Sunday, 11th May 2025

Vishwa Havyaka Sammelana; ಎಲ್ಲ ಸಮುದಾಯಗಳನ್ನು ಜೊತೆಗೆ ತಂದಿರುವ ಹವ್ಯಕರು: ಶೋಭಾ ಕರಂದ್ಲಾಜೆ

shobha karandlaje

ಬೆಂಗಳೂರು: ಎಲ್ಲಾ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಹವ್ಯಕ ಸಮುದಾಯ (Vishwa Havyaka Sammelana) ಮಾಡುತ್ತಿದೆ. ಚಿಕ್ಕ ಸಮಾಜ ಕೂಡ ದೊಡ್ಡದಾಗಿ ಯೋಚಿಸಬಹುದು ಹಾಗೂ ದೊಡ್ಡ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಹವ್ಯಕರು ಉದಾಹರಣೆ ಎಂದು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ನುಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವಾದ ಶನಿವಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನನ್ನ ಹುಟ್ಟೂರಾದ ಪುತ್ತೂರಿನಲ್ಲಿ ಹವ್ಯಕರು ಬಹು ಸಂಖ್ಯಾತರು. ನನ್ನ ಬೆಳವಣಿಗೆಯಲ್ಲಿ ಹವ್ಯಕ ಸಮುದಾಯದ ಪಾತ್ರ ಬಹುದೊಡ್ಡದಿದೆ. ಸಮುದಾಯಗಳ ಮಧ್ಯೆ ಭೇದಭಾವ ಮಾಡದೇ ನನಗೆ ಮಾರ್ಗದರ್ಶನ ಮಾಡಿದವರು ಹವ್ಯಕರು. ರಾಮಚಂದ್ರಪುರಮಠ, ಸ್ವರ್ಣವಲ್ಲೀ ಮಠ, ನೆಲಮಾವು ಮಠಗಳ ಮಾರ್ಗದರ್ಶನದಲ್ಲಿ ಹವ್ಯಕ ಸಮುದಾಯ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಅವರು ನೆನೆದರು.

ಅಡಿಕೆ ಬೆಳೆಗೆ ಬೆಲೆ ತಂದಿರುವವರು ಹವ್ಯಕ ಸಮಾಜ. ಅಡಕೆ ಕಲಬೆರಕೆಯಿಂದಾಗಿ ಅಡಕೆಗೆ ಕೆಟ್ಟಹೆಸರು ಅಂಟುಕೊಂಡಿದೆ. ಕೇಂದ್ರ ಸರ್ಕಾರ ಅಡಿಕೆ ಕೃಷಿಕರ ಪರವಾಗಿದ್ದು, ಅಡಿಕೆಯ ಹಿತಕಾಯಲು ಬದ್ಧವಾಗಿದೆ ಎಂದು ನುಡಿದರು.

ಹವ್ಯಕರನ್ನು ಯಾರೂ ಅಳಿಸಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

ಹವ್ಯಕ ಸಮುದಾಯದಲ್ಲಿ ಇರುವ ಜ್ಞಾನ ಹಾಗೂ ಜಾಗೃತಿಯ ಕಾರಣದಿಂದಾಗಿ ಈ ಸಮಾಜವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಜಾತಿ ಸಮ್ಮೇಳನಗಳಲ್ಲಿ ಆ ಜಾತಿಯವರು ಮಾತ್ರ ಸೇರುತ್ತಾರೆ. ಆದರೆ ಹವ್ಯಕ ಸಮ್ಮೇಳನದಲ್ಲಿ ಎಲ್ಲಾ ಜಾತಿಜನಾಂಗವನ್ನು ಸೇರಿಸಿಕೊಂಡು ಹೋಗುತ್ತಿರುವುದು ಸ್ವಾಗತಾರ್ಹವಾಗಿದೆ. ಇದು ನಿಜವಾಗಿ ವಿಚಾರಶೀಲ ಹಾಗೂ ದೂರದರ್ಶಿ ಕಾರ್ಯ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನುಡಿದರು.

ಹವ್ಯಕ ಸಮುದಾಯ ಸರ್ಕಾರದ ಮುಂದೆ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ಸರ್ಕಾರದ ಯೋಜನೆಗಳಿಗೆ ಅವರು ಕೈಜೋಡಿಸುವುದಿದ್ದರೆ ಅಥವಾ ಹವ್ಯಕ ಸಮಾಜಕ್ಕೆ ಸರ್ಕಾತದಿಂದ ಯಾವುದಾದರೂ ಕಾರ್ಯ ಆಗಬೇಕಿದ್ದರೆ ಅದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕರ್ನಾಟಕ ಸರ್ಕಾರದ ಪರವಾಗಿ ಹೇಳಿದರು.

