ಗೌರಿಬಿದನೂರು : ಪಟ್ಟಣದ ಮುನೇಶ್ವರ ಶಾಲೆಯಲ್ಲಿ ತೀರ್ಥ ಶಾಲೆಯಲ್ಲಿ ಮಹಾಮೇಧಾವಿ ಶ್ರೀನಿವಾಸ ರಾಮಾನುಜನ್ ರವರ ಜನ್ಮದಿನದ ಸ್ಮರಣಾರ್ಥ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ.ಪ್ರಕಾಶ್ ರಾಮಾನುಜನ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿ, ಪ್ರತಿ ಧನ ಪೂರ್ಣಾಂಶವೂ ರಾಮಾನುಜನ್ ರವರ ವೈಯಕ್ತಿಕ ಮಿತ್ರರುಗಳ ಲ್ಲೊಂದು ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ ಸಂಖ್ಯೆಗಳು ವಿವಿಧ ಲಕ್ಷಣಗಳನ್ನು ನಂಬಲ ಸಾಧ್ಯವಾದಂತಹ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮರ್ಥ್ಯವಿತ್ತು. ಅವರಲ್ಲಿದ್ದ ಸ್ವಂತಿಕೆ, ಗಣತಿಯ ಸೌಂದರ್ಯ, ಸ್ಮರಣಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯ, ಸಂಖ್ಯಾ ಸಿದ್ಧಾಂತದ ಪಾಂಡಿತ್ಯ, ತಾರ್ಕಿಕ ಸಾಮರ್ಥ್ಯ, ಅಂತ ದೃಷ್ಟಿ ಹಾಗೂ ಗಣಿತೀಯ ವಿಶ್ಲೇಷಣೆಗಳನ್ನು ಮತ್ತು ಪ್ರತಿ ಪಾದನೆಗಳನ್ನು ಬ್ರಿಟಿಷ್ ಗಣಿತಜ್ಞ ಹಾರ್ಡಿ ಮನಸಾರೆ ಮೆಚ್ಚಿಕೊಂಡಿದ್ದಾರೆ.
ಗಣಿತ ಕ್ಷೇತ್ರದಲ್ಲಿ ಕಾಣ ಬರುವ ಅವಿಭಾಜ್ಯ ಸಂಖ್ಯೆಗಳು, ವಿಭಾಗಿಕರಣ ವಿಚಾರಗಳು, ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳು, ಪೈ ಪರಿವರ್ತನೆ ಮತ್ತು ರಾಮಾನುಜನ್ ಸಂಖ್ಯೆ ೧೭೨೯ ಇವು ಇವರು ಗಣಿತ ಪ್ರಪಂಚಕ್ಕೆ ನೀಡಿದ ಕೊಡುಗೆಗಳು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಂ.ಶೋಭಾ ಮಾತನಾಡಿ, ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯು ವಿವಿಧ ಕ್ಷೇತ್ರಗಳಲ್ಲಿ ಗಣಿತದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಗಣಿತ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಶ್ರೀನಿವಾಸ ರಾಮಾನುಜನ್ ಮತ್ತು ಭಾರತದ ಇತರ ಶ್ರೇಷ್ಠ ಗಣಿತಜ್ಞರ ಕೊಡುಗೆಗಳಿಗೆ ಗೌರವ ಸಲ್ಲಿಸಲು ಮತ್ತು ಗಣಿತದ ಬೆಳವಣಿಗೆಗೆ ಅವರ ಕೊಡುಗೆಯನ್ನು ಗುರುತಿಸಲು ಇದೊಂದು ಶ್ರೇಷ್ಠ ದಿನವಾಗಿದೆ. ಚಿಕ್ಕ ವಯಸ್ಸಿನಲ್ಲೇ ನಾವುಗಳು ಕಳೆದುಕೊಂಡಿರುವ ದೈತ್ಯ ಪ್ರತಿಭೆ. ಇವರ ಮರಣ ಗಣಿತ ಪ್ರಪಂಚಕ್ಕೆ ತುಂಬಲಾರದ ನಷ್ಟ. ಅವರು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಕಾಗದ ಹಾಳೆಗಳೇ ಇಂದು ಗಣಿತ ಪ್ರಪಂಚಕ್ಕೆ ಅಮೂಲ್ಯ ಆಸ್ತಿಗಳಾಗಿವೆ. ಇವರ ಗಣಿತದ ಆವಿಷ್ಕಾರಗಳು ಇನ್ನೂ ಜೀವಂತ ವಾಗಿದ್ದು, ಪ್ರಸ್ತುತ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ತಿಳಿಸಿದರು.

ದಿನಾಚರಣೆಯಲ್ಲಿ ಶಾಲಾ ಶಿಕ್ಷಕಿಯರಾದ ಭಾರ್ಗವಿ, ಸಾಯಿ ಪ್ರಿಯ, ಸಂಧ್ಯಾ, ಚಂದ್ರಮ್ಮ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.