Wednesday, 14th May 2025

K V Vasu Column: ಹೊಸವರ್ಷವು ನಿಮಗೆ ಚೇತೋಹಾರಿಯಾಗಲಿ

ಸದಾಶಯ

ಕೆ.ವಿ.ವಾಸು, ಮೈಸೂರು

2025ರ ಹೊಸವರ್ಷವನ್ನು ಸ್ವಾಗತಿಸಲು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಸಜ್ಜಾಗುತ್ತಿವೆ. ‘ಜನವರಿ 1 ನಮಗೆ ಹೊಸವರ್ಷವಲ್ಲ, ನಮಗೆ ಏನಿದ್ದರೂ ಯುಗಾದಿಯೇ ಹೊಸವರ್ಷ’ ಎಂಬುದಾಗಿ ಅನೇಕ ಹಿರಿಯರು ಮಾಹಿತಿ ನೀಡುತ್ತಾ ಬಂದಿದ್ದರೂ, ಜನವರಿ 1 ರಂದು ಹೊಸವರ್ಷದ ಆಚರಣೆ ನಡೆಯುತ್ತಲೇ ಬಂದಿದೆ. ಆಯಿತು, ಇದನ್ನೂ ಸ್ವೀಕರಿಸೋಣ. ಸಡಗರ-ಸಂಭ್ರಮ, ಉಲ್ಲಾಸ-ಉತ್ಸಾಹ ಮುಂತಾದವುಗಳಿಗೆ ಮತ್ತೊಂದು ಹೆಸರಾದ ಹೊಸವರ್ಷವು, ಹೊಸ ಹೊಸ ಕನಸುಗಳಿಗೆ ಸ್ಪೂರ್ತಿ ತುಂಬಬಲ್ಲ ಸಂಜೀವಿನಿ ಯಾಗಬೇಕಾದ್ದು ಅಪೇಕ್ಷಣೀಯ.

ಆದರೆ, ಕೆಲವರು ಹೊಸವರ್ಷವನ್ನು ನಾನಾ ರೀತಿಯಲ್ಲಿ ಅಥವಾ ತಮಗೆ ಇಷ್ಟ ಬಂದಂತೆ ಆಚರಿಸಿ ನಲಿಯುತ್ತಾರೆ. ಡಿಸೆಂಬರ್ ೩೧ರ ಸಂಜೆಯಿಂದಲೇ ಶುರುವಾಗುವ ಹೊಸವರ್ಷದ ಸಂಭ್ರಮಾಚರಣೆ, ಮಧ್ಯರಾತ್ರಿ 12 ಗಂಟೆಗೆ
ಕ್ಲೈಮ್ಯಾಕ್ಸ್ ತಲುಪುತ್ತದೆ. ಸಂಗೀತ, ನೃತ್ಯ, ಮೋಜು, ಮಸ್ತಿ ಮುಂತಾದವು ತಾರಕಕ್ಕೆ ಮುಟ್ಟುತ್ತವೆ. ಅಷ್ಟೊತ್ತಿಗೆ ಮದ್ಯಪಾನ ಪ್ರಿಯರೂ ಸಂಪೂರ್ಣ ‘ಚಿತ್’ ಆಗಿರುತ್ತಾರೆ. ಮಿಕ್ಕಂತೆ ಆಧುನಿಕ ಶೈಲಿಯ ಯುವಕ-ಯುವತಿಯರು ಅರೆಬಟ್ಟೆ ತೊಟ್ಟು ಪಾನಮತ್ತರಾಗಿ ತೂರಾಡುತ್ತಾ ಕುಣಿದಾಡುವುದೂ ಉಂಟು.

ಸಾಮಾನ್ಯವಾಗಿ ಪ್ರತಿಷ್ಠಿತ ಹೋಟೆಲ್ಲುಗಳಲ್ಲಿ ‘ಹೊಸ ವರ್ಷದ ಸಂತೋಷಕೂಟ’ ಜೋರಾಗಿಯೇ ನಡೆಯುತ್ತದೆ. ಇಂಥ ಹೋಟೆಲ್ಲುಗಳು ಬಣ್ಣಬಣ್ಣದ ದೀಪಗಳಿಂದ ರಂಗಾಗಿ, ಯುವಜನರಲ್ಲಿ ಉನ್ಮಾದದ ಜತೆಗೆ ಕಾಮನೆಗಳನ್ನೂ ಕೆರಳಿಸುತ್ತವೆ. ಇಂಥ ನೆಲೆಗಳಿಂದ ಪಾನಮತ್ತರಾಗಿ ಹೊರಡುವ ಯುವಕ-ಯುವತಿಯರು ತಂತಮ್ಮ ವಾಹನ ಗಳನ್ನೇರಿ ಕರ್ಕಶವಾಗಿ ಕೂಗುತ್ತಾ ಸಾಗುವುದುಂಟು. ಇಂಥವರ ಪೈಕಿ ಕೆಲವರು ಅಪಘಾತಕ್ಕೆ ಸಿಲುಕಿ/ಸತ್ತು, ಮಾರನೇ ದಿನದಂದು ಮಾಧ್ಯಮಗಳ ಸುದ್ದಿಗೆ ಗ್ರಾಸವಾಗುವುದೂ ಉಂಟು.

