ನವದೆಹಲಿ: 2025ಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವಾಗ ಭಾರತವು ಹೊಸ ವರ್ಷದಲ್ಲಿ ತನ್ನ ವಿದೇಶಾಂಗ ನೀತಿಯನ್ನು ರೂಪಿಸುವ ಕೆಲಸವನ್ನು ಈಗಾಗಲೇ ಪ್ರಾರಂಭ ಮಾಡಿದೆ (2025 Diplomatic Calendar). ಪ್ರಸ್ತುತ ವಿದೇಶಾಂಗ (External Affairs) ಸಚಿವ ಎಸ್. ಜೈಶಂಕರ್ (S Jaishankar) ಅವರು ಈ ವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದ್ದು, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಚರ್ಚೆ ನಡೆಸಲಿದ್ದಾರೆ. ಜತೆಗೆ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2025ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆ ನಡೆಯಲಿದ್ದು, ಟ್ರಂಪ್ ಭಾರತಕ್ಕಾಗಮಿಸುವ ಸಾಧ್ಯತೆ ಇದೆ ಹೇಳಲಾಗಿದೆ. ಕ್ವಾಡ್ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಒಂದು ಗುಂಪಾಗಿದ್ದು, ಇದನ್ನು ಸದಸ್ಯ ರಾಷ್ಟ್ರಗಳ ನಡುವಿನ ಮಾತುಕತೆಯಿಂದ ನಿರ್ವಹಿಸಲಾಗುತ್ತದೆ. ಶೃಂಗಸಭೆಯಲ್ಲಿ ಎಲ್ಲಾ ನಾಲ್ಕು ದೇಶಗಳ ನಾಯಕರು ಭೇಟಿಯಾಗುವ ನಿರೀಕ್ಷೆಯಿದೆ. ಈ ವರ್ಷದ ಸಭೆಯು ಗಮನಾರ್ಹವಾಗಿದ್ದು, ಟ್ರಂಪ್ ತಮ್ಮ ಹಿಂದಿನ ನೀತಿಗಳನ್ನು, ವಿಶೇಷವಾಗಿ ಆರೋಗ್ಯ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಮೋದಿ ಚೀನಾ ಭೇಟಿ
2020ರ ಗಲ್ವಾನ್ ಕಣಿವೆ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಅದ್ಯಾಗಿಯೂ ಭಾರತ – ಚೀನಾ ಗಡಿಯಲ್ಲಿ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಮೋದಿ (Narendra Modi) ಹಲವು ವರ್ಷಗಳ ನಂತರ ಭೇಟಿಯಾಗಿದ್ದರು. ಇದೀಗ 2025ರಲ್ಲಿ ಶಾಂಘೈ ಸಹಕಾರಿ ಸಂಸ್ಥೆ (ಎಸ್ಇಒ) ಶೃಂಗಸಭೆಗಾಗಿ ಪ್ರಧಾನಿ ಮೋದಿ ಚೀನಾಕ್ಕೆ ತೆರಳಬಹುದು ಎಂದು ಹೇಳಲಾಗಿದೆ. ಈ ಸಭೆಯು ಅಗಸ್ಟ್- ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಈತನ್ಮಧ್ಯೆ ಭಾರತದ ಬಹುಕಾಲದ ಮಿತ್ರ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಉಕ್ರೇನ್ – ರಷ್ಯಾದ ಯುದ್ಧದ ನಂತರ ಪುಟಿನ್ ಅವರ ಮೊದಲ ಭಾರತದ ಭೇಟಿ ಇದಾಗಿರಲಿದೆ. ಭಾರತವು ರಷ್ಯಾದೊಂದಿಗೆ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಲು ಸಿದ್ಧವಾಗಿದೆ. ಆದ್ದರಿಂದ ಅವರ ಆಗಮನ ಖಚಿತ ಎಂದು ಹೇಳಲಾಗಿದೆ.
ಸಿಂಗಾಪುರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರು ಜನವರಿ ಮಧ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. 2025ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿರುವ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಜೊಜೊಹಾಡಿಕುಸುಮೊ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಭಾರತಕ್ಕೆ ಭೇಟಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನು ಫೆಬ್ರವರಿಯ ನಂತರ ಪ್ರಧಾನಿ ಮೋದಿ ವಾರ್ಷಿಕ ಶೃಂಗಸಭೆಗಾಗಿ ಅವರು ಜಪಾನ್ಗೆ ಪ್ರಯಾಣಿಸುವ ಸಾಧ್ಯತೆ ಇದೆ. G20 ಶೃಂಗಸಭೆಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ನಿರ್ಧರಿಸಲಾಗಿದೆ ಮತ್ತು ASEAN ಶೃಂಗಸಭೆಯನ್ನು ಮಲೇಷ್ಯಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬಣ ಸಭೆಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಯಾ ದೇಶಗಳಿಗೆ ಹೋಗಬಹುದು.
ಈ ಸುದ್ದಿಯನ್ನೂ ಓದಿ : Narendra Modi: 101 ವರ್ಷದ ಮಾಜಿ ಐಎಫ್ಎಸ್ ಅಧಿಕಾರಿಯನ್ನು ಭೇಟಿಯಾಗುವಂತೆ ಕೇಳಿದ ಮೊಮ್ಮಗಳಿಗೆ ಮೋದಿ ಹೇಳಿದ್ದೇನು?