ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹದಿಮೂರನೇ ವಾರ ಸಾಗುತ್ತಿದೆ. ಫಿನಾಲೇ ವೀಕ್ ಹತ್ತಿರವಾಗುತ್ತಿದೆ. ಸ್ಪರ್ಧಿಗಳು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭ ಬಂದಿದೆ. ಕಿಚ್ಚ ಸುದೀಪ್ ಪ್ರತೀ ವೀಕೆಂಡ್ ಬಂದು ಎಲ್ಲ ಸ್ಪರ್ಧಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು. ಅದರಲ್ಲೂ ಉಗ್ರಂ ಮಂಜುಗೆ ಬಿಸಿ ಮುಟ್ಟಿಸಿ ಅನೇಕ ಬಾರಿ ಉದಾಹರಣೆ ಸಮೇತ ಎಚ್ಚರಿಸಿದ್ದರು. ಆದರೂ ಮಂಜು ಕಳೆದ ಮೂರು ವಾರಗಳಿಂದ ಡಲ್ ಇದ್ದರು. ಆದರೀಗ ಇವರು ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ಮಂಜು ಕಮ್ಬ್ಯಾಕ್ ಮಾಡಲು ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ರೆಸಾರ್ಟ್ ಟಾಸ್ಕ್. ಹೌದು, ಇದೀಗ ದೊಡ್ಮನೆ ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ. ಇದಕ್ಕಾಗಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಮಂಜು, ಗೌತಮಿ ಹಾಗೂ ಹನುಮಂತ ಇದ್ದರೆ ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ.
ಇದರಲ್ಲಿ ತ್ರಿವಿಕ್ರಮ್ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಅಂದರೆ ಮಂಜು ಟೀಮ್ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು. ಪ್ರತಿಬಾರಿಯಂತೆ ಈ ಬಾರಿ ಕೂಡ ಎರಡು ಗುಂಪುಗಳ ನಡುವೆ ಸಾಕಷ್ಟು ಜಗಳ ನಡೆದಿದೆ. ಅದರಲ್ಲೂ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವಣ ಜಗಳ ತಾರಕಕ್ಕೇರಿದೆ. ಮೂರು ವಾರಗಳಿಂದ ಸೈಲೆಂಟ್ ಆಗಿದ್ದ ಮಂಜಣ್ಣ ಈಗ ಎದ್ದು ನಿಂತಿದ್ದಾರೆ.
ಏರು ಧ್ವನಿಯಲ್ಲಿ ಮಾತನಾಡಿದ ಮಂಜು ಮ್ಯಾನೇಜರ್ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಬಳಿಕ ಮಂಜು ಅವರು ಮೋಕ್ಷಿತಾ ಬಳಿ ಬಟ್ಟೆ ವಾಶ್ ಮಾಡಲು ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ಅವರು ಆಗಲ್ಲ ಎಂದು ನಿರಾಕರಿಸಿದ್ದಾರೆ. ಕತ್ತೆ ಕಾಯೋಕಾ ಬಂದಿರೋದು? ತಲೆ ತುಂಬ ಮಣ್ಣು ತುಂಬಿಕೊಂಡರೆ ಹೀಗೆ ಆಗೋದು ಎಂದು ಮೋಕ್ಷಿತಾ ಮೇಲೆ ಅಬ್ಬರಿಸಿದ್ದಾರೆ ಮಂಜು. ಮಾಡೋಕೆ ಕೆಲ್ಸ ಇಲ್ದೆ ಬಂದಿದ್ದೀವಾ ರೆಸಾರ್ಟ್ಗೆ ಎಂದಿದ್ದಾರೆ.
ಈ ಸಂದರ್ಭ ಧನರಾಜ್ ಆಚಾರ್ ಮಂಜುಗೆ ಕಾಫಿ ಕೊಡಲು ಬಂದಿದ್ದಾರೆ. ಮೊದಲೇ ಕೋಪದಲ್ಲಿದ್ದ ಮಂಜು ಎತ್ತಲ್ಲೇ, ಹೋಗ್ರೋ ಆಚೆ ಎಂದು ಕಾಫಿ ಗ್ಲಾಸ್ ಅನ್ನು ತಳ್ಳಿ ಒಡೆದು ಹಾಕಿ ಆರ್ಭಟಿಸಿದ್ದಾರೆ. ಈ ಮೂಲಕ ಗೌತಮಿ ಹಿಂದೆಯೇ ಇರುತ್ತಿದ್ದ, ಗೌತಮಿ ಆಡಿದ ಮಾತುಗಳನ್ನೇ ಕೇಳುತ್ತಿದ್ದ ಎಂಬ ಆಪಾಧನೆಯಿಂದ ಮಂಜು ಹೊರಬಂದು ಈ ವಾರ ಕಮ್ಬ್ಯಾಕ್ ಮಾಡಿದಂತಿದೆ.