ನೂತನ ವರ್ಷವು ಕೇವಲ ಮೋಜು- ಮಜಾ-ಮಸ್ತಿಗಳಿಗೆ ಮಾತ್ರ ಸೀಮಿತವಾಗದೆ, ಒಂದು ದೃಢಸಂಕಲ್ಪಕ್ಕೆ ನಾಂದಿ
ಹಾಡಬೇಕು. ಕಳೆದುಹೋದ ವರ್ಷದ ನಮ್ಮ ಸಾಧನೆಗಳ ಪರಾಮರ್ಶೆ ಅಥವಾ ಆತ್ಮಾವಲೋಕನ ನಡೆಯಬೇಕು. ಮುಂಬರುವ ವರ್ಷದ ಯೋಜನಾಪಟ್ಟಿ ಸಿದ್ಧವಾಗಬೇಕು. ಸಾಧನೆಯ ಹಾದಿಗೆ ಕೊನೆ ಮೊದಲಿಲ್ಲ, ಮನುಷ್ಯರಾಗಿ ನಾವು ಸಾಽಸಬೇಕಾದ್ದು ಬಹಳಷ್ಟಿದೆ. ನಮ್ಮ ಬದುಕಿನ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ಕಳೆದುಹೋದ ಸಮಯ ಮತ್ತೆಂದೂ ಮರಳಿಬಾರದು. ಹೀಗಾಗಿ ನಾವು ಸಾಧ್ಯವಾದಷ್ಟು ಮಟ್ಟಿಗೆ ಜಾಗೃತರಾಗಿರಬೇಕು, ಯಾವು ದನ್ನೂ ಅಸಡ್ಡೆಯಿಂದ ಅಥವಾ ನಿಕೃಷ್ಟವಾಗಿ ಕಾಣಬಾರದು. ಹೀಗಾಗಿ ಹೊಸವರ್ಷವು ನಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು, ನಮ್ಮ ಸಾಮರ್ಥ್ಯಗಳನ್ನು ಒರೆಗೆ ಹಚ್ಚಬೇಕು.

ಮನುಷ್ಯ ಸಂಘಜೀವಿ. ಆತನ ಸಾಧನೆಗೆ ಅನೇಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುತ್ತಾರೆ. ಹೀಗಾಗಿ ತಾನೊಬ್ಬನೇ, ತನ್ನಿಂದಲೇ ಎಲ್ಲಾ ಎಂಬ ಅಹಂಭಾವವನ್ನು ಮೊದಲು ತ್ಯಜಿಸಬೇಕು. ಆಗ ಮಾತ್ರ ಏನನ್ನಾದರೂ ಸಾಽಸಲು ಸಾಧ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅಸಂಖ್ಯಾತ ದೇಶಪ್ರೇಮಿಗಳ ಅಥವಾ ಮಹಾಪುರುಷರ ಭವ್ಯ ಇತಿಹಾಸವೇ ನಮ್ಮ ಮುಂದಿದೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ದೇಶದ ಗಡಿಗಳನ್ನು ದಿನದ 24 ಗಂಟೆಯೂ ಕಾಯುವ ನಮ್ಮ ಧೀರಯೋಧರ ತ್ಯಾಗಕ್ಕೆ ಎಣೆಯುಂಟೇ? ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್,
ಸುಭಾಷ್‌ಚಂದ್ರ ಬೋಸ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಆದಿ ಶಂಕರಾಚಾರ್ಯ, ಡಾ. ಬಿ.ಆರ್.ಅಂಬೇಡ್ಕರ್, ಡಾ. ರಾಜ್‌ಕುಮಾರ್, ಎಂ.ಎಸ್.ಸುಬ್ಬುಲಕ್ಷ್ಮಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೀಗೆ ಹೇಳುತ್ತಾ ಹೋದರೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇಂಥವರು ಹಾಕಿಕೊಟ್ಟ ಮೇಲ್ಪಂಕ್ತಿಯು ನಮ್ಮ ಸಾಧನಾಪಥಕ್ಕೆ ಸ್ಪೂರ್ತಿಯಾಗಬೇಕು ಮತ್ತು ಅಂಥದೊಂದು
ಸಾಧನೆಯ ಸಂಕಲ್ಪವನ್ನು ತಳೆಯಲು ಹೊಸವ ರ್ಷದ ಘಟ್ಟವು ಪರ್ವಕಾಲವಾಗಬೇಕು. ಆಗ ಬದುಕು ನಿಂತ ನೀರಾಗದೆ ಸಾಧನೆಯ ಹಾದಿಯಲ್ಲೇ ಕ್ರಮಿಸತೊಡಗುತ್ತದೆ; ‘ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿಯಂತೆ ಬದುಕು ಯಾವಾಗಲೂ ಹೊಸ ದರ ಅನ್ವೇಷಣೆಗಾಗಿ, ಹೊಸತನಕ್ಕಾಗಿ ತುಡಿಯ ತೊಡಗುತ್ತದೆ. ಆಗ ಸುರಿಸುವ ದೃಢವಾದ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ದೂರದೃಷ್ಟಿ ಮುಂತಾದ ಸಕಾರಾತ್ಮಕ ಅಂಶಗಳು ಬದುಕನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಹಕಾರಿಯಾಗುತ್ತವೆ.

ಬದುಕಿನಲ್ಲಿ ಕಷ್ಟ-ನಷ್ಟ, ಸುಖ-ದುಃಖ, ಆಸೆ-ನಿರಾಸೆ, ಸೋಲು- ಗೆಲುವು ಇವೆಲ್ಲಾ ಸಹಜ ಮತ್ತು ಸಾಮಾನ್ಯ. ಸಾಧ್ಯವಾದಷ್ಟರ ಮಟ್ಟಿಗೆ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಿ ಸಾರ್ಥಕಪಡಿಸಿಕೊಳ್ಳೋಣ. ಇದು
ಹೊಸವರ್ಷದ ಈ ಘಟ್ಟದಲ್ಲಿ ಎಲ್ಲರ ಧ್ಯೇಯವಾಕ್ಯವಾಗಿರಲಿ ಎಂದು ಆಶಿಸುತ್ತೇನೆ.

(ಲೇಖಕರು ವಕೀಲರು ಮತ್ತು ನೋಟರಿ)

ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?