Saturday, 17th May 2025

R Ashwin: ವಿದಾಯದ ಬಳಿಕ ತಮಗೆ ಕರೆ ಮಾಡಿದ್ದ ಇಬ್ಬರು ದಿಗ್ಗಜರನ್ನು ರಿವೀಲ್‌ ಮಾಡಿದ ಅಶ್ವಿನ್‌!

R Ashwin: Ravichandran Ashwin REVEALS Two Legends Who Called Him After His Retirement

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ತಮಗೆ ಕರೆ ಮಾಡಿದ್ದ ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರ ಹೆಸರುಗಳನ್ನು ಟೀಮ್‌ ಇಂಡಿಯಾ ಮಾಜಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (R Ashwin) ಬಹಿರಂಗಪಡಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಮುಗಿದ ನಂತರ ಬುಧವಾರ ತಮಿಳುನಾಡು ಮೂಲದ ಆರ್‌ ಅಶ್ವಿನ್‌ ಅವರು ಇಂಟರ್‌ನ್ಯಾಷನಲ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಶುಕ್ರವಾರ ತಮ್ಮ ಎಕ್ಸ್‌ ಖಾತೆಯಲ್ಲಿ ತಮ್ಮ ಫೋನ್‌ನ ಕರೆಗಳಿಗೆ ಸಂಬಂಧಿಸಿದ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡಿದ್ದ ಆರ್‌ ಅಶ್ವಿನ್‌ ತನಗೆ ವೈಯಕ್ತಿಕ ಕರೆ ಮಾಡಿದ್ದ ಇಬ್ಬರು ದಿಗ್ಗಜರು ಯಾರೆಂದು ಬಹಿರಂಗಪಡಿಸಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮತ್ತು 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌ ತಮಗೆ ಕರೆ ಮಾಡಿದ್ದರು ಹಾಗೂ ತಮ್ಮ ನಿವೃತ್ತಿ ಬದುಕಿಗೆ ಶುಭ ಹಾರೈಸಿದ್ದರು ಎಂದು ಟೀಮ್‌ ಇಂಡಿಯಾ ಮಾಜಿ ಸ್ಪಿನ್ನರ್‌ ಹೇಳಿಕೊಂಡಿದ್ದಾರೆ.

“ನನ್ನ ಬಳಿ ಸ್ಮಾರ್ಟ್‌ ಫೋನ್‌ ಇದ್ದರೆ, ಭಾರತೀಯ ಕ್ರಿಕೆಟಿಗನಾಗಿ ವೃತ್ತಿ ಜೀವನದ ಕೊನೆಯ ದಿನ ನಿಮ್ಮ ಫೋನ್‌ಗೆ ಯಾರೆಲ್ಲಾ ದಿಗ್ಗಜರು ಕರೆ ಮಾಡಿರಬಹುದೆಂದು 25 ವರ್ಷಗಳ ಹಿಂದೆ ಯಾರಾದರೂ ನನಗೆ ಹೇಳಿದ್ದರೆ, ಆಗ ನನಗೆ ಹೃದಯಾಘಾತವಾಗಿರುತ್ತಿತ್ತು. ಧನ್ಯವಾದಗಳು, ಸಚಿನ್‌ ತೆಂಡೂಲ್ಕರ್‌ ಪಾಜಿ ಮತ್ತು ಕಪಿಲ್‌ ದೇವ್‌ ಪಾಜಿ. ಆಶೀರ್ವದಿಸಲ್ಪಟ್ಟಿದ್ದೇನೆ,” ಎಂದು ತಮ್ಮ ಫೋನ್‌ ಕರೆಗಳ ಲಾಗ್‌ ಸ್ಕ್ರೀನ್‌ ಶಾಟ್‌ಗೆ ಈ ರೀತಿಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಅಶ್ವಿನ್‌ ವಿದಾಯಕ್ಕೆ ಕಪಿಲ್‌ ದೇವ್

ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡುವ ವೇಳೆ ದಿಗ್ಗಜ ಕಪಿಲ್‌ ದೇವ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆರ್‌ ಅಶ್ವಿನ್‌ ಅವರ ನಿರ್ಧಾರದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು. ಅಶ್ವಿನ್‌ ಮುಖದಲ್ಲಿ ಸಂತೋಷ ಕಾಣುತ್ತಿರಲಿಲ್ಲ ಹಾಗೂ ಮತ್ತೊಂದು ಕಡೆಯಲ್ಲಿ ಅವರ ಮನಸಿನಲ್ಲಿ ನೋವು ಕಂಡಿತ್ತು ಎಂದು ಮಾಜಿ ನಾಯಕ ಹೇಳಿದ್ದರು.

