Saturday, 10th May 2025

Justin Trudeau: ಕೆನಡಾ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾದ ಎನ್‌ಡಿಪಿ; ರಾಜಿನಾಮೆ ನೀಡ್ತಾರಾ ಟ್ರುಡೋ ?

Justin Trudeau

ಒಟ್ಟಾವಾ: ಕೆನಡಾ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ಆಗಿದ್ದು, ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಮಾಜಿ ಮಿತ್ರ ನ್ಯೂ ಡೆಮಾಕ್ರಟಿಕ್‌ ಪಾರ್ಟಿ (NDP) ನಾಯಕ ಜಗ್ಮೀತ್‌ ಸಿಂಗ್‌ (Jagmeet Singh) ಸರ್ಕಾರವನ್ನು ಉರುಳಿಸಲು ತಮ್ಮ ಪಕ್ಷ ಅವಿಶ್ವಾಸ ಮಂಡಿಸುವುದಾಗಿ ಘೋಷಿಸಿದ್ದಾರೆ (Canada Government).

ಜಗ್ಮೀತ್‌ ಸಿಂಗ್‌ ಶುಕ್ರವಾರ ಬಹಿರಂಗವಾಗಿ ಘೋಷಣೆ ಮಾಡಿ ಈ ವಿಷಯವನ್ನು ಟ್ವೀಟ್‌ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರ ಪಕ್ಷವು ಟ್ರುಡೊ ಅವರ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಬಹಿರಂಗ ಪತ್ರದ ಮೂಲಕ ಸಿಂಗ್ ಈ ಘೋಷಣೆ ಮಾಡಿದರು. ಪತ್ರದಲ್ಲಿ ಸಿಂಗ್ ಅವರು ಟ್ರುಡೊ ಅವರ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ಜಸ್ಟಿನ್ ಟ್ರುಡೊ ಅವರು ಪ್ರಧಾನ ಮಂತ್ರಿಯ ದೊಡ್ಡ ಕೆಲಸದಲ್ಲಿ ವಿಫಲರಾಗಿದ್ದಾರೆ ಜನರಿಗಾಗಿ ಕೆಲಸ ಮಾಡಲು ಅವರು ಶಕ್ತಿಯುತವಾಗಿಲ್ಲ ಎಂದು ಸಿಂಗ್‌ ಉಲ್ಲೇಖಿಸಿದ್ದಾರೆ.

ಸದ್ಯ ಕೆನಡಾದ ಹೌಸ್ ಆಫ್ ಕಾಮನ್ಸ್ ಚಳಿಗಾಲದ ವಿರಾಮದಲ್ಲಿದೆ. ಅಂದರೆ 2025ರ ಜನವರಿ 27ರಂದು ಸಂಸದರು ಹಿಂದಿರುಗುವವರೆಗೆ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸಾಧ್ಯವಾಗುವುದಿಲ್ಲ. ಈತನ್ಮಧ್ಯೆ, ಟ್ರೂಡೊ ತಮ್ಮ ತಂಡದ ಮೂರನೇ ಒಂದು ಭಾಗವನ್ನು ಬದಲಿಸುವ ಮೂಲಕ ಶುಕ್ರವಾರ ಮಹತ್ವದ ಕ್ಯಾಬಿನೆಟ್ ಪುನರ್‌ರಚನೆಯನ್ನು ಘೋಷಿಸಿದ್ದಾರೆ.

ಕೆನಡಾದ ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಇತ್ತೀಚೆಗೆ ಡಿಡೀರ್‌ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ಕೂಡ ರಾಜಿನಾಮೆ ನೀಡಬೇಕೆಂಬ ಒತ್ತಡ ಜೋರಾಗಿದೆ. ಎನ್‌ಡಿಪಿ ಪಕ್ಷದ ಬೆಂಬಲದ ಮೇರೆಗೆ ಸರ್ಕಾರ ರಚಿಸಿದ್ದ ಟ್ರುಡೋ ಅವರ ಲಿಬರಲ್‌ ಪಕ್ಷ ಬಹುಮತವನ್ನು ಹೊಂದಿಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಟ್ರುಡೋ ನೇತೃತ್ವದ ಲಿಬರಲ್‌ ಪಕ್ಷ 157 ಸ್ಥಾನವನ್ನು ಗೆದ್ದರೆ , ವಿರೋಧಿ ಕನ್ಸ್‌ರ್ವೇಟೀವ್‌ ಪಕ್ಷ 121 ಹಾಗೂ ಎನ್‌ಡಿಪಿ 24 ಸ್ಥಾನವನ್ನು ಗೆದ್ದುಕೊಂಡಿತ್ತು. ಟ್ರುಡೋ ಅವರು ಎನ್‌ಡಿಪಿ ಸಂಸದರ ಬೆಂಬಲದೊಂದಿಗೆ ಮೈತ್ರಿ ಸರ್ಕಾರವನ್ನು ರಚಿಸಿ ಅಧಿಕಾರಕ್ಕೆ ಬಂದಿದ್ದರು. ಇದೀಗ ಅವರು ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಇಲ್ಲ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನೂ ಓದಿ : Indian student Murder: ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಇರಿದು ಕೊಲೆ