Sunday, 11th May 2025

Pushpa 2 Collection: ರಿಲೀಸ್‌ ಆಗಿ 23 ದಿನ ಕಳೆದರೂ ತಗ್ಗುತ್ತಿಲ್ಲ’ಪುಷ್ಪ 2′ ಹವಾ; ಅಲ್ಲು ಅರ್ಜುನ್‌-ರಶ್ಮಿಕಾ ಚಿತ್ರದ ಗಳಿಕೆ 1,720 ಕೋಟಿ ರೂ.

Pushpa 2 Collection

ಹೈದರಾಬಾದ್‌: ಡಿ. 5ರಂದು ಅದ್ಧೂರಿಯಾಗಿ ತೆರೆಗೆ ಬಂದಿರುವ ಟಾಲಿವುಡ್‌ನ ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ದಾಖಲೆ ಮೇಲೆ ದಾಖಲೆ ಬರೆದು ಬಾಕ್ಸ್‌ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಟಾಲಿವುಡ್‌ ಮಾಸ್‌ ನಿರ್ದೇಶಕ ಸುಕುಮಾರ್‌-ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ 2ನೇ ಬಾರಿಗೆ ಒಂದಾದ ʼಪುಷ್ಪ 2ʼ ಸಿನಿಮಾ ತೆರೆಕಂಡು 23 ದಿನ ಕಳೆದಿದ್ದರೂ ಹವಾ ಕಡಿಮೆಯಾಗಿಲ್ಲ. ಈಗಲೂ ಕೋಟಿ ಕೋಟಿ ರೂ. ದೋಚುತ್ತಿದೆ. ಆ ಮೂಲಕ ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತದ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ಇದುವರೆಗಿನ ಅತೀ ಹೆಚ್ಚು ಗಳಿಸಿದ 3ನೇ ಭಾರತೀಯ ಸಿನಿಮಾ ಎನಿಸಿಕೊಂಡಿದೆ (Pushpa 2 Collection).

23 ದಿನಗಳಲ್ಲಿ ಗಳಿಸಿದ್ದೆಷ್ಟು?

ಚಿತ್ರ ರಿಲೀಸ್‌ ಆಗಿ 23 ದಿನ ಕಳೆದಿದ್ದು, ಇದುವರೆಗೆ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 1,719.5 ಕೋಟಿ ರೂ. ಬಾಚಿಕೊಂಡಿದೆ. 2021ರಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾದ ಸೀಕ್ವೆಲ್‌ ಆಗಿರುವ ಇದು ಭಾರತದಲ್ಲಿಯೇ 1,124.73 ಕೋಟಿ ರೂ. ಗಳಿಸಿದೆ. ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್‌ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ʼʼಪುಷ್ಪ 2ʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. 22 ದಿನಗಳಲ್ಲಿ ಜಾಗತಿಕವಾಗಿ 1719.5 ಕೋಟಿ ರೂ. ಸಂಗ್ರಹಿಸಿದೆ. ಆ ಮೂಲಕ ಈ ಮೈಲಿಗಲ್ಲನ್ನು ವೇಗವಾಗಿ ದಾಟಿದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆʼʼ ಎಂದು ತಿಳಿಸಿದೆ.

ʼಬಾಹುಬಲಿ 2ʼ ದಾಖಲೆಯನ್ನು ಬ್ರೇಕ್‌ ಮಾಡುತ್ತಾ?

ಸದ್ಯ ಇಂತಹದ್ದೊಂದು ಕುತೂಹಲ ಮನೆ ಮಾಡಿದೆ. ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಪೈಕಿ ಇದೀಗ ʼಪುಷ್ಪ 2ʼ ಮುಂದಿರುವುದು ಎರಡೇ ಸಿನಿಮಾಗಳು. ಟಾಲಿವುಡ್‌ನ ಮಾಸ್ಟರ್‌ ಪೀಸ್‌ ʼಬಾಹುಬಲಿ 2ʼ ಮತ್ತು ಹಿಂದಿಯ ʼದಂಗಲ್‌ʼ. ಇವು ಕ್ರಮವಾಗಿ 1,790 ಕೋಟಿ ರೂ. ಮತ್ತು 2,070 ಕೋಟಿ ರೂ.ಗಳಿಸಿವೆ. ಹೀಗಾಗಿ ʼಪುಷ್ಪ 2ʼ ಶೀಘ್ರದಲ್ಲೇ ʼಬಾಹುಬಲಿ 2ʼ ದಾಖಲೆಯನ್ನು ಮೀರಿಸಲಿದೆ ಎಂದು ಊಹಿಸಲಾಗಿದೆ.

ಹಿಂದಿಯಲ್ಲಿ ದಾಖಲೆಯ ಕಲೆಕ್ಷನ್‌

ತೆಲುಗಿನ ಜತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಳಿಯಲ್ಲಿಯೂ ʼಪುಷ್ಪ 2ʼ ತೆರೆಕಂಡಿದೆ. ಈ ಪೈಕಿ ಅತೀ ಹೆಚ್ಚಿನ ಕಲೆಕ್ಷನ್‌ ಹಿಂದಿಯಿಂದಲೇ ಹರಿದು ಬಂದಿದೆ. ವಿಶೇಷ ಎದರೆ ಒರಿಜಿನಲ್‌ ತೆಲುಗಿಗಿಂತ ಹಿಂದಿ ವರ್ಷನ್‌ ಅತೀ ಹೆಚ್ಚು ಕಲೆಕ್ಷನ್‌ ಮಾಡಿದೆ. ಹಿಂದಿಯಲ್ಲಿ ಪುಷ್ಪರಾಜ್‌ 723.9 ಕೋಟಿ ರೂ. ಬಾಚಿಕೊಂಡರೆ, ತೆಲುಗಿನಲ್ಲಿ 318.12 ಕೋಟಿ ರೂ. ಕೊಳ್ಳೆ ಹೊಡೆದಿದ್ದಾನೆ. ಇನ್ನು ತಮಿಳು ವರ್ಷನ್‌ನಿಂದ 55.6 ಕೋಟಿ ರೂ. ಸಂಗ್ರಹವಾಗಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್‌

ʼಪುಷ್ಪ 2ʼ ಸಿನಿಮಾದ ಪ್ರೀಮಿಯಂ ಶೋ ವೇಳೆ ಡಿ. 4ರಂದು ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಅವರ ಪುತ್ರ ಗಂಭೀರ ಗಾಯಗೊಂಡ ಪ್ರಕರಣ ಸದ್ಯ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಪ್ರಕರಣ ನಾಯಕ ಅಲ್ಲು ಅರ್ಜುನ್‌ ಕೊರಳಿಗೆ ಉರುಳಾಗಿ ಪರಿಣಮಿಸಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಡಿ. 27ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಸಾಮಾನ್ಯ ಜಾಮೀನಿಗಾಗಿ ಅಲ್ಲು ಅರ್ಜುನ್‌ ಅರ್ಜಿ ಸಲ್ಲಿಸಿದ್ದು, ಡಿ. 30ರಂದು ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗಲಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್‌; 2 ದಿನದ ಗಳಿಕೆ ಎಷ್ಟು?