Wednesday, 14th May 2025

Viral Video: ರಾಂಗ್ ಸೈಡ್‍ನಲ್ಲಿ ಚಲಿಸಿದ ಬಸ್: ವೈರಲ್‌ ವಿಡಿಯೊ ಇಲ್ಲಿದೆ

Viral Video

ಬೆಂಗಳೂರು: ನಿಯಮವನ್ನು ಉಲ್ಲಂಘಿಸುವುದು, ಅಜಾಗರೂಕತೆಯಿಂದ ವಾಹನ ಚಲಾಯಿಸುವುದು  ಅನಾಹುತಕ್ಕೆ ಕಾರಣವಾಗುತ್ತದೆ ಎಂದು ತಿಳಿದಿದ್ದರೂ ಕೂಡ ಕೆಲವು ಚಾಲಕರು ಅದೇ ತಪ್ಪನ್ನು ಮಾಡುತ್ತಾರೆ. ಇದರಿಂದ ತಮ್ಮ ಜೀವಕ್ಕೆ ಮಾತ್ರವಲ್ಲ ಅನೇಕ ಜನರ ಜೀವಕ್ಕೆ ಆಪತ್ತು ತರುತ್ತಾರೆ. ಇದೀಗ ಅಂತಹದೊಂದು ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ  ಘಟನೆಯೊಂದರಲ್ಲಿ ಚಾಲಕನು ರಸ್ತೆಯ ರಾಂಗ್ ಸೈಡ್‍ನಲ್ಲಿ ಬಸ್‍ ಅನ್ನು ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video) ಆಗಿದೆ.

ಈ ಆತಂಕಕಾರಿ ಕೃತ್ಯದ ವಿಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಳ್ಳಲಾಗಿದೆ. ಬಸ್ ರಸ್ತೆಯ ರಾಂಗ್ ಸೈಡ್‍ನಲ್ಲಿ ಪ್ರಯಾಣಿಸಿದೆ. ಚಾಲಕ ವಿಚಲಿತನಾಗದೆ ಬಸ್ ಅನ್ನು ಓಡಿಸಿದ್ದಾನೆ. ನೈಸ್ ರಸ್ತೆಯಲ್ಲಿ, ವಿಶೇಷವಾಗಿ ಬನ್ನೇರುಘಟ್ಟ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ನಡುವೆ ಈ ಘಟನೆ ನಡೆದಿದೆ.

ಬೆಂಗಳೂರು ನಗರ ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿರುವ ಪೋಸ್ಟ್, ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. “ಅಪಾಯಕಾರಿ ಡ್ರೈವಿಂಗ್ ಅಲರ್ಟ್! ನೈಸ್ ರಸ್ತೆಯಲ್ಲಿ ರಾಂಗ್ ವೇಯಲ್ಲಿ ಚಲಿಸುತ್ತಿರುವ ಬಸ್! ಇದು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಚಾಲಕ ಮತ್ತು ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ರಸ್ತೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡೋಣ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ  ಆಕ್ರೋಶವನ್ನು ಹುಟ್ಟುಹಾಕಿದ್ದು, ಅನೇಕರು ಬಸ್ ಚಾಲಕನ ಅಜಾಗರೂಕ ನಡವಳಿಕೆಯನ್ನು ಟೀಕಿಸಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವಾರು ನೆಟ್ಟಿಗರು ಕರೆ ನೀಡಿದ್ದಾರೆ. “ಇದನ್ನು ಅಪರಾಧಿ ನರಹತ್ಯೆ ಎಂದು ಪರಿಗಣಿಸಬೇಕು” ಎಂದು ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಬೆಂಗಳೂರನ್ನು ಹಾಡಿಹೊಗಳಿದ ದಿಲ್ಲಿವಾಲಾ; ಕಾರಣವೇನು?

ಇನ್ನೊಬ್ಬರು, “ಇದು ಮನಸ್ಸು ಸರಿ ಇಲ್ಲದವರು ಮಾಡುವ ಕೆಲಸ. ಈ ಬಸ್ ಚಾಲಕ ಮಾನಸಿಕವಾಗಿ ಸ್ಥಿರವಾಗಿಲ್ಲ. ಕೂಡಲೇ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು’ʼ ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು, “ಅಪಘಾತದ ಸಂದರ್ಭದಲ್ಲಿ ರಾಂಗ್ ಸೈಡ್ ವಾಹನ ಚಲಾಯಿಸುವವರ ವಿರುದ್ಧ ಕೊಲೆ ಯತ್ನದ ಆರೋಪ ಹೊರಿಸಬೇಕು” ಎಂದಿದ್ದಾರೆ. ಈ ವಿಡಿಯೊವನ್ನು ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.