ಬೆಂಗಳೂರು: ಗಣ್ಯರ ಹೆಸರು ಹೇಳಿಕೊಂಡು ಕೋಟ್ಯಂತರ ರೂ. ಮೌಲ್ಯದ ಆಭರಣ ಖರೀದಿಸಿ ಹಣ ಪಾವತಿಸದೆ ವಂಚಿಸಿದ್ದ ಮಾಜಿ ಸಚಿವ, ಕೋಲಾರದ ವರ್ತೂರು ಪ್ರಕಾಶ್ (Varturu Prakash) ಅವರ ಆಪ್ತೆ ಎಂದು ಹೇಳಿಕೊಂಡಿದ್ದ ಮಹಿಳೆಯನ್ನು ಪುಲಿಕೇಶಿನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಮಹಿಳೆಯನ್ನು ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಎಂದು ಗುರುತಿಸಲಾಗಿದೆ.
ಮೈಸೂರಿನಲ್ಲಿ ಶ್ವೇತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯನ್ನು ಇದೀಗ ಬೆಂಗಳೂರಿಗೆ ಕರೆ ತಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಸುಮಾರು 2.42 ಕೋಟಿ ರೂ. ಮೌಲ್ಯದ ಆಭರಣವನ್ನು ಖರೀದಿಸಿ ಶ್ವೇತಾ ವಂಚಿಸಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸಿಪಿ ಗೀತಾ ನೇತೃತ್ವದ ತಂಡವು ಮೈಸೂರಿನಲ್ಲಿ ಆಕೆಯನ್ನು ಬಂಧಿಸಿದೆ.
2.945 ಕೆಜಿ ಚಿನ್ನವನ್ನು ನವರತ್ನ ಜ್ಯುವೆಲರ್ಸ್‌ನಿಂದ ಖರೀದಿಸಿದ ಶ್ವೇತಾ ಈ ವೇಳೆ ವರ್ತೂರು ಪ್ರಕಾಸ್ ಅವರ ವಿಳಾಸ ನೀಡಿದ್ದಳು. ಹಾಗಾಗಿ ಈ ಪ್ರಕರಣದ ಜತೆಗೆ ಇದೀಗ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರು ಥಳುಕು ಹಾಕಿಕೊಂಡಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ವೇತಾ ಗೌಡ ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಹೇಳಿ ಕೆಲ ಚಿನ್ನ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ವಂಚಿಸುತ್ತಿದ್ದಳು. ನವರತ್ನ ಜ್ಯುವೆಲ್ಲರಿ ಶಾಪ್ ಮಾಲಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಶ್ವೇತಾ ಬಳಿಕ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿದ್ದಳು. ನಂತರ ಚಿನ್ನವನ್ನು ಮತ್ತು ಹಣವನ್ನೂ ವಾಪಾಸ್ ನೀಡದೆ ವಂಚಿಸಿದ್ದಾಳೆ ಎಂದು ದೂರುನಲ್ಲಿ ತಿಳಿಸಲಾಗಿದೆ. ಗಣ್ಯರ ಜತೆಗಿರುವ ಫೋಟೊ ದುರ್ಬಳಕೆ ಮಾಡಿ ಆಕೆ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ವರ್ತೂರು ಪ್ರಕಾಶ್ ಹೇಳಿದ್ದೇನು?
ಈ ಕುರಿತು ವರ್ತೂರು ಪ್ರಕಾಶ್ ಸ್ಪಷ್ಟನೆ ನೀಡಿದ್ದು, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ʼʼಸೋಮವಾರ (ಡಿ. 23) ವಿಚಾರಣೆಗೆ ಬನ್ನಿ ಎಂದು ಪೊಲೀಸರು ಕರೆದಿದ್ದಾರೆ. ಅದರಂತೆ ಠಾಣೆಗೆ ಹೋಗಿ ಮಾಹಿತಿ ಕೊಡ್ತೀನಿ. 3-4 ತಿಂಗಳ ಮುಂಚೆ ನಮ್ಮ ಮನೆಗೆ ಬಂದಿದ್ದ ಅವರು ಸಮಾಜ ಸೇವಕಿ ಅಂತ ಪರಿಚಯ ಮಾಡಿಕೊಂಡಿದ್ದರು. ಆಕೆ ನನಗೆ ತಿಳಿಸಿ ಒಡವೆ ಖರೀದಿಸಿಲ್ಲ. ಮನೆ ಹತ್ರ ಜನ ಬಂದ ಹಾಗೇ ಆಕೆಯೂ ಬಂದಿದ್ದಾರೆʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Lokayukta Raid: ನಾಲ್ಕು ಲಕ್ಷ ರೂ. ಲಂಚಕ್ಕೆ ಬೇಡಿಕೆ; ಕಂದಾಯ ನಿರೀಕ್ಷಕ ‘ರೆಡ್ ಹ್ಯಾಂಡ್’ ಆಗಿ ಲೋಕಾಯುಕ್ತ ಬಲೆಗೆ!