ನಾನು ಹವ್ಯಕ ಸಮಾಜದ ಫಲಾನುಭವಿ: ಪಿ.ಜಿ.ಆರ್ ಸಿಂಧ್ಯಾ

ನಾನು ಹವ್ಯಕ ಸಮಾಜದ ಫಲಾನುಭವಿಯಾಗಿದ್ದು, ಹವ್ಯಕ ಸಮಾಜ ನನಗೆ ಶಕ್ತಿತುಂಬಿದೆ. ಹವ್ಯಕ ಸಮಾಜದವರಾಗಿದ್ದ ರಾಮಕೃಷ್ಣ ಹೆಗಡೆಯವರು ಮಾದರಿ ಆಡಳಿತ ನೀಡಿದ್ದು, ಕರ್ನಾಟಕದ ಪಾಲಿಗೆ ಅವರು ಶಾಶ್ವತ ಮುಖ್ಯಮಂತ್ರಿಯಾಗಿದ್ದಾರೆ. ನಾನು ಗೃಹಮಂತ್ರಿಯಾಗಿದ್ದಾಗ ಸಮರ್ಥ ಪೋಲಿಸ್ ಅಧಿಕಾರಿ ನನಗೆ ಸಿಕ್ಕಿದ್ದರು. ರಾಜ್ಯ ಪೋಲಿಸ್ ಮಹಾನಿರ್ದೇಶಕರಾಗಿದ್ದ ತಿಮ್ಮಪ್ಪಯ್ಯ ಮಡಿಯಾಲ್ ಅವರು ಈ ಸಮಾಜದವರು ಎಂಬುದು ಹೆಮ್ಮೆಪಡಬೇಕಾದ ಸಂಗತಿ ಎಂದು ಹಿರಿಯ ರಾಜಕಾರಣಿ, ಸ್ಕೌಟ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ನುಡಿದರು.

ಸಮ್ಮೇಳನಗಳು ಹೇಗೆ ಇರಬೇಕು ಎಂಬುದಕ್ಕೆ ವಿಶ್ವ ಹವ್ಯಕ ಸಮ್ಮೇಳನ ಮಾದರಿಯಾಗಿದೆ. ಹವ್ಯಕರ ಜನಸಂಖ್ಯೆ ಕ್ಷೀಣಿಸುತ್ತಿರುವುದು ಆಘಾತಕಾರಿ ವಿಚಾರ. ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಕರೆನೀಡಿರುವಂತೆ ಸಮಾಜ ಆಲೋಚಿಸಬೇಕಿದ್ದು, ಮಕ್ಕಳೆಂಬ ಸಂಪತ್ತನ್ನು ಪಡೆದು ಜನಸಂಖ್ಯೆಯನ್ನು ಉಳಿಸಬೇಕು ಹಾಗೂ ವಿಶಿಷ್ಟ ಸಂಸ್ಕ್ರತಿಯನ್ನು ಬೆಳೆಸಬೇಕು ಎಂದರು.

ಹವಿಗನ್ನಡಕ್ಕೂ ಅಕಾಡೆಮಿ ಬೇಕು: ರವಿಶಂಕರ್ ಕೆ. ಭಟ್

ರಾಜ್ಯದ ಹಲವಾರು ಅಲ್ಪಸಂಖ್ಯಾತ ಭಾಷೆಗಳಿಗೆ ಸರ್ಕಾರ ಅನುದಾನ ನೀಡುತ್ತಿದ್ದು ಅಕಾಡೆಮಿಗಳನ್ನು ಸ್ಥಾಪಿಸಿದೆ. ಇದೇರೀತಿ ಹವಿಗನ್ನಡಕ್ಕೂ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಸರ್ಕಾರ ಭಾಷಾ ಸಂರಕ್ಷಣೆಗೆ ಮುಂದಾಗಬೇಕು ಎಂದು ಉದಯವಾಣಿ ಸಂಪಾದಕ ರವಿಶಂಕರ್ ಕೆ. ಭಟ್ ಒತ್ತಾಯಿಸಿದರು.

ಹವ್ಯಕ ಸಮುದಾಯ ಹಲವಾರು ವೈಶಿಷ್ಟ್ಯವನ್ನು ಹೊಂದಿದ್ದರೂ, ಹವ್ಯಕರ ಭಾಷೆ ಹಾಗೂ ಆಹಾರ ವಿಶೇಷವಾಗಿದೆ. ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಶಿವಮೊಗ್ಗ ಭಾಗಗಳಲ್ಲಿ ಪ್ರಮುಖವಾಗಿ ನೆಲಸಿರುವ ಹವ್ಯಕರು ಪ್ರಾಂತ್ಯವಾರು ವೈವಿಧ್ಯಮಯ ಭಾಷಾ ಸೊಗಡನ್ನು ಹೊಂದಿದ್ದಾರೆ. ಹವ್ಯಕ ಭಾಷೆಯ ವೈವಿಧ್ಯಮಯ ಶಬ್ದಭಂಡಾರ ಕರಗುತ್ತಿದ್ದು, ಹವ್ಯಕ ಮಹಾಸಭೆಯು ಹವಿಗನ್ನಡ ನಿಘಂಟನ್ನು ಮಾಡುವ ಮೂಲಕ ಭಾಷಾ ಸೊಗಡನ್ನು ದಾಖಲಿಸಬೇಕು ಎಂದು ಸಲಹೆ ನೀಡಿದರು.

‘ಸಾಕ್ಷಾತ್ಕಾರ’ ಪುಸ್ತಕ ಬಿಡುಗಡೆ

ಹವ್ಯಕ ಮಹಾಸಭೆಯ 81 ವರ್ಷಗಳ ಇತಿಹಾಸವನ್ನು ದಾಖಲಿಸಿರುವ ‘ಸಾಕ್ಷಾತ್ಕಾರ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ನಾರಾಯಣ ಭಟ್ ಹುಳೇಗಾರು ಈ ಪುಸ್ತಕವನ್ನು ಬರೆದಿದ್ದು, ಮಹಾಸಭೆಯ ಇತಿಹಾಸದ ಹೆಜ್ಜೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: World Havyaka Sammelana: ಹವ್ಯಕ ಮಹಾಸಭಾ ದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