Saturday, 10th May 2025

‌Robber Arrested: ದರೋಡೆ, ಕೊಲೆ ಪ್ರಕರಣ; ಬರೋಬ್ಬರಿ 21 ವರ್ಷಗಳ ನಂತರ ಆರೋಪಿ ಅರೆಸ್ಟ್!

ಮುಂಬೈ: ದರೋಡೆ(Robbery) ಮತ್ತು ಕೊಲೆ ಯತ್ನ(Attempt to Murder) ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ(Maharashtra) ಪೊಲೀಸರು ಜಲ್ನಾದಲ್ಲಿ(Jalna) ಬಂಧಿಸಿದ್ದಾರೆ. ಆರೋಪಿ 2003ರಿಂದ ಅಂದರೆ ಬರೋಬ್ಬರಿ 21 ವರ್ಷಗಳ ಕಾಲ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಎಂದು ತಿಳಿದು ಬಂದಿದೆ(Robber Arrested).

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ( Palghar) ದರೋಡೆ ಮತ್ತು ಕೊಲೆ ಯತ್ನದ ಆರೋಪಿ ಕ್ರಿಮಿನಲ್ ಗ್ಯಾಂಗ್‌ನ 55 ವರ್ಷದ ವ್ಯಕ್ತಿಯನ್ನು 21 ವರ್ಷಗಳ ನಂತರ ಜಲ್ನಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ(ಡಿ.24) ತಿಳಿಸಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿದೆ. ಪಾರ್ಧಿ ಗ್ಯಾಂಗ್ ಮೆಂಬರ್ ಬಾಬುರಾವ್ ಅಣ್ಣಾ ಕಾಳೆ( Baburao Anna Kale) ಎಂಬ ಆರೋಪಿಯನ್ನು ಡಿಸೆಂಬರ್ 20 ರಂದು ಬಂಧಿಸಲಾಗಿದೆ ಎಂಬ ಮಾಹಿತಿಯಿದೆ. ಜಾಲ್ನಾದ ಪರ್ತೂರ್ ತಾಲೂಕಿನ ವಲ್ಖೇಡ್ ಎಂಬ ತನ್ನ ಸ್ವಂತ ಗ್ರಾಮದಲ್ಲಿರುವ ಜಮೀನಿನಲ್ಲಿ ಆತನನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಜನವರಿ 9, 2003 ರಂದು, ಪಾಲ್ಘರ್‌ನ ವಿರಾರ್ ಪ್ರದೇಶದ ಬೊಲಿಂಜ್-ಅಗಾಶಿಯಲ್ಲಿ ನಾಲ್ಕು ವ್ಯಕ್ತಿಗಳು ಬಂಗಲೆಗೆ ನುಗ್ಗಿದ್ದರು. ಮನೆಯಲ್ಲಿದ್ದವರನ್ನು ಕಟ್ಟಿಹಾಕಿ, ಮುಖಕ್ಕೆ ಹೊದಿಕೆ ಹಾಕಿ ಅವರನ್ನು ಚಾಕುವಿನಿಂದ ಇರಿದು 1.33 ಲಕ್ಷ ರೂಪಾಯಿ ಚಿನ್ನಾಭರಣ ಹಾಗೂ 25 ಸಾವಿರ ನಗದು ದೋಚಿದ್ದರು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಹುಲ್ ರಖಾ ತಿಳಿಸಿದ್ದಾರೆ.

ದರೋಡೆಕೋರರು ಅದೇ ವಿಧಾನವನ್ನು ಬಳಸಿಕೊಂಡು ಮತ್ತೊಂದು ಬಂಗಲೆಯಲ್ಲೂ ದರೋಡೆ ನಡೆಸಿದ್ದರು. ಆದರೆ ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಅವರಿಗೆ ಸಿಕ್ಕಿರಲಿಲ್ಲ. ವಿರಾರ್ ಪೊಲೀಸರು ಘಟನೆ ನಡೆದ ದಿನವೇ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 394 (ದರೋಡೆ ಮಾಡುವಲ್ಲಿ ಉದ್ದೇಶಪೂರ್ವಕವಾಗಿ ಗಾಯವನ್ನುಂಟುಮಾಡುವುದು), 342 (Wrongful Confinement), 457 (Lurking house-Trespass), 511 (ಅಪರಾಧ ಎಸಗಲು ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2005 ರಲ್ಲಿ, ಆರೋಪಿಗಳಲ್ಲಿ ಒಬ್ಬನಾದ ಸುಚಿನಾಥ್ ಅಲಿಯಾಸ್ ರಾಜೇಶ್ ಸತ್ಯವಾನ್ ಪವಾರ್ ನನ್ನು ಬಂಧಿಸಿ ಅವನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆದರೆ ಕಾಳೆ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದರು. ಇತ್ತೀಚೆಗಿನ ತಿಂಗಳುಗಳಲ್ಲಿ, ಮೀರಾ ಭಾಯಂದರ್-ವಸಾಯಿ ವಿರಾರ್ (MBVV) ಅಪರಾಧ ವಿಭಾಗವು ತನಿಖೆಯನ್ನು ಹೊಸ ಪ್ರಯತ್ನದೊಂದಿಗೆ ಶುರು ಮಾಡಿತ್ತು. ಈ ಸಮಯದಲ್ಲಿ ಆರೋಪಿ ಕಾಳೆ ಜಲ್ನಾದ ಅವನ ಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ ಎಂಬ ಸುಳಿವು ಸಿಕ್ಕಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಕ್ರೈಂ ಬ್ರಾಂಚ್‌(Crime Branch) ತಂಡವು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾಳೆಯನ್ನು ಜಲ್ನಾದ ಗ್ರಾಮದಲ್ಲಿ ಪತ್ತೆಹಚ್ಚಿ ಕಳೆದ ವಾರ ಅವನನ್ನು ಅರೆಸ್ಟ್ ಮಾಡಿದೆ. ವಿಚಾರಣೆ ವೇಳೆ ಕಾಳೆ ಜಲ್ನಾ ಮತ್ತು ಛತ್ರಪತಿ ಸಂಭಾಜಿನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಆಸ್ತಿ ಕಳ್ಳತನ, ಕೊಲೆ ಯತ್ನ ಸೇರಿದಂತೆ ಕನಿಷ್ಠ 10 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 2003ರ ದರೋಡೆ ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Smuggler Sunil Yadav:‌ ಶೂಟೌಟ್‌ನಲ್ಲಿ ಸ್ಮಗ್ಲರ್ ಸುನಿಲ್ ಯಾದವ್ ಬಲಿ; ಲಾರೆನ್ಸ್‌ ಬಿಷ್ಣೋಯ್‌ ಆಪ್ತನಿಂದ ಕೃತ್ಯ?