ರೋಹ್ಟಕ್: ಟ್ರಾಫಿಕ್ ರೂಲ್ ಬ್ರೇಕ್ ಮಾಡಿ ಪ್ರಶ್ನಿಸಿದ ಪೊಲೀಸ್ ಜತೆ ಯುವತಿಯೊಬ್ಬಳು ತಮಾಷೆಯಾಗಿ ಮಾತನಾಡಿ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ. ಇದಕ್ಕೆ ಸಂಬಂಧಪಟ್ಟಂತೆ ತಮಾಷೆಯ ವಿಡಿಯೊವೊಂದು ವೈರಲ್(Viral Video) ಆಗಿದೆ. ವಿಡಿಯೋದಲ್ಲಿ ಯುವತಿ ಫನ್ನಿಯಾಗಿ ಮತನಾಡುತ್ತಾ ಇದ್ದು, ಅದನ್ನು ಕೇಳಿ ಟ್ರಾಫಿಕ್ ಪೊಲೀಸ್ ಬಿದ್ದು ಬಿದ್ದು ನಗುತ್ತಿರುವುದನ್ನು ಕಾಣಬಹುದಾಗಿದೆ.
ಈ ವೈರಲ್ ವೀಡಿಯೊದಲ್ಲಿ ಯುವತಿಯೊಬ್ಬಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ಅಲ್ಲದೇ, ನಂತರ ಆಕೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ತಮಾಷೆಯಾಗಿ ವರ್ತಿಸಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು ತಾನು ಕಂಟೆಂಟ್ ಕ್ರಿಯೇಟರ್ ಎಂದು ಹೇಳಿಕೊಳ್ಳುವ ಪೊಲೀಸ್ ಅಧಿಕಾರಿ ಅಮರ್ ಕಟಾರಿಯಾ ಈ ವಿಡಿಯೊ ಹಂಚಿಕೊಂಡಿಕೊಂಡಿದ್ದಾರೆ. ಈ ವೀಡಿಯೊ ಹರಿಯಾಣದ ರೋಹ್ಟಕ್‌ನಲ್ಲೊ ಹುಡುಗಿ ಮತ್ತು ಸಂಚಾರಿ ಪೊಲೀಸರ ನಡುವಿನ ತಮಾಷೆಯ ಪ್ರಸಂಗ ವಿಡಿಯೊದಲ್ಲಿದೆ.
ನಂಬರ್ ಪ್ಲೇಟ್, ಹೆಲ್ಮೆಟ್ ಧರಿಸದೇ ಸ್ಕೂಟಿಯಲ್ಲಿ ಬಂದ ಹುಡುಗಿಯೊಬ್ಬಳು ರಾಂಗ್ ಸೈಡ್‌ನಲ್ಲಿ ಗಾಡಿ ಚಲಾಯಿಸಿಕೊಂಡು ಬಂದು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಟ್ರಾಫಿಕ್ ಪೊಲೀಸ್ ಗಮನಿಸಿದ್ದಾರೆ. ಇಷ್ಟೆಲ್ಲಾ ತಪ್ಪು ಮಾಡಿದರೂ ಆಕೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದರ ಬಗ್ಗೆ ವಿಚಾರಿಸಿದಾಗ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾಳೆ.
ಟ್ರಾಫಿಕ್ ಪೊಲೀಸ್ ಅಧಿಕಾರಿ ಅವಳನ್ನು ವಿಚಾರಣೆಗೆ ಒಳಪಡಿಸಿದಾಗ, ಅವಳು ತನ್ನ ಹೆಸರಿನ ಬಗ್ಗೆ ಅವರ ಪ್ರಶ್ನೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾಳೆ. ಜನಪ್ರಿಯ ಕಾರ್ಟೂನ್ ಪಾತ್ರವಾದ “ಶಿಂಚನ್ ನೊಹರಾ” ನನ್ನ ಹೆಸರು ಎಂದು ಹೇಳಿದ್ದು ಅಲ್ಲದೇ, ಅಧಿಕಾರಿ ಚಲನ್ ನೀಡುವುದಾಗಿ ಹೇಳಿದಾಗಲೂ ಸ್ವಲ್ಪ ಕೂಡ ಹೆದರದೇ ಕಾರ್ಟೂನ್ ಪಾತ್ರಧಾರಿಯಂತೆ ತಮಾಷೆಯಾಗಿ ಮಾತನಾಡಿದ್ದಾಳೆ.
ಅಧಿಕಾರಿಯು ಹುಡುಗಿಗೆ ಹೆಚ್ಚು ಜವಾಬ್ದಾರಿಯುತವಾಗಿರಲು ಸಲಹೆ ನೀಡಿದ್ದು ಅಲ್ಲದೇ, ಚಾಲನೆ ಮಾಡುವಾಗ ಯಾವಾಗಲೂ ಹೆಲ್ಮೆಟ್ ಧರಿಸಲು ಹೇಳಿದ್ದಾರೆ. ಅವಳು ಹಾಗೆ ಮಾಡದಿದ್ದರೆ, “ಯಮರಾಜ” ಅವಳನ್ನು ಹುಡುಕಿಕೊಂಡು ಬರಬಹುದು ಎಂದು ತಮಾಷೆಯಾಗಿ ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹುಡುಗಿ, ‘ಯಮರಾಜ್’ ಯಾರು ಎಂದು ಕೇಳಿದ್ದು ಅಲ್ಲದೇ ಅವನು ಪೋಲೀಸರ ತಂದೆಯಾಗಿರಬಹುದು ಎಂದು ತಮಾಷೆ ಮಾಡಿದ್ದಾಳೆ. ನಿಯಮಗಳನ್ನು ಪಾಲಿಸದ ಮಕ್ಕಳನ್ನು ‘ಯಮರಾಜ್’ ಕರೆದೊಯ್ಯುತ್ತಾನೆ ಎಂದು ಅಧಿಕಾರಿ ಹೇಳಿದಾಗ, ಇದಕ್ಕೆ ಹುಡುಗಿ ನಾನು “ಶಿಂಚನ್ ನೊಹರಾ” ಆಗಿರುವುದರಿಂದ ಯಾರೂ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತುಈ ವಿಡಿಯೊ
ಹುಡುಗಿ ಮತ್ತು ಅಧಿಕಾರಿಯ ನಡುವಿನ ಈ ತಮಾಷೆಯ ಮಾತುಕತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹುಡುಗಿಯ ತುಂಟತನದ ವರ್ತನೆ ಮತ್ತು ಅಧಿಕಾರಿಯ ಪ್ರತಿಕ್ರಿಯೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಘಟನೆಯು ಸಂಚಾರ ಉಲ್ಲಂಘನೆಯ ಸಮಯದಲ್ಲಿ ಯುವಕರನ್ನು ನಡೆಸಿಕೊಳ್ಳುವ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಸನ್ನಿವೇಶದಲ್ಲಿ ಹುಡುಗಿಯ ಜಾಗದಲ್ಲಿ ಹುಡುಗನಿದ್ದರೆ ಅಧಿಕಾರಿ ಇದೇ ರೀತಿ ವರ್ತಿಸುತ್ತಿದ್ದರೇ ಎಂದು ಹಲವರು ಪ್ರಶ್ನಿಸಿದ್ದಾರೆ.