಳ್ಳಿಯ ಸುತ್ತ ಒಟ್ಟು ೩೮ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದ ಎಣ್ಣೆ ಸಾಂಗ್ ಸಂಗೀತ ಪ್ರಿಯರನ್ನು ಸೆಳೆದಿದೆ.

Leave a Reply

Your email address will not be published. Required fields are marked *