2019ರ ಶಿಕ್ಷಣ ಹಕ್ಕು ಕಾಯಿದೆ(ಆರ್ಟಿಇ) ಪ್ರಕಾರ ಆರು ವರ್ಷಗಳಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ
ಮೂಲಭೂತ ಹಕ್ಕು.
ಈ ಕಾಯಿದೆ ಬಂದ ಬಳಿಕ ಬಹುತೇಕ ರಾಜ್ಯಗಳು 9ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದೆ ಎಲ್ಲರನ್ನೂ ಪಾಸ್ ಮಾಡುವ ನೀತಿಯನ್ನು ಅನುಸರಿಸಿಕೊಂಡು ಬಂದಿವೆ. ಆದರೆ ಇದರಿಂದ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದೀಗ ವರ್ಷಾಂತ್ಯದ ಪರೀಕ್ಷೆಯಲ್ಲಿ ತೇರ್ಗಡೆ ಯಾಗದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ನೋ ಡಿಟೆನ್ಷನ್ ನೀತಿಯನ್ನು ರದ್ದುಗೊಳಿಸಲು ಅಥವಾ ಮುಂದುವರಿಕೆ ನೀಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.
14 ವರ್ಷದೊಳಗಿನ ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯಬಾರದೆಂಬ ಸುಪ್ರೀಂಕೋರ್ಟ್ ತೀರ್ಪಿಗೆ ಈ ನಿರ್ಧಾರ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ಒಂದು ಬಾರಿ ಫೇಲಾದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು. ಖಾಸಗಿ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಉತ್ತಮವಾಗಿರಬೇಕೆಂಬ ಕಾರಣಕ್ಕೆ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು 5 ಇಲ್ಲವೇ 8 ನೇ ತರಗತಿಯಲ್ಲಿ ಅನುತ್ತೀರ್ಣಗೊಳಿಸುವ ಸಾಧ್ಯತೆ ಇದೆ. ಮರುಪರೀಕ್ಷೆಯಲ್ಲೂ ಪಾಸ್ ಆಗಲು ವಿಫಲವಾದರೆ, ಆ ವಿದ್ಯಾರ್ಥಿಗಳು ಅದೇ ತರಗತಿಯಲ್ಲಿ ಮುಂದುವ
ರಿಯಲು ಅವಕಾಶ ನೀಡಲಾಗುತ್ತದೆ.
ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಯಾವುದೇ ಶಾಲೆಯಿಂದ ಯಾವುದೇ ಮಗುವನ್ನು ಹೊರಹಾಕುವಂತಿಲ್ಲ
ಎಂದು ಸರಕಾರ ಹೇಳಿಕೊಂಡಿದೆ. ಆದರೆ ಖಾಸಗಿ ಶಾಲೆಗಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿಸುವಂತೆ ಪಾಲಕರ ಮೇಲೆ ಒತ್ತಡ ಹೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಪ್ರಾಥಮಿಕ ಶಿಕ್ಷಣದ ವಿಚಾರದಲ್ಲಿ
ಕೇಂದ್ರ ಸರಕಾರಕ್ಕಾಗಲಿ, ರಾಜ್ಯ ಸರಕಾರಗಳಿಗಾಗಲಿ ಇದುವರೆಗೆ ಸ್ಪಷ್ಟ ನೀತಿ ರೂಪಿಸಲು ಸಾಧ್ಯವಾಗಿಲ್ಲ. ಶಿಕ್ಷಣ ರಾಜ್ಯ ಪಟ್ಟಿಯಲ್ಲಿರುವುರಿಂದ ಬೇರೆ, ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನೀತಿ ಅನುಸರಿಸಲಾಗುತ್ತಿದೆ.
ಕಳೆದ ವರ್ಷ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 5, 8, 9 ಮತ್ತು 10ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಅಂತಿಮ ವಾಗಿ ಈ ಆದೇಶಕ್ಕೆ ಸುಪ್ರೀಕೋರ್ಟ್ ತಡೆ ನೀಡಿತ್ತು. ಇದರ ವಿಚಾರಣೆ ಬಾಕಿ ಇರುವಾಗಲೇ ಕೇಂದ್ರ ಸರಕಾರ ಹೊಸ ನೀತಿ ರೂಪಿಸಲು ಮುಂದಾಗಿದೆ. ಏನೇ ಆದರೂ ಪ್ರಾಥಮಿಕ ಶಿಕ್ಷಣದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಮತದ ನಿರ್ಧಾರವೊಂದಕ್ಕೆ ಬರಬೇಕಾಗಿದೆ.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