ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ದ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು (IND vs AUS) ಗೆಲ್ಲುವ ಮೂಲಕ ಭಾರತ ತಂಡ ಕಾಂಗರೂ ನಾಡಿನಲ್ಲಿ ಸತತ ಮೂರನೇ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂದು ಪ್ರವಾಸಿ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 26 ರಂದು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ 295 ರನ್ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳಿಂದ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತ್ತು. ನಂತರ ಮೂರನೇ ಟೆಸ್ಟ್ ಪಂದ್ಯ ಮಳೆಯ ಕಾರಣ ಬಹುತೇಕ ಆಟ ವ್ಯರ್ಥವಾಗಿದ್ದು ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.
ಇದೀಗ ಉಭಯ ತಂಡಗಳು ಟೆಸ್ಟ್ ಸರಣಿಯಲ್ಲಿ 1-1 ಸಮಬಲವನ್ನು ಕಾಯ್ದುಕೊಂಡಿವೆ. ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಭಾರತ ತಂಡ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಒಂದರಲ್ಲಿ ಸೋಲು ಅನುಭವಿಸಿದರೂ ಟೀಮ್ ಇಂಡಿಯಾಗೆ ಫೈನಲ್ ಹಾದಿ ಕಠಿಣವಾಗಲಿದೆ.
ಕಾಂಗರೂ ನಾಡಿನಲ್ಲಿ ಹ್ಯಾಟ್ರಿಕ್ ಸಾಧಿಸುತ್ತೇನೆ: ರವೀಂದ್ರ ಜಡೇಜಾ
ನಾಲ್ಕನೇ ಟೆಸ್ಟ್ ಪಂದ್ಯದ ನಿಮಿತ್ತ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರವೀಂದ್ರ ಜಡೇಜಾ, ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಟೆಸ್ಟ್ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದ್ದೇವೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
“ಮೂರು ಪಂದ್ಯಗಳ ಬಳಿಕ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ನಾವು ಸದ್ಯ ಉತ್ತಮ ಸ್ಥಿತಿಯಲ್ಲಿದ್ದೇವೆ. ಈ ಸರಣಿಯು ಅತ್ಯಂತ ಆಸಕ್ತದಾಯಕವಾಗಿ ಸಾಗುತ್ತಿದೆ. ಒಂದು ವೇಳೆ ಕೊನೆಯ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದರೂ ನಾವು ಟೆಸ್ಟ್ ಸರಣಿಯನ್ನು ಮುಡಿಗೇರಿಸಿಕೊಳ್ಳಲಿವೆ. ಏಕೆಂದರೆ ನಾವು ಕೊನೆಯ ಎರಡು ಬಾರಿ ಇಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದ್ದೇವೆ. ಮೆಲ್ಬರ್ನ್ನಲ್ಲಿ ಉತ್ತಮ ಪ್ರದರ್ಶನ ತೋರಲು ನಮ್ಮನ್ನು ನಾವು ಮುಂದಕ್ಕೆ ತಳ್ಳಲು ಇದು ಅದ್ಭುತ ಅವಕಾಶ. ಹೌದು, ಕೊನೆಯ ಪಂದ್ಯದ ಬಗ್ಗೆ ನಮಗೆ ಸ್ವಲ್ಪ ತಲೆ ಬಿಸಿ ಇದೆ. ಆದರೆ, ಇದೀಗ ನಾವು ಬಾಕ್ಸಿಂಗ್ ಡೇ ಟೆಸ್ಟ್ ಕಡೆಗೆ ಗಮನವನ್ನು ಕೊಡುತ್ತೇವೆ. ಇದು ನಮ್ಮ ಪಾಲಿಗೆ ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ,” ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.
ಮೂರನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತ್ತು
ಬ್ರಿಸ್ಬೇನ್ನ ದಿ ಗಬ್ಬಾದಲ್ಲಿ ನಡದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಆರಂಭಿಕ ಎರಡು ದಿನಗಳ ಕಾಲ ಪ್ರಾಬಲ್ಯ ಸಾಧಿಸಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ 445 ರನ್ಗಳನ್ನು ಕಲೆ ಹಾಕಿತ್ತು. ಟ್ರಾವಿಸ್ ಹೆಡ್ ಮತ್ತು ಸ್ಟೀವನ್ ಸ್ಮಿತ್ ತಲಾ ಶತಕಗಳನ್ನು ಸಿಡಿಸಿದ್ದರು. ಆದರೆ, ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಮಳೆಯ ಕಾರಣ ಭಾರತ ತಂಡ ಸೋಲಿನಿಂದ ತಪ್ಪಿಸಿಕೊಂಡಿತ್ತು ಹಾಗೂ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.
ಈ ಸುದ್ದಿಯನ್ನು ಓದಿ: Ravindra Jadeja : 3000 ರನ್ 300 ವಿಕೆಟ್; ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