Sunday, 11th May 2025

Blackmail case: ಮಾಜಿ ಯೋಧನ ಪತ್ನಿಗೆ ಖಾಸಗಿ ವಿಡಿಯೋ ತೋರಿಸಿ ಸುಲಿಗೆ, ಜೈಲಿನಲ್ಲಿರುವ ಆರೋಪಿಗೆ ಬಾಡಿ ವಾರಂಟ್

blackmail case

ಬೆಂಗಳೂರು: ‌ಮನೆ ಬಾಡಿಗೆಗೆ ನೀಡಿದ ಮಾಜಿ ಯೋಧ‌ ಹಾಗೂ ಅವರ ಪತ್ನಿಗೆ ರೌಡಿಶೀಟರ್‌ (Rowdy sheeter) ಧೋಖಾ ಇಟ್ಟಿದ್ದಾನೆ. ಮನೆ ಮಾಲಿಕನ ಪತ್ನಿಯನ್ನು ಮರುಳು ಮಾಡಿ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಅದರ ಫೋಟೋ ವಿಡಿಯೋ ಕೂಡ ಮಾಡಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್‌ (Blackmail case) ಮಾಡಿ ಹಣ, ಚಿನ್ನಾಭರಣ ಸುಲಿಗೆ ಮಾಡಿದ್ದಾನೆ. ಈ ಕುರಿತು ದೂರು ನೀಡಲಾಗಿದ್ದು, ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸುಲಿಗೆ ಆರೋಪದಡಿ ರೌಡಿ ಶೀಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 37 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ, ಸುಲಿಗೆ, ಬೆದರಿಕೆ ಆರೋಪದಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಸಂತ್ರಸ್ತೆ ಕುಟುಂಬದ ಜತೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಅಂತಸ್ತಿನ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. 3 ವರ್ಷದ ಹಿಂದೆ ಆರೋಪಿ ಸುರೇಶ್ ತಾನು ಕ್ಯಾಬ್ ಚಾಲಕ ಎಂದು ಪರಿಚಯಿಸಿಕೊಂಡು ಸಂತ್ರಸ್ತೆಯ ಮನೆಯನ್ನು ಭೋಗ್ಯಕ್ಕೆ ಪಡೆದು ನೆಲೆಸಿದ್ದ. ಮನೆ ಖಾಲಿ ಮಾಡಿಕೊಂಡು ತೆರಳಿದ ನಂತರವೂ ಆಗಾಗ ಸಂತ್ರಸ್ತೆಗೆ ಕರೆ ಮಾಡಿ ಮನೆಯಲ್ಲಿ ಪತಿ ಮತ್ತು ಮಕ್ಕಳು ಇಲ್ಲದಿರುವಾಗ ಬಂದು ಹೋಗುತ್ತಿದ್ದ. ಇದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ದೈಹಿಕ ಸಂಬಂಧ ಇರಿಸಿಕೊಂಡಿದ್ದರು. ಆಗ ಖಾಸಗಿ ಕ್ಷಣದ ವಿಡಿಯೋ ಹಾಗೂ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಆಗಾಗ ಬೆದರಿಸಿ ಹಣ ಪಡೆಯುತ್ತಿದ್ದ.

ಈ ನಡುವೆ ಆರೋಪಿ ಸುರೇಶ್‌ಗೆ ಅಪರಾಧದ ಹಿನ್ನೆಲೆ ಇರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ಸಂತ್ರಸ್ತೆ ಆತನಿಗೆ ಮನೆ ಬಳಿ ಬರಬೇಡ ಎಂದಿದ್ದಾರೆ. ಇದಕ್ಕೆ ಆತ, ನಾನು ಕರೆದಾಗ ಬರಬೇಕು. ಕೇಳಿದಷ್ಟು ಹಣ ಕೊಡಬೇಕು. ಇಲ್ಲವಾದರೆ, ಖಾಸಗಿ ವಿಡಿಯೋಗಳನ್ನು ಎಲ್ಲರಿಗೂ ಕಳುಹಿಸಿ ಮರ್ಯಾದೆ ತೆಗೆಯವುದಾಗಿ ಬೆದರಿಸಿದ್ದಾನೆ. ನ.30ರ ರಾತ್ರಿ ವಾಲ್ಮೀಕಿ ನಗರದ ಸರ್ಕಲ್ ಬಳಿ ಎದುರಾಗಿರುವ ಆರೋಪಿ ಸುರೇಶ್, ನಾನು ಫೋನ್ ಮಾಡಿದಾಗ ಏಕೆ ಕರೆ ಸ್ವೀಕರಿಸುವುದಿಲ್ಲ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಂತ್ರಸ್ತೆ, ನಿನ್ನ ಜತೆಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಆರೋಪಿ ಸುರೇಶ್, ಚಾಕು ತೋರಿಸಿ ಬೆದರಿಸಿ ಸಂತ್ರಸ್ತೆ ಕೈಯಲ್ಲಿದ್ದ ಮೊಬೈಲ್, ಕಾರಿನ ಕೀ, ಮನೆಯ ಕೀ, 18ಗ್ರಾಂ ತೂಕದ ಚಿನ್ನದ ಓಲೆಗಳನ್ನು ಕಿತ್ತುಕೊಂಡಿದ್ದಾನೆ.

ಬಳಿಕ ಸಂತ್ರಸ್ತೆ ಮನೆಯ ಬಳಿ ಇದ್ದ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಸಂತ್ರಸ್ತೆ ಕರೆ ಮಾಡಿ ಪ್ರಶ್ನಿಸಿದಾಗ, ನನಗೆ ಹಣ ಕೊಡುವುದಿಲ್ಲ ಎನ್ನುವೆಯಾ, ನಿನಗೆ ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಸಂತ್ರಸ್ತೆ ಜತೆಗಿನ ಖಾಸಗಿ ಫೋಟೋಗಳನ್ನು ಸಂತ್ರಸ್ತೆಯ ಪರಿಚಿತರ ಮೊಬೈಲ್ ಸಂಖ್ಯೆಗೆ ಕಳುಹಿಸಿದ್ದಾನೆ. ಈತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ.

ಆರೋಪಿ ಸುರೇಶ್ ಇತ್ತೀಚೆಗೆ ತುಮಕೂರು ನ್ಯಾಯಾಲಯದ ಬಳಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದಾನೆ. ಹೀಗಾಗಿ ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಬ್ಯಾಡರಹಳ್ಳಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: Cylinder blast: ಸಿಲಿಂಡರ್‌ ಸ್ಫೋಟ- ಸಾವಿನ ಸಂಖ್ಯೆ 5ಕ್ಕೆ ಏರಿಕೆ; ಚಿಕಿತ್ಸೆ ಫಲಿಸದೇ ಮತ್ತೊರ್ವ ಅಯ್ಯಪ್ಪ ಮಾಲಾಧಾರಿ ಸಾವು