ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಕಡದನಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಕಾಲಮಡಗು ಗ್ರಾಮದಲ್ಲಿ ಹತ್ತಾರು ತಲೆಮಾರುಗಳಿಂದ ವಾಸಿಸುತ್ತಿರುವ ೩೦ ರಿಂದ ೪೦ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮನೆ ಕಟ್ಟಿಕೊಟ್ಟಿಕೊಳ್ಳಲು ನಿವೇಶನ ನೀಡಬೇಕೆಂದು ಆಗ್ರಹಿಸಿ ಪಿಡಿಒ ಪ್ರಭಾಕರ್ ಅವರಿಗೆ ದಲಿತರ ನಿಯೋಗ ಮನವಿ ಮಾಡಿದೆ.
ಕಡದನಮರಿ ಗ್ರಾಮ ಪಂಚಾಯತಿಗೆ ಗುರುವಾರ ತೆರಳಿದ ಅಂಕಾಲಮಡಗು ಗ್ರಾಮದ ಪಜಾತಿ/ವರ್ಗದ ನಿವಾಸಿಗಳು ನಾವು ಇಲ್ಲಿನ ಮೂಲ ನಿವಾಸಿಗಳಾದರೂ ಕೂಡ ನಮಗೆ ಮನೆ ಕಟ್ಟಿಕೊಳ್ಳಲು ಖಾಲಿ ನಿವೇಶನಗಳು ಇಲ್ಲದೆ ಪರದಾಡುತ್ತಿದ್ದೇವೆ.ದಯವಿಟ್ಟು ಇಲ್ಲಿರುವ ಸರ್ಕಾರಿ ಜಮೀನಿನಲ್ಲಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ೪೦ ಮನೆಗಳಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಭಾಕರ್ಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಯುವಕ ಚಲಪತಿ ಸದರಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದು ನಮಗೆ ನಿವೇಶನ ಖರೀದಿ ಮಾಡುವ ಶಕ್ತಿಯು ಸಹ ಇಲ್ಲ. ಬಿಸಿಲಿಗೆ ಬೆವರು ಹರಿಸಿ ಕೂಲಿ ನಾಲಿ ಮಾಡಿ ಬರುವ ಹಣದಲ್ಲಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಿ ಕುಟುಂಬದ ನಿರ್ವಹಣೆ ಮಾಡಲು ಮಾತ್ರ ಸಾಧ್ಯವಾಗುತ್ತಿದೆ.ಆ ಕಾರಣಕ್ಕೆ ಅಂಕಾಲಮಡಗು ಗ್ರಾಮದ ಸರ್ವೆ ನಂಬರ್ ೧೨೬ ರಲ್ಲಿ ೦-೨೪.೦೮ ಗುಂಟೆ ಸರ್ಕಾರಿ ಜಮೀನಿನಲ್ಲಿ ಖಾಲಿ ನಿವೇಶನಗಳು ಕೊಡಿಸಿ ಅದಕ್ಕೆ ಸಂಬಂಧ ಪಟ್ಟ ಕಚೇರಿಯಿಂದ ಪ್ರಮಾಣ ಪತ್ರಗಳನ್ನು,ಹಕ್ಕುಪತ್ರಗಳನ್ನು ಕೊಡಿಸಬೇಕೆಂದು ನೀಡಿರುವ ಮನವಿ ಪತ್ರದಲ್ಲಿ ಕೊರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ ಈಶ್ವರಮ್ಮ.ಡಿ ಎನ್ ರಾಧಾ, ಚಲಪತಿ.ಮಂಜುನಾಥ್.ಮಹೇಶ್,ನರೇಶ್ ಸೇರಿದಂತೆ ಮತ್ತಿತರರು ಇದ್ದರು.