ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ (IND vs AUS) ಪಂದ್ಯ ಗುರುವಾರ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಈ ಪಂದ್ಯ ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಉಂಟಾಗಿದೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದ್ದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿತ್ತು. ನಂತರ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡಿತ್ತು. ಇದೀಗ ಉಭಯ ತಂಡಗಳು ನಾಲ್ಕನೇ ಟೆಸ್ಟ್ ಕಡೆಗೆ ಗಮನ ಹರಿಸುತ್ತಿವೆ. ಬಾಕ್ಸಿಂಗ್ ಡೇ ಟೆಸ್ಟ್ ಆಗಿರುವ ಕಾರಣ ಎಂಸಿಜೆ ಸ್ಟೇಡಿಯಂಗೆ ಬರೋಬ್ಬರಿ 90000 ಪ್ರೇಕಕರು ಆಗಮಿಸುವ ಸಾಧ್ಯತೆ ಇದೆ.
ಭಾರತದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯಾಗುವ ಸಾಧ್ಯತೆ ಇದೆ. ನೆಟ್ಸ್‌ನಲ್ಲಿ ಗಾಯಗೊಂಡಿದ್ದ ಶುಭಮನ್ ಗಿಲ್ ಅವರು ನಾಲ್ಕನೇ ಟೆಸ್ಟ್‌ಗೆ ಲಭ್ಯರಾಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಹೆಚ್ಚುವರಿ ಸ್ಪಿನ್ ಆಲ್‌ರೌಂಡರ್ ಆಗಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ಓಪನರ್
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ರೋಹಿತ್ ಶರ್ಮಾ ಅವರು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆ ಮೂಲಕ ಕಳೆದ ಮೂರು ಪಂದ್ಯಗಳ ಓಪನಿಂಗ್ ಸ್ಥಾನದಲ್ಲಿ ಆಡಿದ್ದ ಕೆಎಲ್ ರಾಹುಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಆ ಮೂಲಕ ಇನ್ನುಳಿದ ಸ್ಥಾನಗಳಲ್ಲಿ ಕಳೆದ ಪಂದ್ಯವಾಡಿದ್ದ ಆಟಗಾರರು ಮುಂದುವರಿಯಲಿದ್ದಾರೆ.
ಭಾರತ ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ
ಕಳೆದ ಮೂರು ಪಂದ್ಯಗಳನ್ನು ನಾವು ನೋಡಿದಾಗಿ ಭಾರತ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಪರ್ತ್‌ನಲ್ಲಿ ಶತಕ ಸಿಡಿಸಿದ ಬಳಿಕ ಸತತವಾಗಿ ವಿಫಲರಾಗುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಮೊದಲನೇ ಟೆಸ್ಟ್ ಬಳಿಕ ಕ್ರೀಸ್‌ನಲ್ಲಿ ದೀರ್ಘಾವಧಿ ನಿಲ್ಲುವಲ್ಲಿ ಎಡವುತ್ತಿದ್ದಾರೆ. ಇನ್ನು ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ನೆಲ ಕಚ್ಚಿದ್ದಾರೆ. ಕಳೆದ ಪ್ರವಾದ ಲಯವನ್ನು ಮರುಕಳಿಸುವಲ್ಲಿ ರಿಷಭ್ ಪಂತ್ ವಿಫಲರಾಗಿದ್ದಾರೆ. ಆದರೆ, ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಬೇಕೆಂದರೆ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ಕಲೆ ಹಾಕಬೇಕಾದ ಅಗತ್ಯವಿದೆ.
ಎಂಸಿಜಿ ಪಿಚ್ ರಿಪೋರ್ಟ್
ನಾಲ್ಕನೇ ಟೆಸ್ಟ್ ಪಂದ್ಯ ನಡೆಯುವ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನ ಪಿಚ್ ಫಾಸ್ಟ್ ಬೌಲರ್‌ಗಳ ಸ್ನೇಹಿಯಾಗಿದೆ. ಸೋಮವಾರ ಪಿಚ್ ಹಸಿರಿನಿಂದ ಕೂಡಿದ್ದು, ಫಾಸ್ಟ್ ಬೌಲರ್‌ಗಳು ಇದರ ಸಹಾಯವನ್ನು ಪಡೆಯಬಹುದಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಪ್ರಾಬಲ್ಯ ಮೆರೆದರೆ ಪಂದ್ಯ ಸಾಗುತ್ತಿದ್ದಂತೆ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಅಂದ ಹಾಗೆ ಎಂಸಿಜಿಯಲ್ಲಿ ಆಡಿದ 14 ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ ಪ್ಲೇಯಿಂಗ್ XI
ಉಸ್ಮಾನ್ ಖವಾಜ, ಸ್ಯಾಮ್ ಕೊಸ್ಟಾಸ್, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯಾನ್, ಸ್ಕಾಟ್ ಬೋಲೆಂಡ್
ಪಂದ್ಯದ ವಿವರ
ಭಾರತ vs ಆಸ್ಟ್ರೇಲಿಯಾ
ನಾಲ್ಕನೇ ಟೆಸ್ಟ್ ಪಂದ್ಯ
ದಿನಾಂಕ: ಡಿಸೆಂಬರ್ 26, 2025
ಸ್ಥಳ: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬರ್ನ್
ಸಮಯ: ಮುಂಜಾನೆ 05 ಗಂಟೆಗೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಈ ಸುದ್ದಿಯನ್ನು ಓದಿ: IND vs AUS: ʻರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡಬೇಕುʼ-ಆಕಾಶ್ ಚೋಪ್ರಾ ಸಲಹೆ!