Saturday, 10th May 2025

Mahakumbh 2025: ಮಹಾಕುಂಭ ಮೇಳಕ್ಕೆ ಉತ್ತರ ಪ್ರದೇಶ ಸಜ್ಜು, ಗಣ್ಯರಿಗೆ ಆಹ್ವಾನ ನೀಡಿದ ಸಿಎಂ ಯೋಗಿ

Mahakumbh 2025

ಲಖನೌ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಜನವರಿ 13 ರಿಂದ ಮಹಾಕುಂಭ ಮೇಳ ನಡೆಯಲಿದೆ. ಈ ಮಹಾಕುಂಭ ಮೇಳದಲ್ಲಿ (Mahakumbh 2025) ಪಾಲ್ಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಆಹ್ವಾನಿಸಿದ್ದಾರೆ.

ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26, 2025 ರಂದು ಮುಕ್ತಾಯಗೊಳ್ಳಲಿರುವ ಈ ಮಹಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ತಮ್ಮ ಆಹ್ವಾನವನ್ನು ನೀಡಿದ್ದಾರೆ.

ಶನಿವಾರ ದೆಹಲಿಗೆ ಆಗಮಿಸಿದ ಆದಿತ್ಯನಾಥ ಯೋಗಿ, ಮಾಜಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರರನ್ನು ಭೇಟಿ ಮಾಡಿದರು. ಪ್ರತಿಯೊಬ್ಬ ಗಣ್ಯರಿಗೆ ಆಹ್ವಾನದ ಭಾಗವಾಗಿ, 2025 ರ ಮಹಾಕುಂಭ ಮೇಳದ ಲೋಗೋ ಕಲಶ (ಪವಿತ್ರ ಕಲಶ), ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾಹಿತ್ಯ, ಹೊಸ ವರ್ಷದ ಟೇಬಲ್ ಕ್ಯಾಲೆಂಡರ್ ಮತ್ತು ಡೈರಿ ಸೇರಿದಂತೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ.

ಮಹಾಕುಂಭ ಮೇಳಕ್ಕೆ ಕೆಲ ವಾರಗಳು ಮಾತ್ರ ಬಾಕಿ ಇರುವಾಗ, ಉತ್ತರ ಪ್ರದೇಶ ಸರ್ಕಾರವು ದೇಶದಾದ್ಯಂತದ ಗಣ್ಯರು ಮತ್ತು ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸುತ್ತಿದೆ. ಮಹಾಕುಂಭ ಮೇಳ ಜನವರಿ 13ರಂದು ಆರಂಭವಾಗಿ, ಸತತ 45 ದಿನಗಳ ಕಾಲ ನಡೆಯಲಿದೆ. ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸುಮಾರು 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.  ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ, 2,500 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Maha Kumbh Mela: ಮಹಾಕುಂಭ ಮೇಳದಲ್ಲಿ ತಲೆ ಎತ್ತಲಿದೆ ತಿರುಪತಿ ವೆಂಕಟೇಶ್ವರ ದೇವಾಲಯ