ಗುಬ್ಬಿ: ಸಿನಿಮಾಗಳಲ್ಲಿ ನಾಯಕ ನಟರಷ್ಟೇ ಪ್ರಾಮುಖ್ಯತೆ ಹಾಸ್ಯ ನಟರಿಗೆ ಆದ್ಯತೆ ತಂದು ಕೊಟ್ಟ ಹೆಗ್ಗಳಿಕೆ ಹಾಸ್ಯ ದಲ್ಲೇ ಮೇರು ನಟ ನರಸಿಂಹರಾಜು ಅವರಿಗೆ ಸಲ್ಲಬೇಕು ಎಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯ ಪಟ್ಟರು.
ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಾಟಕ ಆಕಾಡೆಮಿ ಹಾಗೂ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಾಸ್ಯಬ್ರಹ್ಮ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಹಾಸ್ಯ ಲೇಪನ ಇಲ್ಲದ ಸಿನಿಮಾಗಳಿಗೆ ಯಶಸ್ಸು ಸಿಗುವುದಿಲ್ಲ. ನಾಯಕ ನಟರಂತೆ ಹಾಸ್ಯ ನಟರ ಕಾಲ್ ಶೀಟ್ ಪಡೆಯುವ ಸಮಯ ಸೃಷ್ಟಿಸಿದ್ದು ನರಸಿಂಹರಾಜು ಅವರು ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದರು.
ಸಿನಿಮಾಗಳ ಮೂಲ ರಂಗಭೂಮಿ ನಟರನ್ನು ಸೃಷ್ಟಿಸಿತ್ತು. ಇಂತಹ ಮಹತ್ತರ ಜವಾಬ್ದಾರಿ ನಿರ್ವಹಿಸಿದ್ದ ಹೆಗ್ಗಳಿಕೆ ಗುಬ್ಬಿ ವೀರಣ್ಣ ಅವರ ಕಂಪೆನಿಗೆ ಸಲ್ಲಬೇಕು. ಮೇರು ಕಲಾವಿದರ ಹಿಂಡು ಕನ್ನಡ ಚಂದನವನಕ್ಕೆ ಕೊಡುಗೆ ನೀಡಿದ ಗುಬ್ಬಿ ವೀರಣ್ಣ ಅವರ ಗರಡಿಯಲ್ಲಿ ಪಳಗಿದ ನರಸಿಂಹರಾಜು ಅವರು ಡಾ.ರಾಜ್ ಕುಮಾರ್ ಅವರ ಸಮಕಾಲೀನ ರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದರು. ಇಂದಿನ ಆಧುನಿಕತೆಗೆ ರಂಗಕಲೆ ಸೊರಗದಂತೆ ಕಾಪಾಡುವುದು ಅವಶ್ಯವಿದೆ ಎಂದ ಅವರು ಗುಬ್ಬಿ ವೀರಣ್ಣ ಅವರನ್ನು ಯಜಮಾನರು ಎಂದು ಕರೆಯುತ್ತಿದ್ದ ಕಾಲದಲ್ಲಿ ನಟರ ಕಷ್ಟ ಸುಖ ಅರಿತಿದ್ದ ಗುಬ್ಬಿ ಕಂಪೆನಿ ಶತಮಾನ ಕಂಡ ಅಪರೂಪದ ನಾಟಕ ರಂಗ ಕಂಪೆನಿಯಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಅಭಿನಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದ ಕಲಾವಿದರು ಅರವತ್ತರ ದಶಕದಲ್ಲಿದ್ದರು. ಇಂತಹ ಮೇರು ನಟರ ಮಧ್ಯೆ ಹಾಸ್ಯ ಮೂಲಕ ಸಂದೇಶ ನೀಡಿದ್ದ ನರಸಿಂಹರಾಜು ನಾಯಕ ನಟರನ್ನು ಮೀರಿಸಿ ಬೆಳೆದು ಹೆಮ್ಮರವಾಗಿದ್ದರು. ಹಾಸ್ಯ ನಟರ ಪರಂಪರೆಯಲ್ಲಿ ಬಾಲಣ್ಣ, ಮುಸರಿ, ದೀರೇಂದ್ರ ಗೋಪಾಲ್ ಸೇರಿದಂತೆ ಇಂದಿನ ದೊಡ್ಡಣ್ಣ, ಸಾಧು ಕೋಕಿಲ ವರೆಗೆ ಬೆಳೆದಿದೆ. ನೋವು ನಲಿವು ಕಂಡ ಹಾಸ್ಯ ನಟರ ಮಧ್ಯೆ ಕನ್ನಡ ಚಿತ್ರರಂಗ ಬೆಳೆದಿದೆ. ಈ ಬೆಳವಣಿಗೆ ಯಲ್ಲಿ ಗುಬ್ಬಿ ವೀರಣ್ಣನವರ ಕೊಡುಗೆ ಅಪಾರ ಎಂದರು.
ನಟಿ ಸುಧಾ ನರಸಿಂಹರಾಜು ಮಾತನಾಡಿ ನನ್ನ ತಂದೆಯ ಜನ್ಮ ಶತಮಾನೋತ್ಸವ ಆಚರಣೆ ಅವರ ವೃತ್ತಿ ಬದುಕು ಕಟ್ಟಿಕೊಟ್ಟ ಗುಬ್ಬಿಯಲ್ಲಿ ನಡೆದಿರುವುದು ನಮಗೆ ಹೆಮ್ಮೆ ತಂದಿದೆ. ನನ್ನ ತಂದೆಯಿಂದ ಹಲವು ವಿಚಾರ ಕಲಿತಿ ದ್ದೇನೆ. ಗುಬ್ಬಿ ವೀರಣ್ಣ ಅವರ ಗರಡಿಯಲ್ಲಿ ಕಲಿತು ನಮಗೂ ಅದೇ ಶಿಕ್ಷಣ ನೀಡಿದ್ದರು. ಈ ಸಮಯ ಅವರ ಸವಿ ನೆನಪು ಅಭಿಮಾನಿಗಳಿಗೆ ತಲುಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಕಲಾವಿದರು ಚಾರು ವಸಂತ ಎಂಬ ನಾಟಕ ಪ್ರದರ್ಶಿಸಿ ದರು.
ವೇದಿಕೆಯಲ್ಲಿ ಹಿರಿಯ ನಟ ಡಿಂಗ್ರಿನಾಗರಾಜ್, ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಉಗಮ ಶ್ರೀನಿವಾಸ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ರಾಜೇಶ್ ಗುಬ್ಬಿ ಇತರರು ಇದ್ದರು.