ಲಖನೌ: ಚಲಿಸುತ್ತಿರುವ ಟ್ರಕ್ ಒಂದರ ಮುಂಭಾಗ ತನ್ನ ಬೈಕ್ ಸಹಿತ ಸಿಲುಕಿಕೊಂಡು ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ ಟ್ರಕ್ ಚಾಲಕ ಟ್ರಕ್ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋದ ಭೀಕರ ಘಟನೆಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣವನ್ನು (Social Media) ಬೆಚ್ಚಿ ಬೀಳಿಸಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಉತ್ತರ ಪ್ರದೇಶದ (Uttar Pradesh) ಆಗ್ರಾ (Agra) ಹೆದ್ದಾರಿಯಲ್ಲಿ ಡಿ.22ರ ಆದಿತ್ಯವಾರದಂದು ಈ ದುರ್ಘಟನೆ ನಡೆದಿದೆ. ಝಾಕಿರ್ ಎಂದು ಗುರುತಿಸಲಾದ ಯುವಕ ತನ್ನ ಬೈಕ್ ಸಹಿತ ಚಲಿಸುತ್ತಿರುವ ಟ್ರಕ್ ಒಂದರ ಮುಂಭಾಗಕ್ಕೆ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್ ಆತನ ತಲೆ ಮೇಲ್ಭಾಗದಲ್ಲಿ ಇದ್ದ ಕಾರಣ ಆತ ಸಹಾಯಕ್ಕಾಗಿ ಕಿರುಚಾಡಲು ಸಾಧ್ಯವಾಗಿದೆ.
ಹೀಗೆ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡ ಝಾಕಿರ್ ತನ್ನ ರಕ್ಷಣೆಗಾಗಿ ಕಿರುಚಾಡುತ್ತಾ, ರಸ್ತೆಯಲ್ಲಿ ಸಾಗುತ್ತಿದ್ದ ಇತರೇ ವಾಹನ ಸವಾರರಿಗೆ ಸನ್ನೆಯ ಮೂಲಕವೇ ಟ್ರಕ್ ನಿಲ್ಲಿಸಲು ಚಾಲಕನಿಗೆ ಸೂಚಿಸುವಂತೆ ಹೇಳಿದ್ದಾನೆ. ಆದರೆ ಆ ಟ್ರಕ್ ಚಾಲಕ ಮಾತ್ರ ತನ್ನ ವಾಹನವನ್ನು ವೇಗವಾಗಿ ಹೆದ್ದಾರಿ ರಸ್ತೆಯಲ್ಲಿ ಕೊಂಡೊಯ್ದಿದ್ದಾನೆ. ಸುಮಾರು 36 ಸೆಕೆಂಡ್ ಗಳ ಈ ವಿಡಿಯೋ ಕ್ಲಿಪ್ ನಲ್ಲಿ ಯುವಕ ಲಾರಿಯಡಿಯಲ್ಲಿ ಸಿಲುಕಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ.
ಈ ಬೈಕಿನಲ್ಲಿ ಇಬ್ಬರು ಸಿಲುಕಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದ್ದು, ‘ನಾವಿಬ್ಬರೂ ಬಹಳ ಬೊಬ್ಬೆ ಹಾಕಿದೆವು, ಆದರೆ ಆತ ಟ್ರಕ್ ನಿಲ್ಲಿಸದೇ ನಮ್ಮನ್ನು ಎಳೆದುಕೊಂಡೇ ಸಾಗಿದ’ ಎಂದು ಇದೀಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಝಾಕಿರ್ ನಡೆದಿರುವ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.
‘ನಾವು ಊಟ ಮುಗಿಸಿ ಮನೆಯತ್ತ ಹೊರಟಿದ್ದೆವು. ನಾವು ಟ್ರಕ್ ಒಂದು ಹಾದು ಹೋದ ಸಂದರ್ಭದಲ್ಲಿ ಅದು ನಮಗೆ ಹೊಡೆಯಿತು. ಆ ಸಂದರ್ಭದಲ್ಲಿ ನಮ್ಮ ಬೈಕ್ ಟ್ರಕ್ ನ ಮುಂಭಾಗಕ್ಕೆ ಸಿಲುಕಿಕೊಂಡಿತು ಮತ್ತು ನಮ್ಮ ಕಾಲುಗಳೂ ಸಹ ಅದರಡಿಗೆ ಸಿಲುಕಿಕೊಂಡವು’ ಎಂದು ಆಗ್ರಾದ ನುನ್ ಹೈ ನಿವಾಸಿಯಾಗಿರುವ ಝಾಕಿರ್ ನಡೆದ ಘಟನೆಯ ಭೀಕರತೆಯನ್ನು ವಿವರಿಸಿದ್ದಾನೆ.
ಇದನ್ನು ಕಂಡ ಕೆಲವರು ಆ ಟ್ರಕ್ ಅನ್ನು ಓವರ್ ಟೇಕ್ ಮಾಡಿ ಅದನ್ನು ನಿಲ್ಲಿಸುವ ಮೂಲಕ ಬೈಕ್ ಸವಾರರ ಪ್ರಾಣ ಕಾಪಾಡಿದ್ದಾರೆ. ಬಳಿಕ ಅಲ್ಲಿ ಸೇರಿದ ಜನರ ಗುಂಪು ಚಾಲಕನಿಗೆ ಚೆನ್ನಾಗಿ ಥಳಿಸಿ, ಕೆಲವರು ಆತನಿಗೆ ಚಪ್ಪಲಿ ಏಟೂ ನೀಡಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ತನ್ನನ್ನು ‘ಮೋಟಿ’ ಎಂದವರಿಗೆ ಕ್ರಿಯೇಟಿವ್ ಹಾಡಿನ ಮೂಲಕ ಟಾಂಗ್ ಕೊಟ್ಟ ಮಹಿಳೆ – ಇಲ್ಲಿದೆ ವಿಡಿಯೋ
ಇನ್ನು, ಈ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಹೊರಗೆಳೆಯಲು ಜನರ ಗುಂಪು ಟ್ರಕ್ ಅನ್ನು ಸ್ವಲ್ಪ ಮೇಲಕ್ಕೆ ತಳ್ಳಿದ್ದಾರೆ. ಈ ಬೈಕನ್ನು ಎಳೆದುಕೊಂಡ ಬಂದ ದಾರಿಯುದ್ದಕ್ಕೂ ರಕ್ತಸಿಕ್ತ ಗೀಚು ಕಲೆಗಳು ಮೂಡಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.
‘ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದಾಖಲಾಗಿರುವಂತೆ ಟ್ರಕ್ ಅಡಿಯಲ್ಲಿ ಸಿಲುಕಿರುವ ಯುವಕನನ್ನು ಎಳೆದುಕೊಂಡು ಆ ಟ್ರಕ್ ಬಹಳ ದೂರ ಸಾಗಿ ಬಂದಿದೆ. ಇದೀಗ ಆರೊಪಿ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಆತನನ್ನು ಬಂಧಿಸಲಾಗಿದೆ. ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.