Friday, 16th May 2025

Khalistan Terrorist: ಪೊಲೀಸ್‌ ಎನೌಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಉಗ್ರರು ಹತ

khalistan terrorist

ಲಖನೌ: ಮೂವರು ಖಲಿಸ್ತಾನಿ ಉಗ್ರರನ್ನು ಉತ್ತರಪ್ರದೇಶದಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿದೆ. ಈ ಮೂವರು ಪಂಜಾಬ್‌ನ ಗುರುದಾಸ್‌ಪುರದಲ್ಲಿ ಪೊಲೀಸರುನ್ನು ಗುರಿಯಾಗಿಸಿ ನಡೆದ ಗ್ರೆನೇಡ್‌ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಪಿಲಿಬಿಟ್‌ನಲ್ಲಿ ಉತ್ತರಪ್ರದೇಶ ಮತ್ತು ಪಂಜಾಬ್‌ ಪೊಲೀಸರು ಜಂಟೀ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಈ ವೇಳೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಮೂವರು ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿದ್ದಾರೆ.

ಹತ ಉಗ್ರರನ್ನು ಗುರ್ವಿಂದರ್‌ ಸಿಂಗ್‌(25),ವೀರೇಂದರ್‌ ಸಿಂಗ್‌ ಅಲಿಯಾಸ್‌ ರವಿ(23) ಹಾಗೂ ಜಸ್‌ಪ್ರಿತ್‌ ಸಿಂಗ್‌ ಅಲಿಯಾಸ್‌ ಪ್ರತಾಪ್‌ ಸಿಂಗ್‌(18) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗುರುದಾಸ್‌ಪುರ ಮೂಲದವರು ಎನ್ನಲಾಗಿದೆ. ಇನ್ನು ಘಟನೆ ಬಗ್ಗೆ ಉತ್ತರಪ್ರದೇಶದ ಪೊಲೀಸ್‌ ಮಹಾ ನಿರ್ದೇಶಕ ಅಮಿತಾಬ್‌ ಯಶ್‌ ಮಾತನಾಡಿದ್ದು, ಪಂಜಾಬ್‌ನ ಗುರುದಾಸ್‌ಪುರದ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಮೂವರು ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದರು. ಎನ್‌ಕೌಂಟರ್‌ನಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಿಎಚ್‌ಸಿ ಪುರನ್‌ಪುರಕ್ಕೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರು ಕೊನೆಯುಸಿರೆಳೆದಿದ್ದಾರೆ. ಅವರಿಂದ ಎರಡು ಎಕೆ-47 ರೈಫಲ್‌ಗಳು, ಎರಡು ಗ್ಲೋಕ್ ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಕಾನೂನು ಪ್ರಕ್ರಿಯೆಗಳು ಮುಂದುವರೆದಿದೆ ಎಂದು ಯಶ್ ಹೇಳಿದ್ದಾರೆ.

ಪಂಜಾಬ್ ಡಿಜಿಪಿ ಗೌರವ್ ಯಾದವ್ ಪಿಲಿಭಿತ್ ಎನ್‌ಕೌಂಟರ್ ಕುರಿತು ವಿವರ ನೀಡಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು,. ‘ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್‌ಎಫ್) ಭಯೋತ್ಪಾದನಾ ಘಟಕ’ ವಿರುದ್ಧ ನಮ್ಮ ತಂಡ ಸಿಕ್ಕ ಜಯ. ಯುಪಿ ಪೊಲೀಸ್ ಮತ್ತು ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಪೊಲೀಸರ ಮೇಲೆ ಮೂವರು ಆರೋಪಿಗಳು ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಮೂವರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಯಿತು. ಈ ಭಯೋತ್ಪಾದಕ ಘಟಕವು ಪಂಜಾಬ್‌ನ ಗಡಿ ಪ್ರದೇಶಗಳಲ್ಲಿನ ಪೊಲೀಸರನ್ನು ಗುರಿಯಾಗಿಸಿ ಮೇಲೆ ಗ್ರೆನೇಡ್ ದಾಳಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Terror Attack: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಶವವಾಗಿ ಪತ್ತೆ