“ಭಾರತೀಯ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಹೇಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೇಗೆ ವಿದಾಯ ಹೇಳುತ್ತಾರೆಂಬ ಬಗ್ಗೆ ನನಗೆ ಶಾಕ್‌ ಆಗಿದೆ. ಇದರಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ತುಂಬಾ ನಿರಾಶೆಯಾಗಿದೆ ಹಾಗೂ ಅಶ್ವಿನ್‌ ಅವರ ಮುಖದಲ್ಲಿಯೂ ನೋವು ಕಾಣಿಸುತ್ತಿತ್ತು. ಅವರ ಮುಖದಲ್ಲಿ ಸಂತೋಷ ಇರಲಿಲ್ಲ, ಇದು ನಿಜಕ್ಕೂ ಬೇಸರದ ವಿಷಯ. ಇದಕ್ಕಿಂತ ಅದ್ಭುತ ವಿದಾಯಕ್ಕೆ ಅವರು ಅರ್ಹರಾಗಿದ್ದಾರೆ,” ಎಂದು ಕಪಿಲ್‌ ದೇವ್‌ ಬೇಸರ ವ್ಯಕ್ತಪಡಿಸಿದ್ದರು.

ನಿಮ್ಮ ಎರಡನೇ ಇನಿಂಗ್ಸ್‌ಗೆ ಶುಭವಾಗಲಿ: ತೆಂಡೂಲ್ಕರ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆರ್‌ ಅಶ್ವಿನ್‌ಗೆ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ಬರೆದಿದ್ದರು.

“ಅಶ್ವಿನ್, ನೀವು ನಿಮ್ಮ ಮನಸ್ಸು ಮತ್ತು ಹೃದಯದಿಂದ ಪರಿಪೂರ್ಣ ಹೊಂದಾಣಿಕೆಯಿಂದ ಆಟವನ್ನು ಹೇಗೆ ಸಂಪರ್ಕಿಸಿದ್ದೀರಿ ಎಂಬುದನ್ನು ನಾನು ಯಾವಾಗಲೂ ಮೆಚ್ಚುತ್ತೇನೆ. ಕೇರಂ ಬಾಲ್ ಅನ್ನು ಪರಿಪೂರ್ಣಗೊಳಿಸುವುದರಿಂದ ಹಿಡಿದು ನಿರ್ಣಾಯಕ ರನ್‌ಗಳ ಕೊಡುಗೆಯವರೆಗೆ, ನೀವು ಯಾವಾಗಲೂ ಗೆಲ್ಲುವ ಮಾರ್ಗವನ್ನು ಕಂಡುಕೊಂಡಿದ್ದೀರಿ. ನೀವು ಭರವಸೆಯ ಪ್ರತಿಭೆಯಿಂದ ಹಿಡಿದು ಭಾರತದ ಅತ್ಯುತ್ತಮ ಮ್ಯಾಚ್‌ ವಿನ್ನರ್‌ಗಳಲ್ಲಿ ಒಬ್ಬರಾಗಿ ನಿಮ್ಮ ಪಯಣವು ನಿಜವಾದ ಶ್ರೇಷ್ಠತೆಯನ್ನು ತೋರಿಸುತ್ತದೆ ಮತ್ತು ನಿಮ್ಮ ಪರಂಪರೆಯು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಿಮ್ಮ ಎರಡನೇ ಇನಿಂಗ್ಸ್‌ಗೆ ನಿಮಗೆ ಶುಭವಾಗಲಿ,” ಸಚಿನ್ ತೆಂಡೂಲ್ಕರ್ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retirement: ʻಅಶ್ವಿನ್‌ರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲʼ-ಬದ್ರಿನಾಥ್‌ ಗಂಭೀರ ಆರೋಪ!